50/80 ಸೈಟಲ್ಲಿ ಮನೆ ಕಟ್ಟೋಕೆ ‘ನಂಬಿಕೆ ನಕ್ಷೆ’

| Published : Mar 12 2024, 02:02 AM IST

ಸಾರಾಂಶ

ಬೆಂಗಳೂರಿನಲ್ಲಿ 50/80 ಅಡಿಯಲ್ಲಿ ಮನೆ ಕಟ್ಟಲು ಬಿಬಿಎಂಪಿಯ ನಂಬಿಕೆ ನಕ್ಷೆಯಲ್ಲಿ ಅರ್ಜಿ ಹಾಕಿದರೆ ಅನುಮತಿ ಸಿಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ 50/80 ಅಡಿ ವಿಸ್ತೀರ್ಣದ ಜಾಗದಲ್ಲಿ ಹೊಸದಾಗಿ ಮನೆ ಕಟ್ಟುವವರು ಕಟ್ಟಡ ನಕ್ಷೆಗಾಗಿ ಬಿಬಿಎಂಪಿ ಕಚೇರಿಗೆ ಅಲೆಯದೆ ನೋಂದಾಯಿತ ವಾಸ್ತು ಶಿಲ್ಪಿ (ಆರ್ಕಿಟೆಕ್ಟ್‌) ಅಥವಾ ಎಂಜಿನಿಯರ್‌ ಮೂಲಕ ತಮ್ಮ ಕಟ್ಟಡದ ನಕ್ಷೆಗಳಿಗೆ ಆನ್‌ಲೈನ್‌ನಲ್ಲೇ ಸ್ವಯಂ ಅನುಮತಿ ಪಡೆಯಬಹುದು. ಅಷ್ಟೇ ಅಲ್ಲ, ತಮ್ಮ ಆಸ್ತಿಗಳಿಗೆ ಆಸ್ತಿ ತೆರಿಗೆಯನ್ನು ಸ್ವಯಂ ಘೋಷಿಸಿಕೊಂಡು ಪಾವತಿ ಮೂಲಕ ಸೂಕ್ತ ಖಾತೆಯನ್ನೂ ಪಡೆಯಬಹುದು.

ಈ ನಿಟ್ಟಿನಲ್ಲಿ ಬಿಬಿಎಂಪಿ ರೂಪಿಸಿರುವ ‘ನಂಬಿಕೆ ನಕ್ಷೆ ಮತ್ತು ಹೊಸ ಆಸ್ತಿ ತೆರಿಗೆ ಪದ್ಧತಿ, ಆಸ್ತಿ ತೆರಿಗೆ ಖಾತಾ ವಿತರಣೆ’ ಯೋಜನೆಗಳ ಪ್ರಾಯೋಗಿಕ ಜಾರಿಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮವಾರ ವಿಧಾನಸೌಧದಲ್ಲಿ ಚಾಲನೆ ನೀಡಿದರು. ಆರಂಭಿಕವಾಗಿ ಈ ಯೋಜನೆಗಳು ರಾಜರಾಜೇಶ್ವರಿ ನಗರ ಮತ್ತು ದಾಸರಹಳ್ಳಿ ವಲಯದ ಎಲ್ಲಾ ವಾರ್ಡುಗಳಲ್ಲಿ ಜಾರಿಗೆ ಬರಲಿದ್ದು, ನಂತರದ ದಿನಗಳಲ್ಲಿ ಎಲ್ಲ ವಲಯಗಳಿಗೂ ವಿಸ್ತರಣೆಯಾಗಲಿದೆ.

