ಅಕ್ರಮವಾಗಿ ತೋಟಕ್ಕೆ ವಿದ್ಯುತ್ ಸಂಪರ್ಕದಿಂದಾಗಿ ಮೂರು ವರ್ಷದ ಗಂಡು ಕರಡಿ ಮೃತಪಟ್ಟಿದ್ದು, ಮೃತದೇಹವನ್ನು ತೋಟದ ಕಾಲುವೆಯಲ್ಲಿ ಹೂತು ಹಾಕಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಅಕ್ರಮವಾಗಿ ತೋಟಕ್ಕೆ ವಿದ್ಯುತ್ ಸಂಪರ್ಕದಿಂದಾಗಿ ಮೂರು ವರ್ಷದ ಗಂಡು ಕರಡಿ ಮೃತಪಟ್ಟಿದ್ದು, ಮೃತದೇಹವನ್ನು ತೋಟದ ಕಾಲುವೆಯಲ್ಲಿ ಹೂತು ಹಾಕಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ.ಪಟ್ಟಣದ ಸಮೀಪದ ದೊಡ್ಡಸೀಗೆ ಗ್ರಾಮದ ಗೋವಿಂದಪ್ಪಗೆ ಸೇರಿದ ಯಡೇಹಳ್ಳಿ ಗ್ರಾಮದ ಸರ್ವೇ ನಂ. 54ರ ಅಡಿಕೆ ತೋಟದ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಹರಿಸಿದ್ದ ಪರಿಣಾಮ ಕರಡಿಯೊಂದು ಬಂದು ವಿದ್ಯುತ್ ಸಂಪರ್ಕಕ್ಕೆ ಸಿಕ್ಕು ಸ್ಥಳದಲ್ಲೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಿಂದಾಗಿ ಕರಡಿಯ ಮೃತದೇಹವನ್ನು ತೋಟದ ಕಾಲುವೆಯೊಂದಲ್ಲಿ ಹೂತು ಹಾಕಲಾಗಿತ್ತು ಎಂದು ತಿಳಿದು ಬಂದಿದೆ.
ಭದ್ರಾವತಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ. ರವೀದ್ರ ಕುಮಾರ್, ಚನ್ನಗಿರಿ ಸಹಾಯಕ ಸಂರಕ್ಷಣಾಧಿಕಾರಿ ಶ್ರೀಧರ್ ತೆಗ್ಗಿನಮನೆ ಮಾರ್ಗದರ್ಶನದ ಮೇರೆಗೆ ಶಾಂತಿಸಾಗರ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಈ ಕುರಿತು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ. ಕರಡಿ ಮೃತದೇಹದೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಅಕ್ರಮ ವಿದ್ಯುತ್ ಬೇಲಿ ಅಳವಡಿಕೆ ಹಾಗೂ ವನ್ಯಜೀವಿ ಸಾವಿನ ಕುರಿತು ಕಾನೂನು ಕ್ರಮ ಜರುಗಿಸಲಾಗಿದೆ.ಪ್ರಕರಣದಲ್ಲಿ ಆರೋಪಿಯನ್ನು ಭದ್ರಾವತಿ 3ನೇ ಹೆಚ್ಚುವರಿ ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮನೋಹರ್, ಮನು, ಶಿವಕುಮಾರ್, ಅರಣ್ಯ ಪಾಲಕರಾದ ಶಿವನಗೌಡ, ರಂಗನಾಥ, ಹನುಮಂತಪ್ಪ, ಮಹಮ್ಮದ್ ಖಾಲಿದ್. ನಯಾಜ್, ಭೀಮಶಂಕರ್, ನಾವಿ, ಅನಿಲ್, ಬಸವರಾಜ, ಶಿವು, ಲಕ್ಷ್ಮಣ, ರಂಗಪ್ಪ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.