ಸಾರಾಂಶ
ಅರಸೀಕಟ್ಟೆಯಮ್ಮ ದೇವಸ್ಥಾನದ ಸುತ್ತಮುತ್ತ ಕಾನೂನು ಬಾಹಿರವಾಗಿ ಹಂದಿ, ಕುರಿ, ಕೋಳಿ ಇತರೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ಶುಚಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಜಿಪಂ ಮುಂದೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನಅರಸೀಕಟ್ಟೆಯಮ್ಮ ದೇವಸ್ಥಾನದ ಸುತ್ತಮುತ್ತ ಕಾನೂನು ಬಾಹಿರವಾಗಿ ಹಂದಿ, ಕುರಿ, ಕೋಳಿ ಇತರೆ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಇದರಿಂದ ಶುಚಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಜಿಪಂ ಮುಂದೆ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಮಾಧ್ಯಮದೊಂದಿಗೆ ಎ.ಟಿ. ರಾಮಸ್ವಾಮಿ ಮಾತನಾಡಿ, ಅರಕಲಗೂಡು ತಾಲೂಕು ಶ್ರೀ ಅರಸೀಕಟ್ಟೆ ಅಮ್ಮನವರ ದೇವಾಲಯದ ಸುತ್ತ ಮುತ್ತಾ ಕಾನೂನು ಬಾಹಿರವಾಗಿ ೫೦ಕ್ಕೂ ಹೆಚ್ಚು ಹಂದಿ, ಕೋಳಿ, ಕುರಿ, ಊಟದ ಹಾಲ್‌ಗಳು ಮತ್ತು ಇತರೆ ವಾಣಿಜ್ಯ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ವಾಣಿಜ್ಯ ವಹಿವಾಟುಗಳಿಗೆ ಯಾವುದೇ ಪ್ರಾಧಿಕಾರದಿಂದ ಅನುಮತಿಯನ್ನು ಪಡೆದಿರುವುದಿಲ್ಲ. ಪಂಚಾಯಿತಿಯಿಂದ ನೋಟಿಸ್ ಕೊಟ್ಟರು ಉತ್ತರ ಕೊಡುತ್ತಿಲ್ಲ ಎಂದು ಪಂಚಾಯಿತಿಯವರೆ ದೂರು ಕೊಟ್ಟಿದ್ದಾರೆ.
ಈ ಸ್ಥಳದಲ್ಲಿ ಬಹಿರಂಗವಾಗಿ ಹರಾಜು ಹಾಕಿದರೇ ವರ್ಷಕ್ಕೆ ಕನಿಷ್ಠ ಒಂದು ಕೋಟಿ ರು.ಗಳ ಆದಾಯ ಬರುತ್ತದೆ. ಈಗಾಗಲೇ ಸಮಿತಿ ವತಿಯಿಂದ ಜಪಂ ಸಿಇಒಗೆ ಈ ಬಗ್ಗೆ ಬರೆದು ಕೊಡಲಾಗಿದೆ. ಸುಮ್ಮನಿರುವುದರಿಂದ ಸ್ಥಳೀಯ ಸಂಸ್ಥೆಗಳ ಆದಾಯದಲ್ಲಿ ತುಂಬ ನಷ್ಟವಾಗಿರುತ್ತದೆ. ಬಲಿಕೊಟ್ಟ ಪ್ರಾಣಿಗಳತ್ಯಾಜ್ಯ ಹಾಗೂ ಊಟದ ತ್ಯಾಜ್ಯ ಜೊತೆಗೆ ದೇವಸ್ಥಾನದ ಸುತ್ತ ಶುಚಿತ್ವದ ಸಮಸ್ಯೆ ಇದ್ದು, ಈ ಬಗ್ಗೆ ಸಂಬಂಧಪಟ್ಟವರು ಯಾರು ಗಮನವಹಿಸದೇ ರೋಗ-ರುಜಿನಗಳು ಹರಡಲು ಕಾರಣವಾಗಿದೆ ಎಂದು ದೂರಿದರು. ದೇವಾಲಯದ ಸುತ್ತಮುತ್ತ ಖಾಸಗಿ ಜಮೀನುಗಳಲ್ಲಿ ಊಟದ ಹಾಲ್‌ಗಳು ತಲೆ ಎತ್ತಿವೆ. ಇವುಗಳ ನಿರ್ಮಾಣಕ್ಕೆ ಯಾವುದೇ ಪರವಾನಗಿಯನ್ನೂ ಪಡೆದಿಲ್ಲ. ಈ ಊಟದ ಹಾಲ್‌ಗಳಿಂದ ಅಕ್ಕಪಕ್ಕದ ಪರಿಸರ ಹಾಳಾಗುತ್ತಿದೆ. ಹಾಲ್‌ಗಳಲ್ಲಿ ಊಟದ ನಂತರ ಹೊರಬರುವ ತ್ಯಾಜ್ಯಗಳನ್ನು ಸಮೀಪದ ಗುಂಡಿಗಳಲ್ಲಿ ಹಾಕುತ್ತಿದ್ದಾರೆ. ಅಲ್ಲಿಂದ ನಾಯಿಗಳು ಹಾಗೂ ಹದ್ದುಗಳು ಆ ತ್ಯಾಜ್ಯವನ್ನು ಎಳೆದಾಡಿ ಎಲ್ಲೆಂದರಲ್ಲಿ ಬಿಸಾಡುತ್ತಿವೆ. ಗಾಳಿಯಲ್ಲಿ ಊಟದ ಎಲೆಗಳು ಹಾರಾಡುತ್ತಿವೆ. ಕಡೆಗೆ ಈ ತ್ಯಾಜ್ಯಗಳು ದೇವಾಲಯದ ಸುತ್ತಮುತ್ತಲೂ ಬಂದು ಬೀಳುತ್ತಿವೆ. ಇನ್ನು ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಕೋಳಿ ಹಾಗೂ ಹಂದಿ ಅಂಗಡಿಗಳಿಂದ ಇಡೀ ಪರಿಸರವೇ ಹಾಳಾಗಿದೆ. ಕೋಳಿ ಮತ್ತು ಹಂದಿಗಳನ್ನು ಸ್ವಚ್ಛ ಮಾಡಿದ ನಂತರ ಬರುವ ತ್ಯಾಜ್ಯಗಳನ್ನು ಸಮೀಪದಲ್ಲೇ ವಿಲೇವಾರಿ ಮಾಡುತ್ತಿರುವುದರಿಂದ ಇಡೀ ಪರಿಸರ ಗಬ್ಬು ನಾರುತ್ತಿದೆ. ಈ ಅಂಗಡಿಗಳ ಮೇಲೆ ಯಾವುದೇ ಹಿಡಿತ ಇಲ್ಲದಂತಾಗಿದೆ. ಹಾಗಾಗಿ ಇಲ್ಲಿ ಕಾಣದ ಕೆಲ ಕೈಗಳು ಲಾಭ ಮಾಡಿಕೊಳ್ಳುತ್ತಿವೆ ಎಂದು ಶಂಕೆ ವ್ಯಕ್ತಪಡಿಸಿದರು.ವಾಣಿಜ್ಯ ವಹಿವಾಟುಗಳು ಕಾನೂನು ವಿರುದ್ಧವಾಗಿ ನಡೆಸಲು ಮತ್ತು ಸ್ವಚ್ಛತೆಯನ್ನು ಕಾಪಾಡಲು ಅವಶ್ಯಕ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುವುದನ್ನು ನೋಡಿಕೊಂಡು ಸಂಬಂಧಿಸಿದ ಅಧಿಕಾರಿಗಳು, ನೌಕರ ವರ್ಗದವರು ಮೌನವಾಗಿರುವುದನ್ನು ನೋಡಿದರೆ ಶಾಮೀಲಾಗಿರಬಹುದು ಎಂದು ಆರೋಪಿಸಿದರು. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.