ಪಹಲ್ಗಾಂನಲ್ಲಿ ಧರ್ಮ ಕೇಳಿ ಮಾರಣಹೋಮ ಮಾಡಲಾಯಿತು : ಮಲ್ಲಿಕಾರ್ಜುನ ಖರ್ಗೆ

| N/A | Published : Apr 27 2025, 01:35 AM IST / Updated: Apr 27 2025, 04:09 AM IST

ಪಹಲ್ಗಾಂನಲ್ಲಿ ಧರ್ಮ ಕೇಳಿ ಮಾರಣಹೋಮ ಮಾಡಲಾಯಿತು : ಮಲ್ಲಿಕಾರ್ಜುನ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವರು ಜಾತಿ-ಧರ್ಮದ ವಿಚಾರ ಮಾತನಾಡುತ್ತಾ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಕಾಶ್ಮೀರದ ಪಹಲ್ಗಾಂನಲ್ಲಿ ಧರ್ಮ ಕೇಳಿ ಮಾರಣಹೋಮ ಮಾಡಲಾಯಿತು. ಆ ರೀತಿಯ ದುಷ್ಕೃತ್ಯ ಬೇರೆಲ್ಲೂ ನಡೆಯಬಾರದು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

 ಬೆಂಗಳೂರು : ಕೆಲವರು ಜಾತಿ-ಧರ್ಮದ ವಿಚಾರ ಮಾತನಾಡುತ್ತಾ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಕಾಶ್ಮೀರದ ಪಹಲ್ಗಾಂನಲ್ಲಿ ಧರ್ಮ ಕೇಳಿ ಮಾರಣಹೋಮ ಮಾಡಲಾಯಿತು. ಆ ರೀತಿಯ ದುಷ್ಕೃತ್ಯ ಬೇರೆಲ್ಲೂ ನಡೆಯಬಾರದು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಆನಂದ ಸಾಮಾಜಿ ಮತ್ತು ಶೈಕ್ಷಣಿಕ ಟ್ರಸ್ಟ್‌, ಡಾ.ಬಿ.ಆರ್‌.ಅಂಬೇಡ್ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಶನಿವಾರ ಆಯೋಜಿಸಿದ್ದ ನೂತನ ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯ ನೀಡಿದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬಗ್ಗೆಯೇ ಕೆಲವರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ದೇಶಕ್ಕಾಗಿ ಅವರು ಏನು ಮಾಡಿದ್ದಾರೆ, ಸಂವಿಧಾನ ಅವರೊಬ್ಬರೇ ರಚಿಸಿದ್ದಾ ಎಂದು ಪ್ರಶ್ನಿಸುತ್ತಾರೆ. ಪ್ರತಿ ವಿಚಾರದಲ್ಲೂ ಡಾ.ಅಂಬೇಡ್ಕರ್‌ ಅವರನ್ನು ಟೀಕಿಸಲಾಗುತ್ತಿದೆ. ಸಂವಿಧಾನ ಸಿದ್ಧಪಡಿಸುವ ಸಮಿತಿ ಪ್ರತಿ ಹಂತದಲ್ಲೂ ಅವರು ಕೆಲಸಮಾಡಿದ್ದಾರೆ. ಆರ್ಟಿಕಲ್‌ ರಚಿಸುವಾಗ, ಸಂವಿಧಾನ ಮಂಡಿಸುವಾಗ, ಅದರ ಬಗ್ಗೆ ವಿವರಿಸುವಾಗ ಎಲ್ಲದರಲ್ಲೂ ಅವರ ಪಾತ್ರವಿದೆ ಎಂಬುದನ್ನು ಎಲ್ಲರೂ ತಿಳಿಯಬೇಕು ಎಂದರು.

ಡಾ.ಅಂಬೇಡ್ಕರ್‌ ಅವರು ಸಂವಿಧಾನ ಕೊಡದಿದ್ದರೆ ನಮಗೆ ಯಾವುದೇ ಹಕ್ಕುಗಳಿರುತ್ತಿರಲಿಲ್ಲ. ಯಾವುದೇ ಕಾರಣಕ್ಕೂ ಡಾ.ಅಂಬೇಡ್ಕರ್‌ ಅವರನ್ನು ಯಾರೂ ಟೀಕೆ ಮಾಡಬಾರದು. ದಲಿತರು ಹಲವು ಕಾರಣಗಳಿಂದ ಹಿಂದುಳಿದಿರಬಹುದು. ಅವರು ಪ್ರಶ್ನಿಸದಿರಬಹುದು. ಆದರೆ, ಒಮ್ಮೆ ತಿರುಗಿಬಿದ್ದರೆ ಪರಿಣಾಮ ಬೇರೆಯೇ ಇರುತ್ತದೆ. ಡಾ. ಅಂಬೇಡ್ಕರ್‌ ಅವರ ಬಗ್ಗೆ ಕೇವಲವಾಗಿ ಮಾತನಾಡುವವರು ಅದನ್ನು ಗಮನಿಸಬೇಕು. ಅವಹೇಳನವನ್ನು ಸಹಿಸಲಾಗದು ಎಂದು ಹೇಳಿದರು.

