ಹಂಪಿಯಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

| Published : Oct 26 2024, 01:02 AM IST / Updated: Oct 26 2024, 01:03 AM IST

ಸಾರಾಂಶ

ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ವಿರೂಪಾಕ್ಷೇಶ್ವರ ರಥ ಬೀದಿಯಲ್ಲಿ ಶುಕ್ರವಾರ ಜೆಸಿಬಿ ಬಳಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ಹಿಂದೆ ಹೋಟೆಲ್‌ವೊಂದರಲ್ಲಿ ಸಿಲಿಂಡರ್‌ ಸ್ಫೋಟಗೊಂಡ ಸ್ಥಳದಲ್ಲೇ ಈಗ ಶೆಡ್‌ ನಿರ್ಮಾಣ ಮಾಡಲಾಗಿದ್ದು, ಇದನ್ನು ಗುರುತಿಸಿ ಜೆಸಿಬಿ ಬಳಸಿ ತೆರವು ಕಾರ್ಯ ನಡೆಸಲಾಯಿತು. ಈ ಮಧ್ಯೆ ಕೆಲ ಸ್ಥಳೀಯರು ಆಗಮಿಸಿ ತೆರವು ಕಾರ್ಯಾಚರಣೆ ನಿಲ್ಲಿಸಲು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ವಯಂ ತೆರವು ಮಾಡಿಕೊಳ್ಳಲು ಒಪ್ಪಿದ ಹಿನ್ನೆಲೆಯಲ್ಲಿ ಮೂರು ದಿನಗಳ ಗಡವು ನೀಡಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ನದಿ ತೀರದಲ್ಲಿ ನಿರ್ಮಾಣ ಮಾಡಲಾಗಿರುವ ಅಕ್ರಮ ಕಟ್ಟಡವನ್ನು ಸ್ವಯಂ ತೆರವು ಮಾಡಿಕೊಳ್ಳುವ ಪ್ರಮೇಯವು ನಡೆಯಿತು. ಪ್ರಾಧಿಕಾರದ ಅಧಿಕಾರಿಗಳು ಈ ಕಟ್ಟಡದ ಬಳಿಯೂ ತೆರಳಿ ಪರಿಶೀಲನೆ ನಡೆಸಿದರು.

ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ. ರಂಗನಾಥ, ತಹಸೀಲ್ದಾರ್‌ ಶ್ರುತಿ ಎಂ.ಎಂ., ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಭರಣಿಧರನ್‌, ತೇಜೇಶ್ವರ, ಪಿಡಿಒ ಗಂಗಾಧರ, ಪಿಎಸ್‌ಐ ಶಿವಕುಮಾರ ನಾಯ್ಕ ಮತ್ತಿತರರಿದ್ದರು.

ರಾಜಕಾರಣಿಗಳ ಒತ್ತಡ:

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಹಿಂಬದಿಯ ನದಿ ತೀರದಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಪ್ರಭಾವಿ ರಾಜಕಾರಣಿಗಳು ಉನ್ನತ ಅಧಿಕಾರಿಗಳಿಗೆ ಫೋನ್‌ ಮಾಡಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲು ಒತ್ತಡ ಹೇರಿದ್ದಾರೆ.

ಹಂಪಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಇದನ್ನು ಉಲ್ಲಂಘಿಸಿ ಕಂದಾಯ ಹಾಗೂ ಕೃಷಿ ಜಮೀನುಗಳಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಈ ನಡುವೆ ತೆರವುಗೊಳಿಸಲು ಅಧಿಕಾರಿಗಳು ಮುಂದಾದರೆ, ರಾಜಕೀಯ ಒತ್ತಡ ಹೇರಲಾಗುತ್ತಿದೆ. ಹಾಗಾಗಿ ಅಧಿಕಾರಿಗಳು ಈಗ ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರ ಸದ್ಯ ಎರಡು ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ, ಕೃಷಿ ಮತ್ತು ಕಂದಾಯ ಜಾಗಗಳಲ್ಲಿ 45ಕ್ಕೂ ಅಧಿಕ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಈ ಕಟ್ಟಡಗಳನ್ನು ತೆರವುಗೊಳಿಸಲಿದ್ದಾರೆ ಎಂಬ ಆತಂಕದಿಂದ ರಾಜಕೀಯ ಒತ್ತಡ ತರಲಾಗುತ್ತಿದೆ ಎಂದು ವಿಜಯನಗರ ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಒಂದು ಕಡೆಯಲ್ಲಿ ಅಕ್ರಮ ಕಟ್ಟಡ ತೆರವು ಮಾಡಲು ಹೊರಟರೆ, ರಾಜಕೀಯ ಒತ್ತಡ ತರುತ್ತಿರುವುದು ಅಧಿಕಾರಿಗಳಿಗೂ ಬೇಸರ ತರಿಸಿದೆ. ನ್ಯಾಯಾಲಯದ ಆದೇಶ ಹಾಗೂ ನಿಯಮಾವಳಿ ಪ್ರಕಾರವೇ ಕಾರ್ಯಾಚರಣೆ ನಡೆಸುವ ಇರಾದೆಯನ್ನು ಜಿಲ್ಲಾಡಳಿತ ಹೊಂದಿದೆ. ಈ ರೀತಿ ಅಕ್ರಮ ಕಟ್ಟಡದವರಿಗೆ ರಾಜಕೀಯ ವ್ಯಕ್ತಿಗಳು ಬೆಂಬಲ ನೀಡಿದರೆ ಹೇಗೆ ಎಂಬ ಪ್ರಶ್ನೆಯೂ ಈಗ ಎದ್ದಿದೆ.