ಉಪ ನೋಂದಣಾಧಿಕಾರಿಯಿಂದ ಅಕ್ರಮ ಖಾತೆ: ತನಿಖೆಗೆ ತಂಡ ರಚನೆ

| Published : Aug 30 2024, 01:02 AM IST

ಸಾರಾಂಶ

ಆರ್‌ಟಿಸಿಯಲ್ಲಿ ವ್ಯಕ್ತಿಯ ಹೆಸರೇ ಇಲ್ಲದೆ ಮನೆಜಾಗ ಎಂದು ನಮೂದಾಗಿರುವ ಆಸ್ತಿ ಸೇರಿದಂತೆ ಮೂರ್ನಾಲ್ಕು ಜನರು ಒಟ್ಟಿಗಿರುವ ಆರ್‌ಟಿಸಿ ಜಮೀನನ್ನು ಒಬ್ಬರಿಂದ, ಮತ್ತೊಬ್ಬರಿಗೆ ತಿಳಿಯದಂತೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಉಪನೋಂದಣಾಧಿಕಾರಿ ವಿರುದ್ಧ ತನಿಖೆಗೆ ತಂಡವೊಂದನ್ನು ರಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಆರ್‌ಟಿಸಿಯಲ್ಲಿ ವ್ಯಕ್ತಿಯ ಹೆಸರೇ ಇಲ್ಲದೆ ಮನೆಜಾಗ ಎಂದು ನಮೂದಾಗಿರುವ ಆಸ್ತಿ ಸೇರಿದಂತೆ ಮೂರ್ನಾಲ್ಕು ಜನರು ಒಟ್ಟಿಗಿರುವ ಆರ್‌ಟಿಸಿ ಜಮೀನನ್ನು ಒಬ್ಬರಿಂದ, ಮತ್ತೊಬ್ಬರಿಗೆ ತಿಳಿಯದಂತೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಉಪನೋಂದಣಾಧಿಕಾರಿ ವಿರುದ್ಧ ತನಿಖೆಗೆ ತಂಡವೊಂದನ್ನು ರಚಿಸಿದ್ದಾರೆ.

ಪಟ್ಟಣದ ಉಪ ನೋಂದಣಾಧಿಕಾರಿ ಜಿ.ಮಂಜುದರ್ಶಿನಿ ಅಕ್ರಮ ಖಾತೆ ಮಾಡಿಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ತನಿಖೆ ನಡೆಸುವಂತೆ ವಿಚಾರಣಾ ಕಮಿಟಿಯ ಅಧ್ಯಕ್ಷರಾಗಿ ಮಂಡ್ಯ ನಗರಾಭಿವೃದ್ಧಿ ಆಯುಕ್ತರು, ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಸದಸ್ಯರಾಗಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು, ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರು, ಜಿಲ್ಲಾ ನೋಂದಣಾಧಿಕಾರಿಗಳ ಲೆಕ್ಕಾಧಿಕಾರಿ, ಕಾನೂನು ಕೋಶದ ಶಿರಸ್ತೇದಾರ್ ಅವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಿರುವುದಾಗಿ ತಿಳಿದುಬಂದಿದೆ.

