ಸಾರಾಂಶ
ನಮ್ಮನ್ನು ನೀವು (ಬಿಜೆಪಿ) ಕೆಣಕಬೇಡಿ. ನಮ್ಮನ್ನು ಕೆಣಕಿದರೆ ನಿಮ್ಮ ಅಡ್ರೆಸ್ ಸಹ ಸಿಗಲ್ಲ ಹುಷಾರಾಗಿರಿ... ಎಂದು ಬಿಜೆಪಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ: ನಮ್ಮನ್ನು ನೀವು (ಬಿಜೆಪಿ) ಕೆಣಕಬೇಡಿ. ನಮ್ಮನ್ನು ಕೆಣಕಿದರೆ ನಿಮ್ಮ ಅಡ್ರೆಸ್ ಸಹ ಸಿಗಲ್ಲ ಹುಷಾರಾಗಿರಿ... ಎಂದು ಬಿಜೆಪಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು. ಮೊದಲು ದೇಶ. ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸಿದ್ಧ. ಪಹಲ್ಗಾಮ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ಅಧಿವೇಶನ ಕರೆಯಿರಿ ಎಂದು ಇದೇ ವೇಳೆ ಆಗ್ರಹಿಸಿದರು.
ಬೆಲೆ ಏರಿಕೆ ಖಂಡಿಸಿ ಹಾಗೂ ಸಂವಿಧಾನ ರಕ್ಷಣೆಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು. ಕಿಕ್ಕಿರಿದು ತುಂಬಿದ್ದ ಸಮಾವೇಶದಲ್ಲಿ 25 ನಿಮಿಷಕ್ಕೂ ಅಧಿಕ ಕಾಲ ಕೇಂದ್ರ ಹಾಗೂ ಬಿಜೆಪಿ ವಿರುದ್ಧ ಅಬ್ಬರಿಸಿದ ಖರ್ಗೆ ಅವರು, ಕೇಂದ್ರ ಸರ್ಕಾರದ ತಪ್ಪುಗಳನ್ನು ಬಿಚ್ಚಿಟ್ಟರು.
ದೇಶಭಕ್ತಿಯನ್ನು ನಮಗೆ ಹೇಳಿಕೊಡಬೇಡಿ. ನೀವಷ್ಟೇ ದೇಶಭಕ್ತರಾ? ನಾವೆಲ್ಲ ದೇಶದ್ರೋಹಿಗಳಾ? ಎಂದು ಕಿಡಿಕಾರಿದ ಅವರು, ಬ್ರಿಟಿಷರು ಇದ್ದಾಗ ಅವರ ಕೈ ಕೆಳಗೆ ಕೆಲಸ ಮಾಡುತ್ತಿದ್ದವರು ಬಿಜೆಪಿಗರು. ಆಗ ದೇಶದಲ್ಲಿ ಸುಮ್ಮನೆ ಮಲಗಿಕೊಂಡಿದ್ದರು. ಈಗ ನಮಗೆ ದೇಶಭಕ್ತಿ ಹೇಳಿಕೊಡಲು ಬರುತ್ತಿದ್ದಾರೆ. ನಾವು ಯಾರ ಬಳಿಯೂ ಬಗ್ಗಿಲ್ಲ; ಬಗ್ಗುವುದೂ ಇಲ್ಲ. ಪ್ರಸಂಗ ಬಂದರೆ ದೇಶಕ್ಕಾಗಿ ಜೀವ ಕೊಡಲು ಸಿದ್ಧ. ನಮ್ಮನ್ನು ಕೆಣಕಲು ಹೋಗಬೇಡಿ. ಕೆಣಕಿದರೆ ನಿಮ್ಮ ಅಡ್ರೆಸ್ ಸಹ ಸಿಗಲ್ಲ. ಹಾಗೆ ಆಗುತ್ತದೆ ನಿಮ್ಮ ಪರಿಸ್ಥಿತಿ. ಜನತೆಯೇ ಹಾಗೆ ಮಾಡುತ್ತಾರೆ ಎಂದು ಗುಡುಗಿದರು.
