ಸರ್ಕಾರ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಪ್ರವೇಶ; ದುರ್ಬಳಕೆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ: ಡಿಸಿ

| Published : Sep 20 2024, 01:39 AM IST

ಸರ್ಕಾರ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಪ್ರವೇಶ; ದುರ್ಬಳಕೆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಸಾಗುವಳಿ, ಮನೆ ನಿರ್ಮಾಣ, ವಾಣಿಜ್ಯೋದ್ದೇಶಕ್ಕೆ ದುರ್ಬಳಕೆ ಹಾಗೂ ಪರಭಾರೆ ಮಾಡುತ್ತಿರುವ ವಿರುದ್ಧ ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಕಾಯ್ದಿರಿಸಿದ ಜಮೀನಿನಲ್ಲಿ ಅಕ್ರಮ ಸಾಗುವಳಿ, ಮನೆ ನಿರ್ಮಾಣ, ವಾಣಿಜ್ಯೋದ್ದೇಶಕ್ಕೆ ದುರ್ಬಳಕೆ ಹಾಗೂ ಪರಭಾರೆ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದ್ದು, ಅಂತಹ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಕಾಯ್ದಿರಿಸಿದ ಜಮೀನುಗಳನ್ನು ಖರೀದಿಸದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಆಟೋ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕೈಗಾರಿಕೋದ್ಯಮಿಗಳು ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ಮಹಾನಗರ ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಅಗತ್ಯವಿದ್ದಲ್ಲಿ ಒಂದೆರೆಡು ನಲ್ಲಿಗಳನ್ನು ಅಳವಡಿಸಲು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಲಾಗುವುದು. ಆದಾಗ್ಯೂ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅದರ ನಿರ್ವಹಣೆ ದೃಷ್ಟಿಯಿಂದ ಪಾಲಿಕೆಗೆ ನಿಯಮಾನುಸಾರ ಅಲ್ಪಮಟ್ಟಿನ ಹಣಪಾವತಿಸಿ ನೀರನ್ನು ಬಳಸಿಕೊಳ್ಳುವುದು ಸರಿಯಾದ ಕ್ರಮವಾಗಿದೆ ಎಂದರು.

ಕೈಗಾರಿಕಾ ವಸಾಹತು ಪ್ರದೇಶದಲ್ಲಿ ನಿರ್ಮಿಸಲಾಗಿರುವ ಹಾಗೂ ನಿರ್ಮಾಣಗೊಂಡಿರುವ ಕಟ್ಟಡಗಳಲ್ಲಿ ಸಹಜವಾಗಿ ಮಳೆ ನೀರು ಸಂಗ್ರಹಿಸುವಂತೆ ಹಾಗೂ ಅಂತರ್ಜಲ ಹೆಚ್ಚಿಸುವಲ್ಲಿ ವಿಶೇಷ ಗಮನಹರಿಸಬೇಕು. ಅಗತ್ಯವಿದ್ದಲ್ಲಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿಗಾಗಿ ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ನಿಧಿಗೆ ಕೈಗಾರಿಕಾ ಪ್ರದೇಶದಲ್ಲಿನ ಮೆ.ಶಾಹಿ ಎಕ್ಸ್‌ಪೋರ್ಟ್ಸ್ ಘಟಕದಿಂದ ವಾಯುಮಾಲಿನ್ಯವಾಗುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲಿನ ಕೈಗಾರಿಕಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಉಸಿರಾಡುವುದು ಕಷ್ಟಕರವಾಗಿದೆ. ಇದರಿಂದಾಗಿ ಅನಾರೋಗ್ಯಕ್ಕೆ ಈಡಾಗುವ ಬೀತಿಯಿಂದ ಸಿಬ್ಬಂದಿಗಳು ಕೆಲಸದಿಂದ ವಿಮುಖರಾಗುತ್ತಿದ್ದಾರೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಗಮನಸೆಳೆಯ ಲಾಗಿದ್ದು, ಯಾವುದೇ ಕ್ರಮವಾಗಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ ಸದಸ್ಯರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೆ ತಕ್ಷಣದ ನಿಯಂತ್ರಣ ಕ್ರಮಗಳನ್ನು ಕೈಗೊಂಡು ಮಾಹಿತಿ ನೀಡುವಂತೆ ಸೂಚಿಸಿದ ಅವರು, ಸ್ಥಳಕ್ಕೆ ಖುದ್ದು ಭೇಟಿ ನೀಡಿ, ಕಾರ್ಮಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಯಾರಿಗೂ ತೊಂದರೆಯಾಗದಂತೆ ಕ್ರಮವಹಿಸವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಫೌಂಡ್ರಿ ಕೈಗಾರಿಕಾ ಘಟಕಗಳ ಅನುಪಯುಕ್ತ ಮರಳನ್ನು ವಿಲೇಮಾಡಲು ಭೂಮಿಯನ್ನು ನೀಡುವಂತೆ ಕೈಗಾರಿಕೋದ್ಯಮಿ ಗಳು ಮನವಿ ಸಲ್ಲಿಸಿದಾಗ, ಕೋರಿಕೆಯ ಪ್ರದೇಶದ ವಾಸ್ತವ ಸಂಗತಿಗಳನ್ನು ಪರಿಶೀಲಿಸಿ, ಭೂಮಿ ಮಂಜೂರು ಮಾಡಲು ವರದಿ ನೀಡುವಂತೆ ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದರು.

ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿ 110 ಕೆ.ವಿ.ವಿದ್ಯುತ್ ಉಪಕೇಂದ್ರ ಸ್ಥಾಪಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದ ಅವರು, ಸೊರಬ ತಾಲೂಕು ಆನವಟ್ಟಿ ಸಮೀಪ ಬಾರಂಗಿಯಲ್ಲಿರುವ ಮೆ.ಬೆಸ್ಟಲರಿ ಇಂಡಸ್ಟ್ರೀಸ್‍ಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡದಿರುವುದರಿಂದ ಘಟಕ ನಡೆಸುವುದು ಕಷ್ಟಸಾಧ್ಯವಾಗಿದೆ. ನಿರಂತರ ವಿದ್ಯುತ್ ಸರಬರಾಜು ಮಾಡಿಸುವಂತೆ ಮನವಿ ಸಲ್ಲಿಸಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮವಹಿಸುವಂತೆ ಮೆಸ್ಕಾಂನ ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರಿಗೆ ಸೂಚಿಸಿದರು.

ಭದ್ರಾವತಿ ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶದಲ್ಲಿನ ಮೆ.ಶಾಂತಿ ಇಂಡಸ್ಟ್ರೀಸ್‍ನಿಂದ ವಾಯುಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬಂದಿದ್ದು, ಸಂಬಂಧಿಸಿದ ಸಂಸ್ಥೆಯವರಿಗೆ ನೋಟೀಸ್ ಜಾರಿಗೊಳಿಸಿ, ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದರು.

ಭದ್ರಾವತಿ ನಗರಸಭೆ ವ್ಯಾಪ್ತಿಯ ಜೇಡಿಕಟ್ಟೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಿರಾಸ್ತಿಗಳ ಮೌಲ್ಯ ನಿಗಧಿಪಡಿಸುವಲ್ಲಿ ನ್ಯೂನತೆಗಳಿದ್ದು, ಅದನ್ನು ಸರಿಪಡಿಸಿ, ಜನರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಜಿಲ್ಲಾ ನೋಂದಣಾಧಿಕಾರಿ ಗಿರೀಶ್ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿರುವ ಉದ್ಯಮಿಗಳು ಅಲ್ಲಿನ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಿ, ಆಡಳಿತ ವ್ಯವಸ್ಥೆ ಸುಗಮವಾಗಿರಲು ಸಹಕರಿಸುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗಣೇಶ್, ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ಗೋಪಿನಾಥ್, ರಮೇಶ್‍ ಹೆಗ್ಡೆ, ನೋಂದಣಾಧಿಕಾರಿ ಗಿರೀಶ್, ನಾರಾಯಣಪ್ಪ, ಸುರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.