ಪರಿಶೀಲನೆ ಸಮಯದಲ್ಲಿ ೩೦ ಮನೆಗಳ ಮಾಲೀಕರ ಪೈಕಿ ೧೦ ಮನೆಗಳಲ್ಲಿ ಮೀಟರ್ ಇದ್ದು, ೧೭ ಮನೆಗಳ ಬಾಗಿಲು ಬಂದ್ ಆಗಿದ್ದರಿಂದ ಆ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರ ಜೊತೆಗೆ ೩ ಮನೆಗಳ ಸಂಪರ್ಕ ಅನಧಿಕೃತವೆಂದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳು ಕಾಲೋನಿಯಲ್ಲಿರುವ ೨೦೦ಕ್ಕೂ ಹೆಚ್ಚು ಮನೆಗಳ ಮಾಲೀಕರು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಸೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಗುರುವಾರ ತಮಿಳು ಕಾಲೋನಿಯಲ್ಲಿ ಸಾಮೂಹಿಕ ಪರಿಶೀಲನೆ ನಡೆಸಿದರು.ಜಾಗೃತ ದಳದ ಜಿಲ್ಲಾ ವರಿಷ್ಠಾಧಿಕಾರಿ ಸವಿತಾ ಹೂಗಾರ್, ಡಿವೈಎಸ್ಪಿ ಪೃಥ್ವಿ, ಸಿಪಿಐ ಭುವಿತಾ, ಸೆಸ್ಕಾಂ ಅಧೀಕ್ಷಕ ಎಂಜಿನಿಯರ್ ಚಂದ್ರಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತ ಚೇತನ್ ಅವರು ಪೊಲೀಸ್ ಭದ್ರತೆಯಲ್ಲಿ ಸ್ಥಳಕ್ಕೆ ತೆರಳಿ ಅಧಿಕಾರಿಗಳ ಸೂಚನೆಯಂತೆ ಮೊದಲ ಹಂತದಲ್ಲಿ ೩೦ ಮನೆಗಳ ತಪಾಸಣೆಯನ್ನು ನಡೆಸಲಾಯಿತು.
ಪರಿಶೀಲನೆ ಸಮಯದಲ್ಲಿ ೩೦ ಮನೆಗಳ ಮಾಲೀಕರ ಪೈಕಿ ೧೦ ಮನೆಗಳಲ್ಲಿ ಮೀಟರ್ ಇದ್ದು, ೧೭ ಮನೆಗಳ ಬಾಗಿಲು ಬಂದ್ ಆಗಿದ್ದರಿಂದ ಆ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರ ಜೊತೆಗೆ ೩ ಮನೆಗಳ ಸಂಪರ್ಕ ಅನಧಿಕೃತವೆಂದು ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ಮೊದಲ ದಿನ ೩೦ ಮನೆಗಳ ಪೈಕಿ ೨೦ ಮನೆಗಳ ವಿದ್ಯುತ್ ಸಂಪರ್ಕವನ್ನು ಅಧಿಕಾರಿಗಳು ಕಡಿತಗೊಳಿಸಿದ್ದಾರೆ.ಮೂರು ಮನೆಯ ಮಾಲೀಕರಿಗೆ ದಂಡ ವಿಧಿಸುವ ತೀರ್ಮಾನ ಮಾಡಲಾಗಿದೆ. ಎಷ್ಟು ದಂಡ ವಿಧಿಸಬೇಕೆಂಬ ಕುರಿತಂತೆ ನಿರ್ಧಾರ ಮಾಡಲಾಗುವುದು ಎಂದು ಸೆಸ್ಕ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅನಧಿಕೃತವಾಗಿ ಶೆಡ್-ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದಿದ್ದವರ ವಿರುದ್ಧ ಜಾಗೃತದಳದ ಅಧಿಕಾರಿಗಳು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಸೆಸ್ಕಾಂ ಅಧಿಕಾರಿಗಳು ನೀಡಿದ ಸೂಚನೆಯಂತೆ ಬೆಳಗ್ಗೆ ೧೧ ಗಂಟೆಯಿಂದ ಸುಮಾರು ೨ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಿಗದಿಪಡಿಸಿದ ೩೦ ಮನೆಗಳ ತಪಾಸಣೆ ನಡೆಸಲಾಗಿದೆ. ಮುಂದೆ ಹಿರಿಯ ಅಧಿಕಾರಿಗಳು ತಿಳಿಸಿದಾಗ ಮತ್ತೆ ಪರಿಶೀಲನೆ ನಡೆಸಲಾಗುವುದು. ಒಮ್ಮೆಲೆ ಎಲ್ಲವನ್ನೂ ಕಾರ್ಯಾಚರಣೆಯನ್ನು ನಡೆಸದೆ ಹಂತ ಹಂತವಾಗಿ ಅಕ್ರಮ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಚೇತನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.೨೦೦೯ರಿಂದಲೂ ಎಲ್‌ಟಿ ಲೈನ್‌ಗಳಿಗೆ ಕೊಕ್ಕೆ ಹಾಕಿಕೊಂಡು ಅಕ್ರಮವಾಗಿ ೨೦೦ಕ್ಕೂ ಹೆಚ್ಚು ಶೆಡ್-ಮನೆಗಳ ಮಾಲೀಕರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿರುವ ಬಗ್ಗೆ ಸೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಜಾಗೃತ ದಳದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪತ್ರ ಬರೆದು ಅದನ್ನು ಪರಿಶೀಲನೆ ನಡೆಸುವ ಮೂಲಕ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪತ್ರ ಬರೆದಿದ್ದರು.
ಆ ನಂತರದಲ್ಲೂ ಅಕ್ರಮ ವಿದ್ಯುತ್ ಸಂಪರ್ಕ ಕಡಿತಕ್ಕೆ ಸೂಕ್ತ ಪೊಲೀಸ್ ಭದ್ರತೆ ಸಿಗದೆ ಜಾಗೃತದಳದ ಸಿಬ್ಬಂದಿ ಕೆಲ ದಿನಗಳ ಹಿಂದೆ ವಾಪಸ್ ತೆರಳಿದ್ದರು. ಬಳಿಕ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ತಮಿಳು ಕಾಲೋನಿ ತೆರವುಗೊಳಿಸುವ ಸಂಬಂಧ ಆಮರಣಾಂತ ಉಪವಾಸ ಆರಂಭಿಸಿದರು. ಅವರು ಜಿಲ್ಲಾಡಳಿತದ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ತಮಿಳು ಕಾಲೋನಿಯ ಶೆಡ್-ಮನೆಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿರುವುದನ್ನು ಕಡಿತಗೊಳಿಸಬೇಕೆಂಬ ಬೇಡಿಕೆಯೂ ಇತ್ತು.ಕೆ.ಆರ್.ರವೀಂದ್ರ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿದ್ದ ಜಿಲ್ಲಾಡಳಿತ ಮರುದಿನವೇ ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ಮನೆಗಳ ತಪಾಸಣೆಗಿಳಿದು ೨೦ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ತಮಿಳು ಕಾಲೋನಿ ತೆರವಿನ ವಿಚಾರದಲ್ಲಿ ಮೊದಲ ಹೆಜ್ಜೆ ಇಟ್ಟಂತಾಗಿದೆ.