ಅಕ್ರಮವಾಗಿ ಗೋ ಹತ್ಯೆ ಶಂಕೆ: ಸೂಕ್ತ ಕ್ರಮಕ್ಕೆ ಆಗ್ರಹ

| Published : Feb 12 2024, 01:35 AM IST

ಸಾರಾಂಶ

ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಅಸ್ಸಾಮಿ ಕಾರ್ಮಿಕರು ಆಗಮಿಸಿದ್ದು ಅವರು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಿ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಅಕ್ರಮವಾಗಿ ಗೋ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಸಮೀಪದ ಕೊಳಕೇರಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಪೋಕ್ಲು - ಕಕ್ಕಬ್ಬೆ ಮುಖ್ಯ ರಸ್ತೆಯ ಕೊಳಕೇರಿ ಗ್ರಾಮದಲ್ಲಿಯ ಮೋರಿಯ ಕೆಳಗೆ ದನದ ತ್ಯಾಜ್ಯವನ್ನು ಎಸೆಯುತ್ತಿದ್ದು ದುರ್ವಾಸನೆಯಿಂದ ಕೂಡಿದೆ. ಸ್ಥಳೀಯ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೊಂದರೆ ಆಗಿದೆ. ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಲು ಅಸ್ಸಾಮಿ ಕಾರ್ಮಿಕರು ಆಗಮಿಸಿದ್ದು ಅವರು ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡಿ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಸುಳಿವು ಹಿಡಿದ ಶ್ವಾನ :

ಕುಂಡ್ಯೋಳಂಡ ವಿಶು ಪೂವಯ್ಯ ಎಂಬವರು ತಮ್ಮ ವಾಹನದಲ್ಲಿ ಶನಿವಾರ ಸಂಜೆ ಸಂಚರಿಸುವ ಸಂದರ್ಭ ಕೊಳಕೇರಿ ಮುಖ್ಯ ರಸ್ತೆಯಲ್ಲಿ ಶ್ವಾನ ಒಂದು ದನದ ಬಾಲವನ್ನು ಕಚ್ಚಿ ಕೊಂಡು ಓಡಾಡುತ್ತಿರುವುದನ್ನು ಕಂಡು ಚಕಿತಗೊಂಡ ಅವರು ಪರಿಶೀಲಿಸಿದಾಗ ಮೋರಿಯ ಕೆಳಗಡೆ ದನದ ತಲೆ ಹಾಗೂ ತ್ಯಾಜ್ಯಗಳನ್ನು ತುಂಬಿದ ಚೀಲ ಒಂದು ಪತ್ತೆಯಾಗಿದೆ.

ಗ್ರಾಮದ ರಸ್ತೆ ಬದಿಯ ಮೋರಿಯಲ್ಲಿ ತ್ಯಾಜ್ಯ ಎಸೆಯಲಾಗಿದ್ದು ದುರ್ವಾಸನೆ ಬೀರುತ್ತಿದ್ದು ಸ್ಥಳೀಯರು ಇದರಿಂದಾಗಿ ಸಮಸ್ಯೆ ಅನುಭವಿಸುವಂತಾಗಿದೆ. ತ್ಯಾಜ್ಯದಿಂದಾಗಿ ಪರಿಸರ ಮಾಲಿನ್ಯವಾಗಿದೆ. ಕೊಳಕೇರಿ ಗ್ರಾಮದಲ್ಲಿ ದನದ ಮಾಂಸ ವ್ಯಾಪಕ ಬಳಕೆ ಆಗುತ್ತಿದೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ನೀರು ಕಲುಷಿತಗೊಳ್ಳುತ್ತಿದೆ ಸಂಬಂಧ ಪಟ್ಟ ಇಲಾಖೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಕನ್ನಂಬೀರ ಸುದಿ ತಿಮ್ಮಯ್ಯ , ಕೊಳಕೇರಿ ಗ್ರಾಮಸ್ಥ ಕುಂಡ್ಯೋಳಂಡ ರಮೇಶ್ ಮುದ್ದಯ್ಯ , ಕುಂಡ್ಯೋಳಂಡ ವಿಷು ಪೂವಯ ಆಗ್ರಹಿಸಿ ತಮ್ಮ ಸಮಾಧಾನ ವ್ಯಕ್ತಪಡಿಸಿದ್ದಾರೆ.