ಸಾರಾಂಶ
ಹುಬ್ಬಳ್ಳಿ: ಇಡೀ ವಿಶ್ವವೇ ಬೆರಗುಗೊಳಿಸುವಂಥ ಉಪದೇಶಗಳನ್ನು ಅರ್ಜುನನಿಗೆ ಬೋಧನೆ ಮಾಡಿದ ಶ್ರೀಕೃಷ್ಣ ಒಬ್ಬ ಸರ್ವಾಂತರ್ಯಾಮಿ ವಿಶ್ವ ಗುರುವಾಗಿದ್ದಾನೆ. ಅವನನ್ನು ಭಗವದ್ಗೀತೆ ಪಠಣದ ಮೂಲಕ ಮೊರೆ ಹೋದರೆ ಸಕಲ ಸಿದ್ಧಿ ಸಾಧನೆಯಾಗುತ್ತದೆ ಎಂದು ಖ್ಯಾತ ವೈದ್ಯ, ವಿದ್ವಾಂಸರಾದ ಡಾ. ಆರ್.ಎನ್. ಜೋಶಿ ಹೇಳಿದರು.
ಇಲ್ಲಿಯ ಆದರ್ಶ ನಗರದ ರೋಟರಿ ವಿದ್ಯಾಲಯದಲ್ಲಿ ಧಾರವಾಡ ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಸ್ತುತ ಸಾಲಿನ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಗಾಳಿ ಎಲ್ಲೆಡೆ ಪಸರಿಸಿದೆ. ಅದರ ಅಸ್ತಿತ್ವ ನಮಗೆ ಅನಿಸುತ್ತದೆ. ಆದರೆ, ಕಣ್ಣಿಗೆ ಕಾಣದು. ಅದೇ ರೀತಿ ಭಗವಂತ ಎಲ್ಲೆಡೆ ಇರುವುದು ನಮಗೆ ಅನಿಸುತ್ತದೆ. ಆದರೆ, ಕಣ್ಣಿಗೆ ಕಾಣುವುದಿಲ್ಲ. ಇದು ಭಗವದ್ಗೀತೆಯ ಬಹುಮುಖ್ಯ ಸಾರ. ಗೀತೆಯ ಹನ್ನೊಂದನೇ ಅಧ್ಯಾಯದಲ್ಲಿ ವಿಶ್ವರೂಪ ದರ್ಶನವಿದೆ. ಅರ್ಜುನನಿಗೆ ತನ್ನ ನಿಜ ರೂಪವನ್ನು ಆತ ಸಾಕ್ಷಾತ್ಕರಿಸಿ ಅವನ ಕಣ್ಣು ತೆರೆಸಿದ್ದಾನೆ. ಅದೇ ರೀತಿ ನಾವು ಆತನನ್ನು ಶೃದ್ಧಾ, ಭಕ್ತಿಯಿಂದ ಮೊರೆ ಹೋದರೆ ನಮಗೆ ಆನಂದ ಹಾಗೂ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದರು.
ಮಕ್ಕಳು ಭಗವದ್ಗೀತೆಯನ್ನು ನಿತ್ಯ ಪಠಣ ಮಾಡಿದರೆ ಬೌದ್ಧಿಕ ಬೆಳವಣಿಗೆಯಾಗುತ್ತದೆ. ಎಲ್ಲರೂ ಭಗವದ್ಗೀತೆಯನ್ನು ಪ್ರತಿನಿತ್ಯ ಓದಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.ಎನ್.ಎಲ್.ಎ. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜಾ ದೇಸಾಯಿ ಮಾತನಾಡಿ, ಭಗವದ್ಗೀತೆ ಪಠಣ ಮಕ್ಕಳಲ್ಲಿ ಜ್ಞಾನದ ಬೆಳಕನ್ನು ನೀಡುತ್ತದೆ. ಇದು ಎಲ್ಲ ಧರ್ಮೀಯರಿಗೂ ಅನ್ವಯವಾಗುವ ಅದ್ಭುತ ಗ್ರಂಥವಾಗಿದೆ ಎಂದರು.
ಸಮಿತಿಯ ಸಂಚಾಲಕ ಅರವಿಂದ ಮುತ್ತಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವೀಣಾ ಶಿವರಾಮ ಹೆಗಡೆ ಅವರು ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಶ್ಲೋಕಗಳನ್ನು ಸುಶ್ರಾವ್ಯವಾಗಿ ಮಕ್ಕಳಿಗೆ ಹೇಳಿಕೊಟ್ಟರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಗವದ್ಗೀತಾ ಅಭಿಯಾನದ ಕಾರ್ಯಾಧ್ಯಕ್ಷ ಎ.ಸಿ. ಗೋಪಾಲ ಅವರು ಭಗವದ್ಗೀತಾ ಅಭಿಯಾನದ ಮಹತ್ವ ಕುರಿತು ವಿವರಿಸಿದರು. ಅಭಿಯಾನ ಸಮಿತಿಯ ಪದಾಧಿಕಾರಿಗಳಾದ ಸುದರ್ಶನ್ ಹೇಮಾದ್ರಿ, ಶಿವರಾಮ ಹೆಗಡೆ ಹಿತ್ಲಳ್ಳಿ, ಶ್ರೀಕಾಂತ ಹೆಗಡೆ, ಅಭಿಯಾನದ ಸದಸ್ಯ ಮನೋಹರ ಪರ್ವತಿ, ಅಶೋಕ ಹೆಗಡೆ, ನಾಗಪತಿ ಹೆಗಡೆ, ಸುನೀಲ ಗುಮಾಸ್ತೆ, ಗುರುರಾಜ ಕೌಜಲಗಿ ಸೇರಿದಂತೆ ಸುಮಾರು ಎರಡುನೂರು ವಿದ್ಯಾರ್ಥಿಗಳು ಭಗವದ್ಗೀತಾ ಪಠಣದಲ್ಲಿ ಭಾಗವಹಿಸಿದ್ದರು.
;Resize=(128,128))
;Resize=(128,128))