ಸಾರಾಂಶ
ಪರೀಕ್ಷಾ ಭಯದಿಂದ ಹೊರಬಂದು ಪರಿಶ್ರಮದಿಂದ ಅಧ್ಯಯನ ಮಾಡಿದರೆ ಶಾಲಾ ಪರೀಕ್ಷೆ ಹಾಗೂ ಜೀವನದ ಪರೀಕ್ಷೆಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯ.
ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ಪರೀಕ್ಷಾ ಭಯದಿಂದ ಹೊರಬಂದು ಪರಿಶ್ರಮದಿಂದ ಅಧ್ಯಯನ ಮಾಡಿದರೆ ಶಾಲಾ ಪರೀಕ್ಷೆ ಹಾಗೂ ಜೀವನದ ಪರೀಕ್ಷೆಯಲ್ಲಿ ಸುಲಭವಾಗಿ ಗೆಲ್ಲಲು ಸಾಧ್ಯ ಎಂದು ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ವಿಷಯಾಧಾರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಯಾದವರಿಗೆ ಕಲಿಕೆಯ ಆಸಕ್ತಿ, ಸಾಧಿಸುವ ಇಚ್ಚಾಶಕ್ತಿ ಅತ್ಯಂತ ಮುಖ್ಯ. ಓದು ಹಾಗೂ ಬರಹ ಶ್ರದ್ಧೆಯಿಂದ ಕೂಡಿರಬೇಕು. ಪರೀಕ್ಷೆ ಎಂಬ ಭಯದಿಂದ ದೂರವಿದ್ದು ಉತ್ತಮ ಅಧ್ಯಯನದ ಮೂಲಕ ಪಠ್ಯವನ್ನು ಮನನ ಮಾಡಬೇಕು. ಸಮಯ ಪರಿಪಾಲನೆ ಅತ್ಯಂತ ಮುಖ್ಯ. ಯಾರೂ ದಡ್ಡರಲ್ಲ. ಆದರೆ ಸಮಯ ಹರಣ ಮಾಡಿ ಓದಿಗೆ ಶರಣು ಹೊಡೆದರೆ ಪರೀಕ್ಷಾ ವೈಫಲ್ಯ ನಮ್ಮಲ್ಲಿ ದಡ್ಡರೆಂದು ಬಿಂಬಿಸುತ್ತದೆ. ಒಳ್ಳೆಯ ಗುರಿ ಹಾಗೂ ಗುರುವನ್ನು ಉಳ್ಳವರಾಗಿ ಬದುಕನ್ನು ರೂಪಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ ಆತ್ಮ ವಿಶ್ವಾಸ ಕಳೆದುಕೊಳ್ಳಬಾರದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ, ಓದು ಸಂತೋಷದ ಕಲಿಕೆಗೆ ಸಾಧನವಾಗಬೇಕು. ನಾಳೆ, ನಿನ್ನೆಯ ಬಗೆಗೆ ಚಿಂತಿಸದೆ ವರ್ತಮಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪಠ್ಯಗಳು ಕೇವಲ ಪರೀಕ್ಷೆಯ ಪಾಠಗಳಲ್ಲ. ಅವು ಬದುಕಿನ ಪಾಠಗಳೂ ಆಗಿವೆ. ಮಹಾತ್ಮರ ಜೀವನಾದರ್ಶಗಳನ್ನು ವಿದ್ಯಾರ್ಥಿಗಳ ಅರಿವಿಗಾಗಿ ನೀಡಲಾಗಿದೆ. ಅವುಗಳನ್ನು ಅರಿತು ನಡೆಯಬೇಕು ಎಂದರು.ರಂಬಾಪುರಿ ಪದವಿ ಪೂರ್ವ ಕಾಲೇಜಿನ ಪ್ರೊ. ಎಸ್.ವ್ಹಿ. ಕುಲಕರ್ಣಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ನಿರ್ದೇಶಕರಾದ ವೀರಣ್ಣ ಬಡ್ಡಿ, ಮಂಜು ಯಲಿಗಾರ, ಉಪನ್ಯಾಸಕ ಪ್ರೊ. ಕೆ. ಬಸಣ್ಣ, ಸುಮಿತ್ರಾ ರಾಮಾಪೂರಮಠ, ಕೆ.ಎಸ್. ಬರದೇಲಿ, ಎಂ.ಎಸ್. ಕುರಂದವಾಡ, ಕೆ.ಸಿ. ಹೂಗಾರ, ಮಹೇಶ ಲಕ್ಷ್ಮೇಶ್ವರ, ಗೀತಾ ಸಾಲ್ಮನಿ ಪಾಲ್ಗೊಂಡಿದ್ದರು.