ನಿರಂತರ ಟಿಪ್ಪರ್ ಸಂಚಾರದಿಂದ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ

ಕೊಪ್ಪಳ: ತಾಲೂಕಿನ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಂ ಸಾಗಾಟದ ವಿರುದ್ಧ ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ ಬುಧವಾರ ರಾತ್ರಿ ಕರ್ಕಿಹಳ್ಳಿ ಭಾಗದ ಸ್ಥಳಕ್ಕೆ ಭೇಟಿ ನೀಡಿ ಟಿಪ್ಪರ್ ಬೆನ್ನತ್ತಿ ಪರಿಶೀಲಿಸಿದ್ದಾರೆ.

ಅಕ್ರಮ ಮರುಂ ಸಾಗಾಟದ ವಿರುದ್ಧ ಬಿಜೆಪಿ ಎಂಎಲ್ಸಿ ಹೇಮಲತಾ ನಾಯಕ ಬುಧವಾರ ರಾತ್ರಿ ಕರ್ಕಿಹಳ್ಳಿ ಭಾಗದ ಸ್ಥಳಕ್ಕೆ ಭೇಟಿ ನೀಡಿ ಟಿಪ್ಪರ್ ಬೆನ್ನತ್ತಿ ವಾಹನ ತಡೆದು ಪರಿಶೀಲನೆ ನಡೆಸಿ ಅಕ್ರಮ ದಂಧೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಮರುಂ ಸಾಗಾಟದ ಬಗ್ಗೆ ಚಾಲಕನನ್ನು ಪ್ರಶ್ನಿಸಿದ ಎಂಎಲ್‌ಸಿ ಹೇಮಲತಾ ನಾಯಕ, ಪರವಾನಗಿ ಇಲ್ಲದೆ ಮರುಂ ಸಾಗಾಟ ನಡೆಸುತ್ತಿರುವೆ. ನಿನಗೆ ಇಲಾಖೆಯಿಂದ ಅನುಮತಿ ಇದೆಯಾ? ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿದ್ದೀಯಾ? ಎಲ್ಲಿಗೆ ಈ ಮರಂ ಸಾಗಿಸುತ್ತಿರುವೆ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹಿರೇಬಗನಾಳ, ಚಿಕ್ಕಬಗನಾಳ ಹಾಗೂ ಕರ್ಕಿಹಳ್ಳಿ ಗ್ರಾಮಗಳ ಸಾರ್ವಜನಿಕರು ಎಂಎಲ್ಸಿ ಎದುರು ತಮ್ಮ ಅಳಲು ತೋಡಿಕೊಂಡು ಪ್ರತಿದಿನ ನೂರಾರು ಟಿಪ್ಪರ್‌ ಮರುಂ ಸಾಗಾಟ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದವರ ಮೇಲೆಯೇ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.

ನಿರಂತರ ಟಿಪ್ಪರ್ ಸಂಚಾರದಿಂದ ಗ್ರಾಮಗಳ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.ಹಲವಾರು ಅಪಘಾತ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿವೆ ಎಂದು ಗ್ರಾಮಸ್ಥರು ದೂರಿದರು.

ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಅಕ್ರಮ ಮರುಂ ಸಾಗಾಟ ಮಿತಿಮೀರಿದ್ದು, ಮರುಂ ಸಾಗಾಟ ನಡೆಯುತ್ತಿದೆ ಎಂದು ಸಾರ್ವಜನಿಕರು ಎಂಎಲ್ಸಿ ಗಮನಕ್ಕೆ ತಂದರು.

ಸ್ಥಳದಲ್ಲೇ ಪಿಎಸ್ಐ, ಸಿಪಿಐ ಎಸ್ಪಿ ಅವರಿಗೆ ಕರೆ ಮಾಡಿದ ಹೇಮಲತಾ ನಾಯಕ, ಅಕ್ರಮ ಮರುಂ ಸಾಗಾಟದಲ್ಲಿ ತೊಡಗಿರುವ ಲಾರಿ ಚಾಲಕರು ಹಾಗೂ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ನಿಯಮ ಉಲ್ಲಂಘಿಸಿ ಸಾಗಾಟ ನಡೆಸುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ತಮ್ಮ ಜಮೀನಿಗೆ ಮರುಂ ಸಾಗಿಸಲಾಗುತ್ತಿದೆ ಎಂದು ಹೇಳಿಕೊಂಡಿರುವ ವಿಷಯ ಪ್ರಸ್ತಾಪಿಸಿದ ಅವರು, ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮರುಂ ಸಾಗಾಟದ ಬಗ್ಗೆ ಮಾಹಿತಿ ನೀಡಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪೊಲೀಸ್ ಇಲಾಖೆ ಶೀಘ್ರದಲ್ಲಿ ಅಕ್ರಮ ಮರುಂ ಸಾಗಾಟಕ್ಕೆ ಕಡಿವಾಣ ಹಾಕದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಎಂಎಲ್ಸಿ ಎಚ್ಚರಿಕೆ ನೀಡಿದರು.