ಜಾತಿ-ಧರ್ಮಗಳ ಬಗ್ಗೆ ಮಾತನಾಡುವವರು ನಮ್ಮ ನಡುವೆ ಇದ್ದಾರೆ. ಹೀಗೆ ಜಾತಿ ಕೇಳಿ ಧರ್ಮ ಕೇಳಿ ಪಹಲ್ಗಾಂನಲ್ಲಿ ಕಗ್ಗೊಲೆ ಮಾಡಲಾಗಿದೆ. ಆ ರೀತಿಯ ದುಷ್ಕೃತ್ಯ ಬೇರೆಲ್ಲೂ ನಡೆಯಬಾರದು. ಹೀಗಾಗಿ ಯಾರೂ ಜಾತಿ-ಧರ್ಮದ ವಿಚಾರನ್ನು ಮುಂದಿಟ್ಟುಕೊಂಡು ವಿಂಗಡಿಸಬಾರದು. ಅದರಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ, ವಿದ್ಯಾರ್ಥಿಗಳ ನಡುವೆ ಜಾತಿ-ಧರ್ಮ ಬರಬಾರದು. ದೇಶವನ್ನು ಒಂದಾಗಿಡಬೇಕಾದರೆ ಜಾತಿ-ಧರ್ಮದ ತಾರತಮ್ಯ ಇರಬಾರದು ಎಂದು ಅಭಿಪ್ರಾಯಪಟ್ಟರು.

ಸಚಿವರಾದ ದಿನೇಶ್ ಗುಂಡೂರಾವ್‌, ಡಾ.ಶರಣಪ್ರಕಾಶ್ ಪಾಟೀಲ್‌, ಸಂಸದ ರಾಧಾಕೃಷ್ಣ, ಶಾಸಕರಾದ ಎ.ಸಿ. ಶ್ರೀನಿವಾಸ್‌, ಎ.ಆರ್‌. ಕೃಷ್ಣಮೂರ್ತಿ ಇದ್ದರು.

ಮಾಜಿ ಸಿಎಂ ಗುಂಡೂರಾವ್‌ರಿಂದ ಅಂಬೇಡ್ಕರ್‌ ಕಾಲೇಜು ಸ್ಥಾಪನೆ:

ಗುಂಡೂರಾವ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಡಾ.ಅಂಬೇಡ್ಕರ್‌ ವೈದ್ಯಕೀಯ ಕಾಲೇಜು ಸ್ಥಾಪನೆ ಸಾಧ್ಯವಾಯಿತು. ಆಗ ಎಲ್ಲ ಪಕ್ಷದವರೂ ಕಾಲೇಜು ಸ್ಥಾಪನೆಗೆ ಸಹಕರಿಸಿದರು. ಆದರೆ, ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಕಾಲೇಜಿಗೂ ನನಗೂ ಸಂಬಂಧವಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಆಗಿನಿಂದ ಕಾಲೇಜು ಕಡೆ ಬಂದಿರಲಿಲ್ಲ. ಕೊನೆಗೆ ವೈದ್ಯಕೀಯ ಕಾಲೇಜು ದುಸ್ಥಿತಿಯಲ್ಲಿದ್ದಾಗ ಅನುದಾನ ನೀಡಿ ಸರಿಪಡಿಸಿದೆ. ಈಗಲೂ ಆಡಳಿತ ಮಂಡಳಿ ವೈದ್ಯಕೀಯ ಕಾಲೇಜು ಸುಸ್ಥಿತಿಯಲ್ಲಿಡಲು ಕೆಲಸ ಮಾಡಬೇಕು. ಯುವ ಟ್ರಸ್ಟಿಗಳಿಗೆ ಹಿರಿಯರು ಕಾಲೇಜು ಸ್ಥಾಪನೆ ಹಿಂದಿರುವ ಶ್ರಮ ತಿಳಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.