ಅಕ್ರಮ ಮದ್ಯ ಘಾಟು ನಿಯಂತ್ರಣಕ್ಕಿಲ್ಲ ಸಿಬ್ಬಂದಿ

| Published : Jan 10 2024, 01:45 AM IST

ಸಾರಾಂಶ

ಇಂಡಿ, ಚಡಚಣ ತಾಲೂಕಿನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ಕೊರತೆ ಇರುವುದರಿಂದ ಈ ಎರಡೂ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಳವಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಘಾಟು ಜೋರಾಗಿದೆ. ಅದು ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ವಾದವಲ್ಲ. ಆದರೆ, ಅದನ್ನು ನಿಯಂತ್ರಿಸಬೇಕಾದ ಅಗತ್ಯ ಸಿಬ್ಬಂದಿಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ. ಸಹಜವಾಗಿ ಅಕ್ರಮ ದಂಧೆಕೋರರಿಗೆ ಸಿಬ್ಬಂದಿ ಕೊರತೆ ಕೂಡ ವರವಾಗಿ ಪರಿಣಮಿಸಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿದೆ ಇಂಡಿ ಮತ್ತು ಚಡಚಣ ತಾಲೂಕು. ಎರಡು ಭಾಗಗಳಿಂದ ಅಕ್ರಮವಾಗಿ ಸಾಗಿಸುವ ಮದ್ಯವನ್ನು ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಅಧಿಕಾರಿಗಳ ಕಣ್ತಪ್ಪಿಸಿ ಲೀಲಾಜಾಲವಾಗಿ ಮಾರಾಟ ಮಾರುತ್ತಿದ್ದಾರೆ ಎಂಬುದು ಸಾರ್ವಜನಿಕರ ಗಂಭೀರ ಆರೋಪ. ಅಗತ್ಯ ಸಿಬ್ಬಂದಿ ಇದ್ದಿದ್ದರೆ ಅಕ್ರಮ ಮಾರಾಟ ಸಂಪೂರ್ಣ ನಿಯಂತ್ರಣಕ್ಕೆ ಬಾರದಿದ್ದರೂ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿತ್ತು ಎಂದು ಸಾರ್ವಜನಿಕರೇ ಒಪ್ಪಿಕೊಳ್ಳುತ್ತಿದ್ದಾರೆ.

ಅಕ್ರಮ ಮದ್ಯ ಮಾರಾಟ ನಿಯಂತ್ರಣವೇ ದೊಡ್ಡ ಸವಾಲು:

ವಿಜಯಪುರ ಜಿಲ್ಲೆಯ ಅವಿಭಜಿತ ಇಂಡಿ ಹಾಗೂ ಚಡಚಣ ತಾಲೂಕುಗಳು ಸೇರಿ ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕಲು ಓರ್ವ ಡಿವೈಎಸ್ಪಿ, 3 ಸಿಪಿಐ, 9 ಪಿಎಸೈ, 25 ಎಎಸೈ, ಮುಖ್ಯಪೇದೆ ಹಾಗೂ ಮಹಿಳಾ ಮುಖ್ಯಪೇದೆ ಸೇರಿ 71, ಪೇದೆ ಹಾಗೂ ಮಹಿಳಾ ಪೇದೆಗಳು ಸೇರಿ ಒಟ್ಟು 140 ಜನ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನಿತ್ಯದ ಕೆಲಸಗಳಲ್ಲಿ ಕಾರ್ಯನಿರ್ವಹಿಸಲು ಸಮಯ ಕಳೆದುಹೋಗುತ್ತದೆ. ಜತೆಗೆ ಎಲ್ಲ ರೀತಿಯ ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಇಷ್ಟು ಸಿಬ್ಬಂದಿಯಿಂದ ಕಷ್ಟಸಾಧ್ಯ.

ಪೊಲೀಸರಿಂದಲೇ ಪರಿಸ್ಥಿತಿ ಹೀಗಿರುವಾಗ ಇನ್ನು ಇಂಡಿ, ಚಡಚಣ ತಾಲೂಕುಗಳು ಸೇರಿ ಅಬಕಾರಿ ಇಲಾಖೆಗೆ ಒಬ್ಬ ಸಿಪಿಐ, ಪಿಎಸೈ ಹಾಗೂ 3 ಜನ ಅಬಕಾರಿ ಪೊಲೀಸರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಎರಡು ತಾಲೂಕುಗಳಲ್ಲಿ ನಡೆಯುವ ಅಕ್ರಮ ಸಾರಾಯಿ ಮಾರಾಟ ದಂಧೆ ನಿಯಂತ್ರಿಸಲು ಹೇಗೆ ಸಾಧ್ಯ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೀಗಾಗಿ ಅಕ್ರಮ ಸರಾಯಿ ಮಾರಾಟ ನಿಯಂತ್ರಣಕ್ಕೆ ಇಂಡಿಗೆ ಅಬಕಾರಿ ಉಪ ವಿಭಾಗದ ಕಚೇರಿಯನ್ನು ಆರಂಭಿಸಿ ಎರಡು ತಾಲುಕುಗಳಲ್ಲಿ ನಡೆಯುವ ಅಕ್ರಮ ಸರಾಯಿ ದಂಧೆ ನಿಯಂತ್ರಣಕ್ಕೆ ಬೇಕಾದ ಅಬಕಾರಿ ಪಿಎಸೈಗಳು ಹಾಗೂ ಪೊಲೀಸರನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಯುವಜನರ ಮೇಲೆ ಬೀರುತ್ತಿದೆ ಪರಿಣಾಮ:

