ಸಾರಾಂಶ
ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ಶೇ.4ರಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಅಧ್ಯಯನ ನಡೆಸಿ ಇದನ್ನು ಕಂಡು ಹಿಡಿದಿದ್ದು, ಈ ಕುರಿತು ಎಲ್ಲಾ ದಾಖಲೆಗಳೂ ಇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರು : ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಾನೂನು ಬಾಹಿರವಾಗಿ ಶೇ.4ರಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಅಧ್ಯಯನ ನಡೆಸಿ ಇದನ್ನು ಕಂಡು ಹಿಡಿದಿದ್ದು, ಈ ಕುರಿತು ಎಲ್ಲಾ ದಾಖಲೆಗಳೂ ಇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ನಡುವೆ ಮಹದೇವಪುರದಲ್ಲಿ ಚುನಾವಣಾ ಆಯೋಗದ ನಿಮಯ ಮೀರಿ ಮತದಾರರ ಸಂಖ್ಯೆ ಹೆಚ್ಚಳ ಆಗಿದೆ. ಚುನಾವಣಾ ಆಯೋಗ ನಿಯಮ ಮೀರಿ ಕೆಲಸ ಮಾಡುತ್ತಿದೆಯೇ? ಎಂದು ಕಿಡಿ ಕಾರಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 32,707 ಮತಗಳ ಅಂತರದಿಂದ ಮಾತ್ರ ಸೋತಿದ್ದಾರೆ. ಮಹದೇವಪುರ ಕ್ಷೇತ್ರದ ಮತ ಎಣಿಕೆ ಶುರುವಾಗುವ ಮೊದಲು 70-80 ಸಾವಿರ ಮತಗಳ ಮುನ್ನಡೆ ಕಾಂಗ್ರೆಸ್‌ನ ಮನ್ಸೂರ್ ಅಲಿ ಖಾನ್ ಹೊಂದಿದ್ದರು. ಮಹದೇವಪುರ ಕ್ಷೇತ್ರದ ಮತ ಎಣಿಕೆ ಬಳಿಕ ಬಿಜೆಪಿ 1,46,046 ಮತಗಳ ಮುನ್ನಡೆ ಪಡೆದರು.
ಈ ಬಗ್ಗೆ ಪರಿಶೀಲಿಸಿದರೆ 2023ರಿಂದ 2024ರ ವೇಳೆಗೆ ಮಹದೇವಪುರ ಮತದಾರರ ಸಂಖ್ಯೆ 52,575 ರಷ್ಟು ಹೆಚ್ಚಾಗಿದೆ. ಅಂದರೆ ಪ್ರತಿ ದಿನ 160 ಮಂದಿ ಮತಪಟ್ಟಿಗೆ ಸೇರಿದ್ದಾರೆ. ಇದರಲ್ಲಿ ಒಂದಕ್ಕಿಂತ ಹೆಚ್ಚು ಕಡೆ ನೋಂದಾಯಿಸಿಕೊಂಡವರು 11,965, ನಕಲಿ ವಿಳಾಸ ಹೊಂದಿರುವ ಮತದಾರರು 40,009, ಫಾರಂ-6 ದುರುಪಯೋಗ ಮಾಡಿಕೊಂಡು ಚಲಾವಣೆಯಾಗಿರುವ ಮತಗಳು 33,692, ಒಂದೇ ವಿಳಾಸ ಹೊಂದಿರುವ ಅನೇಕ ಮಂದಿ 10,452, ಗುರುತು ಹಿಡಿಯಲು ಸಾಧ್ಯವೇ ಇಲ್ಲದಂತ ಫೋಟೊಗಳು 4,132. ಈ ದಾಖಲೆಗಳನ್ನು ಯಾರಿಗೆ ಬೇಕಾದರೂ ನಾವು ನೀಡಲು ತಯಾರಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಗುರುಕ್ರೀತ್ ಸಿಂಗ್ ದಾಂಗ್ 26.02.2024, 27.02.2024, 28.02.2024 ಹೀಗೆ ಮೂರು ದಿನಾಂಕಗಳಲ್ಲಿ ಅರ್ಜಿ ಸಲ್ಲಿಸಿ 4 ಮತದಾರರ ಕಾರ್ಡ್ ಪಡೆದಿದ್ದಾರೆ. 116, 124, 125, 126 ಬೂತ್ ನಂಬರ್ ನಲ್ಲಿ ಈತನಿಗೆ ಬೇರೆ ಬೇರೆ ಎಪಿಕ್ ನಂಬರ್ ನೀಡಿ ಮತದಾನದ ಹಕ್ಕು ನೀಡಿದ್ದಾರೆ. ಎಪಿಕ್ ನಂಬರ್ ಅನ್ನು ಸಹ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಸಾಲು-ಸಾಲು ಆರೋಪ ಮಾಡಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹಾಜರಿದ್ದರು.