ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸದರಿ ಗಣಿಗಾರಿಕೆ ಘಟಕವನ್ನು ತರಾತುರಿಯಲ್ಲಿ ಹಾಲಿ ಜಿಲ್ಲಾಧಿಕಾರಿ ಪರವಾನಗಿ ನೀಡಿ ಸಕ್ರಮಗೊಳಿಸಿದ್ದಾರೆ. ಇದೊಂದೇ ಗಣಿಯಿಂದ ಸರ್ಕಾರಕ್ಕೆ ಸುಮಾರು 500 ರಿಂದ 600 ಕೋಟಿ ರು. ವಾರ್ಷಿಕ ರಾಜಧನ ನಷ್ಟವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಾಗಮಂಗಲ ತಾಲೂಕಿನಲ್ಲಿ ನಡೆಯುತ್ತಿರುವ 12 ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರು. ರಾಜಧನ ನಷ್ಟವಾಗುತ್ತಿರುವ ಬಗ್ಗೆ ದೂರು ನೀಡಿದರೂ ಈವರೆಗೂ ಕ್ರಮ ಕೈಗೊಳ್ಳದ ಕಾರಣ ಇ.ಡಿ. ತನಿಖೆಗೆ ದೂರು ಸಲ್ಲಿಸುವುದಾಗಿ ಮಾಜಿ ಶಾಸಕ ಕೆ.ಸುರೇಶ್ಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರ ಕುಟಂಬದವರು, ಬೆಂಬಲಿಗರಿಂದ ತಾಲೂಕಿನಲ್ಲಿ 12 ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈಗಾಗಲೇ ದೂರು ಸಲ್ಲಿಸಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಗೊಂಡಿಲ್ಲ ಎಂದು ಆರೋಪಿಸಿದರು.
ತಾಲೂಕಿನ ಗಂಗಸಮುದ್ರ ಗ್ರಾಮದ ಬಳಿ ಪ್ರೇಮ ಕರೀಗೌಡ ಅವರು ವನ್ಯಜೀವಿ ಅರಣ್ಯ ಪ್ರದೇಶದಲ್ಲೇ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆ. ನಾನು ಶಾಸಕನಾಗಿದ್ದ ವೇಳೆ ದೂರು ನೀಡಿದ್ದರ ಮೇರೆಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಅಶ್ವತಿ ಮತ್ತು ಅರಣ್ಯಾಧಿಕಾರಿಗಳು ಪರವಾನಗಿ ರದ್ದುಪಡಿಸಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರೂ ಸಹ ಜನರೇಟರ್ ಸಹಾಯದಿಂದ ಕದ್ದು ಮುಚ್ಚಿ ಮಾಡಿಕೊಂಡೇ ಬಂದಿದ್ದರು ಎಂದು ದೂರಿದರು.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸದರಿ ಗಣಿಗಾರಿಕೆ ಘಟಕವನ್ನು ತರಾತುರಿಯಲ್ಲಿ ಹಾಲಿ ಜಿಲ್ಲಾಧಿಕಾರಿ ಪರವಾನಗಿ ನೀಡಿ ಸಕ್ರಮಗೊಳಿಸಿದ್ದಾರೆ. ಇದೊಂದೇ ಗಣಿಯಿಂದ ಸರ್ಕಾರಕ್ಕೆ ಸುಮಾರು 500 ರಿಂದ 600 ಕೋಟಿ ರು. ವಾರ್ಷಿಕ ರಾಜಧನ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಸಚಿವರ ಕುಟುಂಬದವರು ಸಹ ಹಲವು ವರ್ಷಗಳಿಂದಲೂ ಇಜ್ಜಲಘಟ್ಟ ಗ್ರಾಮದ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ದೊಡ್ಡಜಟಕ ಬಳಿ ವಿಶೇಷ ಕಲ್ಲಿನ ನಿಕ್ಷೇಪವಿದ್ದು, ಅಲ್ಲೂ ಸಹ ಅಕ್ರಮವಾಗಿ ಗಣಿಗಾರಿಕೆ ಮಾಡುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟವುಂಟುಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರು. ನಷ್ಟವಾಗುತ್ತಿದೆ. ಇತ್ತೀಚೆಗೆ ಲೋಕಾಯುಕ್ತರು ಭೇಟಿ ನೀಡಿದ ವೇಳೆ ಅನಧಿಕೃತ ಗಣಿಗಾರಿಕೆ ಸ್ಥಳಗಳಿಗೆ ಅವರನ್ನು ಕರೆದೊಯ್ಯದೆ ಅಧಿಕಾರಿಗಳು ದಿಕ್ಕುತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
