ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಜೊತೆಗೆ ಯೋಜನೆಯ ರೂಪುರೇಷೆಗೆ ತಕ್ಕಂತೆ ಗುತ್ತಿಗೆದಾರರು ಕೆಲಸ ನಿರ್ವಹಿಸಬೇಕು. ವಿವೇಕಾನಂದ ನಗರ ಬಡಾವಣೆಗೆ ಎರಡು ತಿಂಗಳೊಳಗೆ ಹೊಸ ವಿದ್ಯುತ್ ದೀಪಗಳನ್ನು ಅಳವಡಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕೆರೆ ಅಂಗಳದ ವಿವೇಕಾನಂದನಗರ ಬಡಾವಣೆಗೆ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಸೂಚನೆ ನೀಡಿದರು.

ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ನಡೆದ ವಿವೇಕಾನಂದನಗರ ನಿವಾಸಿಗಳು ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಳಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ೧೬ ಕೋಟಿ ರು. ಹಣವನ್ನು ಪ್ರಾಧಿಕಾರದಿಂದ ಬಿಡುಗಡೆ ಮಾಡಲಾಗಿದೆ. ಲೋಪವಾಗದ ರೀತಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಕಾಮಗಾರಿಯ ಉಳಿದ ಹಣವನ್ನು ಪ್ರಾಧಿಕಾರದಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನೀರಾವರಿ ಇಲಾಖೆ ಅಧಿಕಾರಿ ಮೇಘನಾ ಅವರಿಗೆ ತಿಳಿಸಿದರು.

ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಜೊತೆಗೆ ಯೋಜನೆಯ ರೂಪುರೇಷೆಗೆ ತಕ್ಕಂತೆ ಗುತ್ತಿಗೆದಾರರು ಕೆಲಸ ನಿರ್ವಹಿಸಬೇಕು. ವಿವೇಕಾನಂದ ನಗರ ಬಡಾವಣೆಗೆ ಎರಡು ತಿಂಗಳೊಳಗೆ ಹೊಸ ವಿದ್ಯುತ್ ದೀಪಗಳನ್ನು ಅಳವಡಿಸಬೇಕು ಎಂದು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿದ್ದ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್.ರಾಜು ಮಾತನಾಡಿ, ಬಡಾವಣೆ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಬಗ್ಗೆ ಪ್ರಾಧಿಕಾರ ಬಡಾವಣೆಯ ರಸ್ತೆ ಹಾಗೂ ತಿರುವುಗಳ ಕುರಿತು ನಕ್ಷೆಯನ್ನು ನೀವು ಸಿದ್ಧಪಡಿಸಿಕೊಟ್ಟರೆ ನಮ್ಮ ಸಂಘದಿಂದಲೇ ರಸ್ತೆಗಳಲ್ಲಿ ನಾಮಫಲಕ ಅಳವಡಿಸಲು ತೀರ್ಮಾನ ಕೈಗೊಳ್ಳಲಾಗುವುದು. ಇದಕ್ಕೆ ಸಹಕರಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರವೀಣ್, ವಾರದೊಳಗೆ ದಾಖಲೆಗಳನ್ನು ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಪ್ರಾಧಿಕಾರ ನಿರ್ದೇಶಕರಾದ ಸಾತನೂರು ಮಹೇಶ್, ಕಮಲಾರಾಜು, ಇದ್ರೀಶ್‌ಖಾನ್, ಇಂಜಿನಿಯರ್ ಶ್ರೀನಿವಾಸ್ ಹಾಗೂ ಬಡಾವಣೆಯ ಹಿತರಕ್ಷಣಾ ಸಮಿತಿಯ ವಕೀಲ ರಾಜು,ಪದಾಧಿಕಾರಿಗಳಾದ ಭೀಮ್‌ರಾಜ್, ಕೆ.ಆತ್ಮಾನಂದ, ನಿವೃತ್ತ ತಹಸೀಲ್ದಾರ್ ರಾಮಪ್ಪ, ದೇವರಾಜು, ಭೀಮಣ್ಣ, ಟೆಂಪೋ ಮಂಜಣ್ಣ, ಸತೀಶ್ ಇತರರಿದ್ದರು.

ಖಾಲಿ ಜಾಗದ ನಿವೇಶನದಾರರಿಗೆ ಎಚ್ಚರಿಕೆ

ವಿವೇಕಾನಂದನಗರ ಬಡಾವಣೆಯಲ್ಲಿ ನಿವೇಶನ ಪಡೆದಿರುವ ಮಾಲೀಕರು ೧೫ ದಿನದೊಳಗೆ ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಎಚ್ಚರಿಕೆ ನೀಡಿದರು.

ನಿವೇಶನದಾರರು ತಮ್ಮ ನಿವೇಶನಗಳನ್ನು ಸ್ವಚ್ಛತೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದು, ಹಲವು ಬಾರಿ ಪ್ರಾಧಿಕಾರದಿಂದ ಜಂಗಲ್ ಕಟಿಂಗ್ ಮಾಡಿ ಬಡಾವಣೆಯ ನಿವಾಸಿಗಳಿಗೆ ಸಹಕರಿಸುವಂಥ ಕೆಲಸ ಮಾಡಿದೆ. ಅದಾಗಿಯೂ ನಿವೇಶನದಾರರು ತಮ್ಮ ನಿವೇಶನಗಳತ್ತ ಗಮನಹರಿಸದ ಕಾರಣ ಗಿಡ-ಗಂಟೆಗಳು ಬೆಳೆದುಕೊಂಡು ಸುತ್ತಮುತ್ತಲಿನ ನಿವಾಸಿಗಳ ಮನೆಗಳತ್ತ ಹಾವು, ಚೇಳು ಸೇರಿದಂತೆ ವಿಷಜಂತುಗಳ ಹಾವಳಿಯಿಂದ ಆತಂಕದಲ್ಲಿದ್ದಾರೆ.

ಆದ್ದರಿಂದ ಪ್ರಾಧಿಕಾರದ ವತಿಯಿಂದ ನಿವೇಶನಗಳ ಮಾಲೀಕರು ೧೫ ದಿನದೊಳಗೆ ಗಿಡಗಂಟೆಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಪ್ರಾಧಿಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.