ಯೋಜನೆಗಳ ಪ್ರಾಯೋಗಿಕ ಜಾರಿ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಉಪಮುಖ್ಯಮಂತ್ರಿ ಅವರು, ಬ್ರಾಂಡ್‌ ಬೆಂಗಳೂರು ಪರಿಕಲ್ಪನೆಯಲ್ಲಿ ಈ ಯೋಜನೆ ರೂಪಿಸಲಾಗಿದೆ. ಈಗಾಗಲೇ ನಗರದ ಜನರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಈಗ ಅದೇ ಮಾದರಿಯಲ್ಲಿ 50/80 ಅಡಿ ವಿಸ್ತೀರ್ಣವರೆಗಿನ ನಿವೇಶನಗಳಲ್ಲಿ 4 ಯುನಿಟ್ ಮನೆ ಕಟ್ಟಿಕೊಳ್ಳುವವರು ಕಟ್ಟಡ ನಕ್ಷೆಗಾಗಿ ಪಾಲಿಕೆ ಕಚೇರಿಗೆ ಅಲೆಯಬೇಕಿಲ್ಲ. ಜತೆಗೆ ಅಧಿಕಾರಿಗಳಿಗೆ ಲಂಚ ನೀಡುವ ಪರಿಸ್ಥಿತಿಯೂ ನಿರ್ಮಾಣವಾಗುವುದಿಲ್ಲ. ಬದಲಿಗೆ ನೊಂದಾಯಿತ ವಾಸ್ತುಶಿಲ್ಪಿ (ಆರ್ಕಿಟೆಕ್ಟ್) ಅಥವಾ ಇಂಜಿನಿಯರ್ ಮೂಲಕ ತಮ್ಮ ಕಟ್ಟಡದ ನಕ್ಷೆಗಳಿಗೆ ಆನ್‌ಲೈನ್ ಮೂಲಕ ಸ್ವಯಂ ಅನುಮತಿ ಪಡೆಯಬಹುದು. ಇದಕ್ಕಾಗಿ ‘ನಂಬಿಕೆ ನಕ್ಷೆ’ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ಕಟ್ಟಡ ನಕ್ಷೆಗೆ ಅನುಮತಿ ನೀಡುವ ವಾಸ್ತುಶಿಲ್ಪಿಗಳು ಹಾಗೂ ಇಂಜಿನಿಯರ್‌ಗಳು ಸರ್ಕಾರದ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು. ಕಟ್ಟಡದ ನಕ್ಷೆ ನಿಯಮಾನುಸಾರವಾಗಿ ತನ್ನದೇ ಆದ ರೀತಿಯಲ್ಲಿ ತಂತ್ರಜ್ಞಾನದ ಮೂಲಕ ಪರಿಶೀಲನೆ ಮಾಡಲಾಗುವುದು. ಆನ್‌ಲೈನ್‌ನಲ್ಲೆ ಶುಲ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ 9 ಸಾವಿರ ಕಟ್ಟಡ ನಕ್ಷೆ ಅನುಮತಿ ನೀಡಲಾಗಿದೆ. ಈ ಬಾರಿ 10 ಸಾವಿರ ನಕ್ಷೆ ಅನುಮತಿ ನೀಡಬಹುದು ಎಂದು ಅಂದಾಜು ಮಾಡಲಾಗಿದೆ. ಪ್ರಮಾಣಿಕೃತ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಿಗಳನ್ನು ನಂಬಬೇಕು ಎಂದು ಹೇಳಿದರು.

ಈ ಯೋಜನೆಯನ್ನು ಮೊದಲ ಹಂತದಲ್ಲಿ ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯದ ಎಲ್ಲಾ ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡುತ್ತೇವೆ. ನಂತರ ಬೆಂಗಳೂರಿನ ಎಲ್ಲಾ ವಲಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.ಹೊಸ ತೆರಿಗೆ ಪದ್ಧತಿ: ಖಾತೆ ವಿತರಣೆ

ಮಾರ್ಗಸೂಚಿ ದರ ಆಧರಿಸಿ ಬೆಂಗಳೂರಿನ ವ್ಯಾಪ್ತಿಯಲ್ಲಿ ಏಕರೂಪದ ಆಸ್ತಿ ತೆರಿಗೆ ನಿಗದಿ ಮಾಡಿ ತೆರಿಗೆ ಪದ್ಧತಿಯನ್ನು ಸರಳೀಕರಿಸಿ ನಮ್ಮ ಸರ್ಕಾರ ‘ಹೊಸ ತೆರಿಗೆ ಪದ್ಧತಿ’ಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