ಎರಡೂ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮದ್ಯ, ಗಾಂಜಾ, ಅಫೀಮು ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟ ದಂದೆಗೆ ಕಡಿವಾಣ ಇಲ್ಲದಿರುವುದರಿಂದ ಅದು ಯುವಜನರ ಮೇಲೆ ಪರಿಣಾಮ ಬೀರುತ್ತಿದೆ. ಅವರ ಆರೋಗ್ಯಕ್ಕೂ ಕುತ್ತು ತರುತ್ತಿದೆ. ಈ ಮೂಲಕ ಯುವಕರಲ್ಲಿ ಅಪರಾಧಿಕ ಚಟುವಟಿಕೆಗಳ ಹೆಚ್ಚಳಕ್ಕೂ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂಬ ಕಳವಳ ಕೂಡ ಪೋಷಕರನ್ನು ಕಾಡುತ್ತಿದೆ. ಹೀಗಾಗಿ ಇಂತಹ ಅಕ್ರಮಗಳನ್ನು ನಿಯಂತ್ರಿಸಲು ಇಂಡಿ ತಾಲೂಕು ಕೇಂದ್ರಕ್ಕೆ ಅಬಕಾರಿ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕರ ಕಚೇರಿ ಹಾಗೂ ಅಬಕಾರಿ ಮಹಿಳಾ ಪೊಲೀಸ್‌ ಠಾಣೆ ಆರಂಭಿಸುವುದು ಅತೀ ಅವಶ್ಯಕತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಹಳ್ಳಿ, ಹಳ್ಳಿಗಳಲ್ಲಿ ಮಿನಿ ಬಾರ್‌ಗಳಂತೆ ಹೊಟೇಲ್‌, ಪಾನ್‌ ಬೀಡಾ ಅಂಗಡಿ ಸೇರಿದಂತೆ ಇತರೆ ಸ್ಥಳದಲ್ಲಿ ಅಕ್ರಮ ಮದ್ಯದ ಘಾಟು ಎಗ್ಗಿಲ್ಲದೆ ನಡೆಯುತ್ತಿರುವುದು ಈಗಾಗಲೇ ಹಲವು ಪೊಲೀಸ್‌ ದಾಳಿಯಿಂದ ಬೆಳಕಿಗೆ ಬಂದಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಕೊರತೆಯಿಂದ ಅಸಹಾಯರಾಗಿದ್ದಾರೆ. ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ಕೇಂದ್ರಗಳು ದಿನಗೂಲಿಗಳು, ಕಾರ್ಮಿಕರು, ಬಡವರನ್ನೇ ಗುರಿಯಾಗಿಸಿಕೊಂಡಿವೆ. ಹೀಗಾಗಿ ಅವುಗಳ ನಿಯಂತ್ರಣವಿಲ್ಲದೆ ಅಕ್ರಮಕ್ಕೆ ಕಡಿವಾಣ ಅಸಾಧ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

--------------------

ಅಕ್ರಮ ಮದ್ಯ ಮಾರಾಟ ಕಂಡು ಬಂದರೆ ಇಲ್ಲವೆ ಸಾರ್ವಜನಿಕರು ತಿಳಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮ ಮದ್ಯ ಮಾರಾಟದ ಗಮನಕ್ಕೆ ಬಂದಿಲ್ಲ. ಸಾರಾಯಿ ಮಾರಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಇಂಡಿ ಅಬಕಾರಿ ಇಲಾಖೆಗೆ ಅಧಿಕಾರಿ ಹಾಗೂ ಸಿಬ್ಬಂದಿ ಕೊರತೆ ಇರುವುದರಿಂದ ಎರಡು ತಾಲೂಕುಗಳ ಮೇಲ್ವಿಚಾರಣೆ ಮಾಡಲು ಕಷ್ಟವಾಗುತ್ತದೆ. ಇಂಡಿ ತಾಲೂಕಿನ ಕೊನೆಯ ಗ್ರಾಮದಿಂದ ಚಡಚಣ ತಾಲೂಕಿನ ಕೊನೆಯ ಗ್ರಾಮ ತಲುಪಲು ಸುಮಾರು 100 ರಿಂದ 110 ಕಿಮೀ ಅಂತರವಾಗುತ್ತದೆ. ಹೀಗಾಗಿ ಅಕ್ರಮ ಸರಾಯಿ ಮಾರಾಟ ನಿಯಂತ್ರಿಸುವುದು ಕಷ್ಟವಾಗುತ್ತಿದೆ.

- ರಾಹುಲ್‌ ನಾಯಕ ಅಬಕಾರಿ ಸಿಪಿಐ, ಇಂಡಿ