ಸಾರಾಂಶ
ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಒಂದು ತಿಂಗಳುವರೆಗೆ ನಡೆಯುವ ಉಪವಾಸ ವ್ರತದ ಹಿನ್ನೆಲೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದವರಿಗೆ ಇಲ್ಲಿನ ಮದೀನಾ ಮಸೀದಿಯಲ್ಲಿ ಪಟ್ಟಣದ ಹಿಂದೂ ಸಮಾಜದ ಕೊಟಗಿ ಕುಟುಂಬಸ್ಥರಿಂದ ಇಫ್ತಾರ ಕೂಟ ನಡೆಯಿತು.
ಗಜೇಂದ್ರಗಡ: ಪವಿತ್ರ ರಂಜಾನ್ ಹಬ್ಬದ ನಿಮಿತ್ತ ಒಂದು ತಿಂಗಳುವರೆಗೆ ನಡೆಯುವ ಉಪವಾಸ ವ್ರತದ ಹಿನ್ನೆಲೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದವರಿಗೆ ಇಲ್ಲಿನ ಮದೀನಾ ಮಸೀದಿಯಲ್ಲಿ ಪಟ್ಟಣದ ಹಿಂದೂ ಸಮಾಜದ ಕೊಟಗಿ ಕುಟುಂಬಸ್ಥರಿಂದ ಇಫ್ತಾರ ಕೂಟ ನಡೆಯಿತು.
ಇದಕ್ಕೂ ಮುನ್ನ ಶರಣ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಬಸವರಾಜ ಕೊಟಗಿ ಮಾತನಾಡಿ, ಉಪವಾಸ ಎನ್ನುವುದು ಪ್ರತಿಯೊಬ್ಬರು ಆಚರಿಸುವ ವ್ರತವಾಗಿದೆ. ಹಸಿವು ಎಂದರೆ ಏನು, ಹಸಿವಿನ ಮಹತ್ವ ಏನು ಎಂಬುದು ತಿಳಿಸುವುದರ ಜತೆಗೆ ಅಸಹಾಯಕರಿಗೆ ಹಾಗೂ ಹಸಿದವರಿಗೆ ಉಣಿಸಬೇಕು ಎಂಬ ಸಂದೇಶವು ಉಪವಾಸದ್ದಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಉಪವಾಸ ಎಲ್ಲ ಧರ್ಮಗಳಲ್ಲಿ ವಿವಿಧ ರೂಪಗಳಲ್ಲಿ ಆಚರಿಸಲ್ಪಡುತ್ತದೆ. ಮಾನಸಿಕ ಪರಿಶುದ್ಧತೆ ಹಾಗೂ ಸಂಸ್ಕರಿಸುವ ಮೂಲಕ ಎಲ್ಲ ದುಷ್ಟಗುಣಗಳನ್ನು ದೂರವಿಡಲು ಉಪವಾಸ ಮಹತ್ವ ಸ್ಥಾನವನ್ನು ವಹಿಸುತ್ತದೆ. ಈ ಹಿನ್ನೆಲೆ ರಂಜಾನ್ ಉಪವಾಸ ಆಚರಣೆ ಜತೆಗೆ ಉಪವಾಸ ನಿರತ ಮುಸ್ಲಿಂ ಬಾಂಧವರಿಗೆ ಏರ್ಪಡಿಸಿದ ಇಫ್ತಾರ ಕೂಟದಲ್ಲಿ ಮುಸ್ಲಿಂ ಸಹೋದರರು ಭಾಗವಹಿಸಿದ್ದು ಖುಷಿ ತರಿಸಿದೆ ಎಂದರು.ಸಮಾಜದ ಅಧ್ಯಕ್ಷ ಹಸನ ತಟಗಾರ ಮಾತನಾಡಿ, ರಂಜಾನ್ ಮಾಸವು ರೋಜಾ ಆಚರಿಸುವ ಮೂಲಕ ಮುಸ್ಲಿಂರು ಆತ್ಮಶುದ್ಧಿ ಜತೆಗೆ ಸರಿ, ತಪ್ಪುಗಳ ಮನನ ಮಾಡಿಕೊಳ್ಳಲು ಪ್ರತಿವರ್ಷವು ಸದಾವಕಾಶ ನೀಡುತ್ತದೆ. ೩೦ ಅಧ್ಯಾಯಗಳ ಕುರಾನ್ ಅವತ್ತೀರ್ಣಗೊಂಡ ಮಾಸವೇ ರಂಜಾನ್. ನಮಾಜ್, ರೋಜಾ, ಕಲ್ಮಾ ಹಾಗೂ ಜಕಾತ್ ಮತ್ತು ಹಜ್ ಈ ೫ ಅಂಶಗಳನ್ನು ಕುರಾನ್ ಬೋಧಿಸಲಾಗುತ್ತದೆ. ಅಲ್ಲದೆ ಸತ್ಯ ಹಾಗೂ ವಿಶ್ವಾಸ ಮತ್ತು ಆತ್ಮಾವಲೋಕನದೊಂದಿಗೆ ಉಪವಾಸ ಜತೆಗೆ ರಂಜಾನ್ ಉಪವಾಸ ಆಚರಿಸುವುದು ಪುಣ್ಯದ ಕೆಲಸವಾಗಿದೆ ಎಂದರು. ಈ ವೇಳೆ ಇಫ್ತಾರ ಕೂಟ ಏರ್ಪಡಿಸಿದ್ದ ಬಸವರಾಜ ಕೊಟಗಿ ಹಾಗೂ ಅಲ್ಲಮಪ್ರಭು ಕೊಟಗಿ ಅವರನ್ನುಸನ್ಮಾನಿಸಲಾಯಿತು.ಪುರಸಭೆ ಸದಸ್ಯ ರಾಜು ಸಾಂಗ್ಲಿಕರ, ಫಯಾಜ್ ತೋಟದ, ನೀಲಕಂಠ ಸವಣೂರ, ದಾವಲ ತಾಳಿಕೋಟಿ, ನಾಸಿರಅಲಿ ಸುರಪುರ, ಮೆಹಬೂಬ ಚಿನ್ನೂರ, ಯುಸೂಫ್ ಖಾಜಿ, ನಜೀರಸಾಬ ಸಾಂಗ್ಲಿಕರ, ಅಲ್ಲಾಭಕ್ಷಿ ನಿಶಾನದಾರ, ಮೆಹಬೂಬ ಚಿನ್ನೂರ, ಸದ್ದಾಂಹುಸೇನ ಯಲಬುರ್ಗಿ, ಅಸ್ಲಾಂ ಸಾಂಗ್ಲಿಕರ, ಅನ್ವರ ಇಟಗಿ ಸೇರಿ ಇತರರು ಇದ್ದರು.