ವಿಶೇಷ ಅಧಿವೇಶನ ಕರೆಯಿರಿ : ಪಹಲ್ಗಾಮ್ ಘಟನೆ ಕುರಿತಂತೆ ವಿಶೇಷ ಅಧಿವೇಶನ ಕರೆಯಿರಿ. ದೇಶದ ಹಿತಕ್ಕಾಗಿ ಎಲ್ಲ ಬಗೆಯ ಸಹಕಾರ ಬೆಂಬಲ ನೀಡುತ್ತೇವೆ. ಆದರೆ, ಅಲ್ಲಿ ನಡೆದ ನರಮೇಧಕ್ಕೆ ಕಾರಣ ಯಾರು? ಲೋಪದೋಷ ಯಾರದ್ದು? ಇದಕ್ಕೆ ಕಾರಣರಾದವರು ಯಾರು? ಪಹಲ್ಗಾಮ್‌ನಲ್ಲಿ ಮೂರು ಬಗೆಯ ಭದ್ರತೆ ಇರುತ್ತದೆ. ಆದರೂ ಅದು ಹೇಗೆ ದಾಳಿ ನಡೆಯಿತು ಎಂಬುದರ ಬಗ್ಗೆಯೆಲ್ಲ ಅಧಿವೇಶನದಲ್ಲಿ ಚರ್ಚೆ ನಡೆಸೋಣ ಎಂದ ಅವರು, ಇದನ್ನೆಲ್ಲ ಜನರ ಮುಂದೆ ಇಡೋಣ ಎಂದರು. ದೇಶದ ಹಿತಕ್ಕಾಗಿ ಕೇಂದ್ರ ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.
ರಕ್ಷಣೆ ಕೊಡಿ: ಪಹಲ್ಗಾಮ್ ಘಟನೆ ನಡೆದ ವೇಳೆ ಸರ್ವ ಪಕ್ಷ ಸಭೆ ಕರೆಯಲಾಗಿತ್ತು. ಆದರೆ, ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಬರಲಿಲ್ಲ. ಮೋದಿ ಅವರು ಬಿಹಾರಕ್ಕೆ ಹೋಗಿ ಭಾಷಣ ಮಾಡಿದರು. ನಿಮ್ಮ ಭಾಷಣ ಯಾರಿಗೆ ಬೇಕು ಸ್ವಾಮಿ, ನಮಗೆ ರಕ್ಷಣೆ ಕೊಡಿ. ದೇಶಕ್ಕೆ ರಕ್ಷಣೆ ಕೊಡಿ ಅಷ್ಟೇ ಸಾಕು. ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿರಬೇಕು. ಮೊದಲು ದೇಶ, ನಂತರ ಧರ್ಮ, ನಂತರ ಪಕ್ಷ. ದೇಶಕ್ಕಾಗಿ ಎಲ್ಲರೂ ಒಟ್ಟಾಗಬೇಕು ಎಂಬುದು ನಮ್ಮ ಗುರಿ ಎಂದರು.
ಕೇಂದ್ರದಿಂದ ತೋರಿಕೆಗಷ್ಟೇ ಜಾತಿಗಣತಿ: ಖರ್ಗೆ
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಕೇವಲ ತೋರಿಕೆಗಾಗಿ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದ್ದು, ಜಾತಿಗಣತಿ ಪೂರ್ಣಗೊಳಿಸಿ ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶ ಮೋದಿ ಸರ್ಕಾರಕ್ಕಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಗುರುವಾರ ಬಿಬಿಎಂಪಿಯ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಜಾತಿಗಣತಿ ಮಾಡಬೇಕೆಂದು ಉದ್ದೇಶಿಸಿದ್ದರೆ ಬಜೆಟ್‌ನಲ್ಲಿ ಸಮರ್ಪಕ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ, ಕೇವಲ 515 ಕೋಟಿ ರು. ಮೀಸಲಿಟ್ಟಿದೆ. ಕರ್ನಾಟಕ ರಾಜ್ಯವೇ ಜಾತಿ ಗಣತಿಗೆ 165 ಕೋಟಿ ರು. ಖರ್ಚು ಮಾಡಿದೆ. ಕೇಂದ್ರ ಸರ್ಕಾರ ಮೀಸಲಿಟ್ಟಿರುವ ಅನುದಾನದಲ್ಲಿ ಉತ್ತರ ಪ್ರದೇಶದಂಥ ರಾಜ್ಯದ ಜಾತಿಗಣತಿ ನಡೆಸಲೂ ಸಾಕಾಗುವುದಿಲ್ಲ ಎಂದು ಹೇಳಿದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2010ರ ಸೆಪ್ಟಂಬರ್‌ನಲ್ಲೇ ಕೇಂದ್ರ ಸರ್ಕಾರ ಜಾತಿ ಗಣತಿ ಕೈಗೊಂಡಿತ್ತು. 2016ರಲ್ಲಿ ಜಾತಿ ಗಣತಿ ಪೂರ್ಣಗೊಳಿಸಲಾಗಿತ್ತು. ಆದರೆ, ಆ ವರದಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಕಳೆದ 2023ರಲ್ಲಿ ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. 2 ವರ್ಷವಾದರೂ ಯಾವುದೇ ನಿರ್ಧಾರ ಮಾಡಿಲ್ಲ. ಇದೀಗ ವಿಶೇಷ ಸಂಪುಟ ಸಭೆ ನಡೆಸಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರ ನಾವು ಕೇಳಿದಾಗ ಪರಿಗಣಿಸುವುದಿಲ್ಲ. ಈಗ ಅವರಿಗೆ ಬೇಕಾದಾಗ ಘೋಷಿಸಿ ಲಾಭ ಪಡೆದುಕೊಳ್ಳಲು ಮುಂದಾಗುತ್ತಾರೆ ಎಂದರು.