ಶ್ರೀರಂಗಪಟ್ಟಣ ತಾಲೂಕು ಬೆಳಗೊಳ ಹೋಬಳಿ ಕೆ.ಆರ್.ಸಾಗರ ಗ್ರಾಮಕ್ಕೆ ಸೇರಿದ ಸರ್ವೇ ನಂ. ೬/೧ ವಿಸ್ತೀರ್ಣ ೨ ಎಕರೆ ಜಮೀನು ಮನೆ ಜಾಗ ಎಂದು ಆರ್‌ಟಿಸಿಯಲ್ಲಿ ನಮೂದಾಗಿದ್ದರೂ ಸಹ ಖಾಸಗಿ ವ್ಯಕ್ತಿಯೊಬ್ಬರಿಗೆ ರಿಜಿಸ್ಟ್‌ರ್‌ ಮಾಡಿಕೊಟ್ಟಿರುವುದು. ಅಷ್ಟೇ ಅಲ್ಲದೆ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ವೇ ನಂ.೬೦/೧ರಲ್ಲಿ ೧ಎಕರೆ ೧೪ ಗುಂಟೆ ಮಾಲೀಕರಾದ ರಾಮೇಗೌಡ, ಚಲುವೇಗೌಡ, ವೈರಮುಡಿಗೌಡ ಹಾಗೂ ಸಾವಿತ್ರಮ್ಮ ಎಂಬ ನಾಲ್ಕು ಮಂದಿಯ ಜಂಟಿ ಖಾತೆ ಆಸ್ತಿಯನ್ನು ಅಕ್ರಮವಾಗಿ ರಾಮೇಗೌಡ, ವೈರಮುಡಿಗೌಡ ಹಾಗೂ ಸಾವಿತ್ರಮ್ಮ ರವರನ್ನು ಕೈಬಿಟ್ಟಿರುವ ಉಪನೋಂದಾಣಾಧಿಕಾರಿ ಚಲುವೇಗೌಡ ಎಂಬ ವ್ಯಕ್ತಿಯೊಂದಿಗೆ ಶಾಮೀಲಾಗಿ ದಿನಾಂಕ ೨೮/೦೩/೨೦೨೪ ರಂದು ಡಾಕ್ಯುಮೆಂಟ್ ನಂ. ೦೯೦೫೩/೨೩-೨೪ರಂದು ನೋಂದಣಿ ಮಾಡಿರುವುದು ಮೇಲ್ನೋಟಕ್ಕೆ ತಡವಾಗಿ ಕಂಡು ಬಂದಿದೆ.

ಅಷ್ಟೇ ಅಲ್ಲದೆ ಕೆಆರ್‌ಎಸ್ ಗ್ರಾಮದ ಸರ್ವೇ ನಂ. ೬/೧ರ ೨ಎಕರೆ ಜಮೀನಿನ ಮಾರುಕಟ್ಟೆ ಮೌಲ್ಯವು (ಋಣಭಾರದ (ಇಸಿ) ಕಾಲಂ ೪ರಲ್ಲಿ) ಸರ್ಕಾರಿ ಲೆಕ್ಕಾಚಾರದ ಪ್ರಕಾರ ೨,೮೩,೨೮,೦೦೦ ರು. ಬೆಲೆ ಬಾಳಲಿದ್ದು, ಈ ಸ್ವತ್ತನ್ನ ಕೇವಲ ೧ ಕೋಟಿ ರು.ಗಳಿಗೆ ದಿನಾಂಕ ೨೯/೦೨/೨೦೨೪ ರಂದು ಡಾಕ್ಯುಮೆಂಟ್ ನಂ. ೮೨೦೯ರ ಮೂಲಕ ಕ್ರಯಪತ್ರವನ್ನ ರಿಜಿಸ್ಟ್ರರ್ ಮಾಡಿರುತ್ತಾರೆ. ಈ ಪತ್ರದಲ್ಲಿ ಮುದ್ರಾಂಕ ಶುಲ್ಕ ಹಾಗೂ ನೋಂದಣಿ ಶುಲ್ಕವನ್ನು ಸುಮಾರು ೬,೬೫,೦೦೦ ರು.ಗಳನ್ನು ಪಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು ೧೨ ಲಕ್ಷಕ್ಕೂ ಅಧಿಕ ಹಣವನ್ನು ನಷ್ಟಮಾಡಿರವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹೀಗೆ ಕಳೆದ ಮೂರು ವರ್ಷಗಳಿಂದ ಉಪನೋಂದಣಾಧಿಕಾರಿ ಜಿ.ಮಂಜುದರ್ಶಿನಿ ಅವರು ಅನೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಆರೋಪಗಳ ಕೇಳಿಬಂದಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ತನಿಖೆ ನಡೆಸುವುದಕ್ಕೆ ಜಿಲ್ಲಾಧಿಕಾರಿಗಳು ತನಿಖಾ ತಂಡ ರಚಿಸಿರುವುದಾಗಿ ಗೊತ್ತಾಗಿದೆ.