ಪುತ್ತೂರು: ಒಳ ನುಸುಳುವಿಕೆ ರಾಷ್ಟ್ರದ ಭದ್ರತೆಗೆ ಅಪಾಯಕಾರಿಯಾಗಿದ್ದು, ಇನ್ನೊಂದೆಡೆ ಮತೀಯವಾದಗಳು ಇನ್ನಷ್ಟು ಅಪಾಯಗಳನ್ನು ಒಡ್ಡುತ್ತಿವೆ. ಜೊತೆಗೆ ಪ್ರಾದೇಶಿಕ ಅಸ್ಮಿತೆಯು ದೇಶವನ್ನು ವಿಭಜಿಸಲು ಯತ್ನಿಸುತ್ತವೆ. ಈ ಸಂದರ್ಭ ನಾವು ಮೈ ಮರೆತಲ್ಲಿ ರಾಷ್ಟ್ರ ವಿನಾಶಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ದೇಶಭಕ್ತಿಯ ಜಾಗರಣೆಗಾಗಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಹೇಳಿದರು. ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ತಿರಂಗ ಯಾತ್ರೆ ಸಮಿತಿ ವತಿಯಿಂದ ಶನಿವಾರ ಪುತ್ತೂರಿನಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ ಭಾಗವಹಿಸಿ ಇಲ್ಲಿನ ಪುರಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುತ್ವ ನಾಶವಾದ ಕಾರಣದಿಂದಾಗಿ ಪಾಕಿಸ್ಥಾನ ಮತ್ತು ಬಾಂಗ್ಲಾ ದೇಶಗಳು ನಿರ್ಮಾಣವಾಯಿತು. ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅಸಾಧ್ಯವಾಯಿತು. ಜಾತೀವಾದ ನಾಶವಾದಲ್ಲಿ ಕೆಲವು ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳಲಿದೆ ಎಂದ ಅವರು ಜಾತೀವಾದವನ್ನು ನಾಶಪಡಿಸಲು ಕಾಂಗ್ರೆಸ್ ಸರ್ಕಾರ ಸಿದ್ದವಿದೆಯೇ ಎಂದು ಪ್ರಶ್ನಿಸಿದರು.ಅಹಿಂಸೆಯಿಂದ ಸ್ವಾತಂತ್ರ್ಯ, ಅರ್ಧಸತ್ಯ: ದೇಶಕ್ಕೆ ಅಹಿಂಸೆಯ ಹೋರಾಟದ ಮೂಲಕ ಸ್ವಾತಂತ್ರ್ಯ ಸಿಕ್ಕಿತು ಎಂಬುದು ಪೂರ್ಣ ಸತ್ಯವಲ್ಲ. ಅದು ಅರ್ಧ ಸತ್ಯ. ಅಹಿಂಸಾ ಹೋರಾಟಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಕೊಟ್ಟರು ಎಂದರೆ ಯುವ ಸಮುದಾಯದಲ್ಲಿ ಬ್ರಿಟಿಷರು ಒಳ್ಳೆಯವರು ಎಂದು ಅನಿಸಬಹುದು. ಸ್ವಾತಂತ್ರ್ಯಕ್ಕಾಗಿ ದೇಶದ ಹಲವಾರು ಮಂದಿ ರಕ್ತ ಸುರಿಸಿದ್ದಾರೆ. ವೀರ ಸಾವರ್ಕರ್ ಅಹಿಂಸಾ ಹೋರಾಟದ ಪ್ರತಿಪಾದಕರಲ್ಲ. ಸರ್ಧಾರ್ ವಲ್ಲಭಾಭಾಯಿ ಪಟೇಲ್ ಅವರು ಇರಿದಿದ್ದಲ್ಲಿ ಈಗಿರುವ ಭಾರತವು ನಮಗೆ ಸಿಗುತ್ತಿರಲಿಲ್ಲ. ಕೆದಂಬಾಡಿ ರಾಮಯ್ಯ ಗೌಡ, ಮಂಜಬೈದ್ಯ ಗಾಂಧಿವಾದಿಗಳು ಆಗಿರಲಿಲ್ಲ ಎಂದರು. ಸೈನ್ಯದಲ್ಲಿಯೂ ಜಾತಿ ವರದಿ: ಸಾಚಾರ್ ವರದಿಯಲ್ಲಿ ಸೈನ್ಯಕ್ಕೆ ಸೇರಿದವರ ಲೆಕ್ಕಾಚಾರವನ್ನು ಜಾತಿಯಲ್ಲಿ ನೀಡಲಾಗಿದೆ. ಸೈನ್ಯದಲ್ಲಿಯೂ ಜಾತಿಯ ಲೆಕ್ಕ ಹಾಕುವ ಮನೋಸ್ಥಿತಿ ಅಪಾಯಕಾರಿಯಾಗಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಲೆಕ್ಕಾಚಾರ ನಡೆಸಲಾಯಿತು ಎಂದು ಆರೋಪಿಸಿದರು.
ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ ತ್ರಿವರ್ಣ ಧ್ವಜವು ಅಪರೂಪದ ಸಂದರ್ಭ ಉದಯವಾಯಿತು. ಇದೇ ತಿರಂಗ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಯಾಯಿತು. ದೇಶವನ್ನು ಪರಕೀಯರಿಂದ ಮುಕ್ತಗೊಳಿಸಿರುವುದನ್ನು ನೆನಪಿಸುವ ನಿಟ್ಟಿನಲ್ಲಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.
ತಿರಂಗ ಯಾತ್ರೆಯ ರಾಜ್ಯ ಸಂಚಾಲಕಿ ರೂಪಾಲಿ ನಾಯ್ಕ್, ವಿಭಾಗ ಪ್ರಭಾರಿ ಭಾರತೀಶ್, ಜಿಲ್ಲೆಯ ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ರಾಜೇಶ್ ನಾಯ್ಕ್, ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು ಇದ್ದರು. ಮಾಜಿ ಶಾಸಕ ಸಂಜೀವ ಮಠಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ವಂದಿಸಿದರು. ಹರಿಪ್ರಸಾದ್ ಯಾದವ್ ನಿರೂಪಿಸಿದರು.ತಿರಂಗ ಯಾತ್ರೆ: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಿಂದ ಕಿಲ್ಲೆ ಮೈದಾನದ ತನಕ ತಿರಂಗ ಯಾತ್ರೆ ನಡೆಯಿತು. ಶ್ರೀ ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಮಾಡಿ ಯಾತ್ರೆಗೆ ಚಾಲನೆ ನೀಡಲಾಯಿತು. ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಭಾರತ ಮಾತೆಯ ಸ್ತಬ್ಧ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರಾಷ್ಟ್ರ ಧ್ವಜ ಹಸ್ತಾಂತರ ಮಾಡಿದರು. ನಗರದ ಮುಖ್ಯರಸ್ತೆಯಲ್ಲಿ ಸಾಗಿದ ತಿರಂಗ ಯಾತ್ರೆಯು ಕಿಲ್ಲೆ ಮೈದಾನದಲ್ಲಿ ಸಮಾಪನಗೊಂಡಿತು.