ಬೀದಿಗಿಳಿದು ಹೋರಾಟ:
ಜಾತಿಗಣತಿಯೊಂದಿಗೆ, ಖಾಸಗಿ ಸಂಸ್ಥೆಗಳಲ್ಲಿ ಎಸ್ಸಿ,ಎಸ್ಟಿ ಹಾಗೂ ಒಬಿಸಿಗೆ ಮೀಸಲಾತಿ ಜಾರಿ ಹಾಗೂ ಶೇ.50ರಷ್ಟು ಮೀಸಲಾತಿ ಮಿತಿ ತೆಗೆದು ಹಾಕಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜನ ರಸ್ತೆಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಬಿಟ್ಟರೆ ಬೇರೆ ಯಾವುದೇ ಪಕ್ಷಗಳಿಗೆ ಬಡವರ ಬಗ್ಗೆ ಅನುಕಂಪವಿಲ್ಲ. ಮಹಿಳೆಯರಿಗೆ ರಾಜಕೀಯ ಮತ್ತು ಉದ್ಯೋಗದಲ್ಲಿ ಶೇ.33ರಷ್ಟು ಮೀಸಲಾತಿ ನೀಡಬೇಕೆಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಾಯ್ದೆ ಮಾಡಲಾಗಿದೆ. ಆ ಬಗ್ಗೆ ಇನ್ನೂ ಕೇಂದ್ರ ಸರ್ಕಾರ ಚಿಂತನೆ ಮಾಡಿಲ್ಲ. ಕಾಂಗ್ರೆಸ್‌ನ ಒಳ್ಳೆಯ ಕೆಲಸಗಳಿಗೆ ಬಿಜೆಪಿ ಅಡ್ಡಿಪಡಿಸುತ್ತಿದೆ. ಜನ ಆಕ್ರೋಶ ವ್ಯಕ್ತಪಡಿಸಿದಾಗ ಕಾಂಗ್ರೆಸ್ ಜಾರಿಗೊಳಿಸಿ ಕಾನೂನುಗಳನ್ನು ನೆನಪಿಸಿಕೊಂಡು ಮುಂದೆ ಬರುತ್ತಾರೆ ಎಂದು ಹೇಳಿದರು.
ಡಾ.ಅಂಬೇಡ್ಕರ್ ಸಂವಿಧಾನ ಮಾತ್ರ ಬರೆದಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಮಿಕರ ಏಳಿಗೆಗಾಗಿ ಸಾಕಷ್ಟು ಬಿಲ್ಲುಗಳನ್ನು ರೂಪಿಸಿದ್ದರು. ಬ್ರಿಟಿಷರು ಭಾರತೀಯ ಕಾರ್ಮಿಕರನ್ನು 12 ರಿಂದ 14 ತಾಸು ದುಡಿಸಿಕೊಳ್ಳುತ್ತಿದ್ದರು. ಆಗ ಬ್ರಿಟಿಷರ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿ ಭಾರತೀಯ ಕಾರ್ಮಿಕರಿಗೆ 8 ತಾಸು ಕೆಲಸ ಕಾನೂನು ಜಾರಿಗೆ ತಂದರು. ಈ ರೀತಿ ಜಾರಿಗೊಳಿಸಿದ ಹಲವು ಕಾನೂನುಗಳನ್ನು ತಿದ್ದುಪಡಿಗೊಳಿಸಿ ಕಾರ್ಮಿಕ ವಿರೋಧಿ ಆಡಳಿತವನ್ನು ಬಿಜೆಪಿ ಸರ್ಕಾರ ನಡೆಸುತ್ತಿದೆ. ಜತೆಗೆ ಶ್ರೀಮಂತರಿಗೆ, ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ದೂರಿದರು.