ರಾಣಿಬೆನ್ನೂರು: ನಗರದಲ್ಲಿ ಆಟೋಗಳಿಗೆ ಅಕ್ರಮವಾಗಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಶನಿವಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಹಂತೇಶ ಭುಸಗೋಳ ದಂಡ ಮತ್ತು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಶಿವಕುಮಾರ ಚನ್ನಯ್ಯ ಹಿರೇಮಠ, ನಾಗರಾಜ ನಾಗಯ್ಯ ಹನಗೋಡಿಮಠ ಶಿಕ್ಷೆಗೆ ಒಳಗಾದ ಆರೋಪಿಗಳು. ಆರೋಪಿಗಳು ಆಟೋ ರಿಕ್ಷಾಗಳಿಗೆ ಬಳಸುವ ಸಣ್ಣ ಸಿಲಿಂಡರ್‌ಗಳಿಗೆ ಯಂತ್ರದ ಮೂಲಕ ಗ್ಯಾಸ್ ತುಂಬುತ್ತಿದ್ದರು. ಈ ಹಿನ್ನೆಲೆಯಲ್ಲಿ 2-10-2013ರಂದು ಆಹಾರ ಇಲಾಖೆ ಸಹಯೋಗದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳಿಗೆ ತಲಾ ಐದು ವರ್ಷ ಶಿಕ್ಷೆ ಹಾಗೂ 80 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷಕುಮಾರ ಎಸ್.ಎಂ. ವಾದ ಮಂಡಿಸಿದ್ದರು.