2020ರಲ್ಲಿ ಬಿಜೆಪಿ ಸರ್ಕಾರ ತೆರಿಗೆ ಕಾಯ್ದೆ ವಿಚಾರವಾಗಿ ತಿದ್ದುಪಡಿ ತಂದಿತ್ತು. ಅದರಲ್ಲಿ ತೆರಿಗೆ ಪಾವತಿ ವಿಚಾರದಲ್ಲಿ ಅನೇಕ ಏರುಪೇರುಗಳಾದವು. ಮನೆ ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಅನೇಕ ದೂರುಗಳು ವ್ಯಕ್ತವಾದವು. ಇದಕ್ಕೆ ಪರಿಹಾರ ನೀಡಲು ಬಜೆಟ್ ಅಧಿವೇಶನದಲ್ಲಿ ನಮ್ಮ ಸರ್ಕಾರ ತಿದ್ದುಪಡಿ ತಂದು ಎಲ್ಲೆಲ್ಲಿ ದಂಡದ ಸಮಸ್ಯೆ ಇದೆ ಅಲ್ಲೆಲ್ಲಾ ಬರುವ ಜುಲೈ 31ರವರೆಗೂ ತೆರಿಗೆ ಕಟ್ಟಿದವರಿಗೆ ದಂಡ ಹಾಗೂ ಬಡ್ಡಿ ಮನ್ನಾ ಮಾಡುವ ತೀರ್ಮಾನ ಮಾಡಿದ್ದೇವೆ. ಬೆಂಗಳೂರಿನ ನಾಗರಿಕರು ಇದರ ಉಪಯೋಗ ಪಡೆಯಬೇಕು. ದಂಡವನ್ನು ಶೇ.200 ರಿಂದ ಶೇ.100ಕ್ಕೆ ಇಳಿಸಲಾಗಿದೆ. ನಾವು 5 ವರ್ಷದವಗಿನ ಲೆಕ್ಕಾಚಾರದಲ್ಲಿ ಈ ತೆರಿಗೆ ಬಾಕಿ ವಸೂಲಿಗೆ ತೀರ್ಮಾನಿಸಿದ್ದೇವೆ ಎಂದರು.ದಾಖಲೆ ಸರಿ ಇದ್ದರೆ ‘ಎ’, ಇಲ್ಲದಿದ್ದರೆ ಬಿ ಖಾತಾ

ಯಾರೆಲ್ಲಾ ಆಸ್ತಿ ತೆರಿಗೆ ಪಾವತಿಗೆ ತಮ್ಮನ್ನು ತಾವು ಘೋಷಣೆ ಮಾಡಿಕೊಂಡಿಲ್ಲವೋ ಅವರಿಗೆ ಒಂದು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ನಾಗರಿಕರು ತಮ್ಮ ಆಸ್ತಿಯನ್ನು ಸ್ವಯಂ ಘೋಷಣೆ ಮಾಡಿಕೊಂಡು ಆಸ್ತಿ ತೆರಿಗೆ ಪಾವತಿಸಿದರೆ ಅವರಿಗೆ ಆಸ್ತಿ ತೆರಿಗೆ ಸಂಖ್ಯೆ ಮತ್ತು ಬಿಬಿಎಂಪಿ ಖಾತಾ ನೀಡಲಾಗುವುದು. ಲಕ್ಷಾಂತರ ಜನ ತಮ್ಮ ಆಸ್ತಿಗಳ ಖಾತೆಗಾಗಿ ಕಾಯುತ್ತಿದ್ದಾರೆ. ಅವರಿಗೆ ಇದು ಉತ್ತಮ ಅವಕಾಶ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ ಬಿಬಿಎಂಪಿಯಿಂದ ಎಲ್ಲ ದಾಖಲೆ ಸರಿಯಾಗಿ ಇರುವವರಿಗೆ ‘ಎ’ ಖಾತಾ ನೀಡುತ್ತೇವೆ. ಭೂ ಪರಿವರ್ತನೆ ಮಾಡಿಕೊಳ್ಳದೆ, ಯೋಜನೆ ಇಲ್ಲದವರಿಗೆ ‘ಬಿ’ ಖಾತಾ ನೀಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡದ ಸುಮಾರು 4 ಲಕ್ಷ ಆಸ್ತಿಗಳಿದ್ದು, ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಈ ಅವಕಾಶ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.