ಕನಕಗಿರಿ: ತಮ್ಮ ನಿವೇಶನವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಲ್ಲದೇ ದೌರ್ಜನ್ಯ, ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಪೊಲೀಸರು, ಪಪಂಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿ ಜಮೀನಿನ ಮಾಲಿಕ ತನ್ನ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ 5ನೇ ವಾರ್ಡ್‌ನಲ್ಲಿ ಭಾನುವಾರ ಸಂಭವಿಸಿದೆ.

ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದ ಬಸವರಾಜರೆಡ್ಡಿ ಮಾದಿನಾಳ (40) ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಬಸವರಾಜರೆಡ್ಡಿ ಮಾದಿನಾಳ ಸರ್ವೇ ನಂ.51ರಲ್ಲಿ ನಿವೇಶನ ಹೊಂದಿದ್ದು, ಅದನ್ನು ಖಾಲಿ ಬಿಟ್ಟಿದ್ದ. ಪಕ್ಕದ ಜಮೀನಿನ ಮಾಲಿಕರಾದ ಮಹಾಬಲಿಸಾಬ ಬಿಳೇಕುದುರಿ, ಹುಸೇನಿಸಾಬ್‌, ದಾದಾಪೀರ, ಶಾಬುದ್ದೀನ್ ಖಾಜಾ ಸೇರಿದಂತೆ ಕೆಲವರ ಗುಂಪು ಇದನ್ನು ಒತ್ತುವರಿ ಮಾಡಿಕೊಂಡಿದ್ದಲ್ಲದೇ ಬಸವರಾಜರೆಡ್ಡಿ ಮನೆಗೆ ನುಗ್ಗಿ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಈ ನಿವೇಶನ ಬಿಟ್ಟುಕೊಡದಿದ್ದರೆ ನಿಮ್ಮ ಕುಟುಂಬವನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಇದರಿಂದ ಮನನೊಂದು ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪತ್ನಿ ರಾಧಿಕಾ ಪೊಲೀಸರಗೆ ದೂರು ನೀಡಿದ್ದಾರೆ.

ಒತ್ತುವರಿ ಮಾಡಿಕೊಂಡಿದ್ದು, ಬೆದರಿಕೆ ಹಾಕಿರುವ ಕುರಿತು ಬಸವರಾಜ ರೆಡ್ಡಿ ಪೊಲೀಸರಿಗೆ ಹಾಗೂ ಪಪಂ ಅಧಿಕಾರಿಗಳಿಗೆ ದೂರು ನೀಡಿ ತೆರವು ಮಾಡುವಂತೆ ಕೋರಿದ್ದ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆಯಿಂದ ಮನನೊಂದು ಶನಿವಾರ ಆ.15 ರಂದು ಮಧ್ಯಾಹ್ನ ತನ್ನ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷಯ ತಿಳಿದ ಸ್ನೇಹಿತರು ಆತನನ್ನು ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಬಳಿಕ ಧಾರವಾಡ ಆಸ್ಪತ್ರೆಗೆ ದಾಖಲಿಸಿದ್ದು ಭಾನುವಾರ ಆತ ಮೃತನಾಗಿದ್ದಾನೆ.

ಆ.11 ಮತ್ತು 12ರ ಎರಡು ದಿನವೂ ಸಂಜೆ ವೇಳೆಯಲ್ಲಿ ಆರೋಪಿಗಳು ಬೆದರಿಕೆ, ದೌರ್ಜನ್ಯ ಮಾಡಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು, ಸಿಬ್ಬಂದಿಗಳಿಗೆ ಈ ವಿಷಯ ತಿಳಿಸಿದರೂ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ನನ್ನ ಪತಿ ವಿಷ ಸೇವಿಸುವುದಕ್ಕೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಮೃತನ ಪತ್ನಿ ರಾಧಿಕಾ ಕಣ್ಣೀರಿಡುತ್ತಲೇ ಪೊಲೀಸರಿಗೆ ಮನವಿ ಮಾಡಿದಳು.


ಮೃತ ಬಸವರಾಜನ ಶವ ಧಾರವಾಡದಿಂದ ಪಟ್ಟಣಕ್ಕೆ ಬರುವುದರೊಳಗೆ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೆ ಶವದೊಂದಿಗೆ ಪೊಲೀಸ್ ಠಾಣೆ ಎದುರು ಪ್ರತಿಭಟಿಸಬೇಕಾಗುತ್ತದೆ. ಬಸವರಾಜರೆಡ್ಡಿ ಸಾವಿಗೆ ಕಾರಣರಾದವರ ಮೇಲೆ ಪ್ರಕರಣಗಳಿದ್ದರೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಆರೋಪಿಗಳ ಬಂಧಿಸುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂಉ ಮುಖಂಡ ಅಯ್ಯನಗೌಡ ಅಳ್ಳಳ್ಳಿ ತಿಳಿಸಿದ್ದಾರೆ.

ನಿವೇಶನ ವಿಚಾರವಾಗಿ ವ್ಯಕ್ತಿಯೊರ್ವ ವಿಷ ಸೇವಿಸಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಆರ್, ಸಿಸಿ ಕ್ಯಾಮೆರಾಗಳ ಪುಟೇಜ್ ಸೇರಿದಂತೆ ನಾನಾ ಆಯಾಮಗಳ ಮೂಲಕ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಮೃತನ ಪತ್ನಿ ರಾಧಿಕಾಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಆರೋಪಿಗಳನ್ನು ಅರೆಸ್ಟ್ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಕನಕಗಿರಿ ಪಿಐ ವಿ.ನಾರಾಯಣ ತಿಳಿಸಿದ್ದಾರೆ.