34 ಕೋಟಿ ವೆಚ್ಚದ ಕಾಮಗಾರಿಗೆ 616 ಕೋಟಿ ವೆಚ್ಚ:ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ 150-ಎ ಚುಂಚನಹಳ್ಳಿ, ನೆಲ್ಲಿಗೆರೆ ಹಾಗೂ ಹೊಸಮನೆ ಸರ್ಕಲ್ ಭಾಗದ ರಸ್ತೆ ಅಭಿವೃದ್ಧಿಗೆ 617.28 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಪೂಜೆ ಮಾಡಿದ್ದಾರೆ. ಕೇವಲ 9 ಕಿ.ಮೀ. ರಸ್ತೆ ಅಭಿವೃದ್ಧಿಗೆ 34 ಕೋಟಿ ರು. ವೆಚ್ಚವಾಗಲಿದೆ. ಆದರೆ, 617.28 ಕೋಟಿ ರು. ವೆಚ್ಚ ಮಾಡಿ ಚಿನ್ನದ ರಸ್ತೆ ನಿರ್ಮಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಕೇಂದ್ರ ಭೂ-ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2024ರಲ್ಲಿ 4 ಸಾವಿರ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಪೂಜೆ ಮಾಡಿದ್ದರು. ಆದರೆ, ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರು ಇದೇ ರಸ್ತೆಯ ಕೇವಲ 9 ಕಿ.ಮೀ. ದೂರದ ರಸ್ತೆ ಅಭಿವೃದ್ಧಿಗೆ 617.28 ಕೋಟಿ ರು. ವೆಚ್ಚ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.ಯಾರದ್ದೋ ಜಮೀನಿನಲ್ಲಿ ನಿವೇಶನ:
ಬೆಳ್ಳೂರು ಕ್ರಾಸ್ನ ಮಯೂರು ಹೊಟೇಲ್ ಮುಂಭಾಗದ ಅಲ್ಪಸಂಖ್ಯಾತರಿಗೆ ಸೇರಿದ ನೂರಾರು ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಮಾಡಿ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಇದು ನಿಯಮ ಬಾಹಿರವಾಗಿದೆ. 50 ರಿಂದ 60 ಲಕ್ಷ ರು. ವೆಚ್ಚದಲ್ಲಿ ನಿವೇಶನಗಳನ್ನು ಸಾರ್ವಜನಿಕರು ಕೊಂಡುಕೊಂಡಲ್ಲಿ ಮೋಸ ಹೋಗುವುದು ಖಚಿತ ಎಂದು ಎಚ್ಚರಿಕೆ ನೀಡಿದರು. ಇಂತಹ ಕೆಲಸವನ್ನು ಸಚಿವರು ಮತ್ತು ಅವರ ಬೆಂಬಲಿಗರು ನಿವೇಶನ ಹಂಚಿಕೆ ಮಾಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಮಾಣ ಮಾಡಲು ಸಿದ್ದ:
ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮಗಳಲ್ಲಿ ಸಚಿವರ ಕುಟುಂಬದವರು ಮತ್ತು ಬೆಂಬಲಿಗರೇ ಭಾಗಿಯಾಗಿದ್ದಾರೆ. ಒಂದು ವೇಳೆ ಇಲ್ಲವೆಂದಾದರೆ ಅವರೇ ನಂಬಿರುವ ಅಜ್ಜನ ಬಳಿ ಬಂದು ಪಮಾಣ ಮಾಡಲಿ, ನಾನೂ ಸಹ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.ಜಿಲ್ಲೆಯಲ್ಲಿ ಕೈಗಾರಿಕೆ ಮಾಡಲೂ ಬಿಡಲ್ಲ:
ಕೇಂದ್ರ ಸಚಿವರು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಮುಂದಾಗಿದ್ದಾರೆ. ಆದರೆ, ರಾಜ್ಯ ಸರ್ಕಾರ ಮತ್ತು ಸಚಿವರು ಕೈಗಾರಿಕೆ ಮಾಡಲು ಜಿಲ್ಲೆಯಲ್ಲಿ ಜಾಗ ಕೊಡುವುದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆ ಮಾಡಬಾರದು ಎಂಬುದೇ ಅವರ ಉದ್ದೇಶ. ಕೈಗಾರಿಕೆ ಸ್ಥಾಪನೆಯಾಗದಿದ್ದರೆ ಕುಮಾರಸ್ವಾಮಿ ಏನೂ ಕಿತ್ತುಹಾಕಲಿಲ್ಲ ಎಂದು ಬೊಬ್ಬೆ ಹೊಡೆಯುತ್ತಾರೆ ಎಂದು ಕಿಡಿಕಾರಿದರು.ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಕೈಗಾರಿಕೆ ಸ್ಥಾಪನೆ ಮಾಡಲು ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ಸಿಗರು ಬಿಡಲ್ಲ. ತಾವೂ ಕೈಗಾರಿಕೆ ಸ್ಥಾಪನೆ ಮಾಡಿ ಸಾವಿರಾರು ಯುವಕರಿಗೆ ಉದ್ಯೋಗ ಕೊಡುವ ಕೆಲಸವನ್ನೂ ಮಾಡುವುದಿಲ್ಲ ಎಂದು ಟೀಕಿಸಿದರು.
ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಬಳಿ 900 ಎಕರೆ ಸರ್ಕಾರಿ ಜಮೀನು ಇದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅದನ್ನು ನೋಟಿಫಿಕೇಷನ್ ಮಾಡಲಾಗಿದೆ. ಅಲ್ಲಿ ಕೈಗಾರಿಕೆ ಸ್ಥಾಪನೆಯಾದರೆ ಮೂರ್ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ನೀರು, ರಸ್ತೆ ಸಂಚಾರ, ಬೆಂಗಳೂರು ಮತ್ತು ಮಂಗಳೂರು ವ್ಯಾಪ್ತಿಗೂ ಅನುಕೂಲವಾಗಲಿದೆ ಎಂದರು.ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಅವರ ಕಾರ್ಯವೈಖರಿಯನ್ನು ತಿಳಿದು ರಾಜ್ಯದಲ್ಲಿ ಕೈಗಾರಿಕೆ ಅಥವಾ ಕೇಂದ್ರದ ಯೋಜನೆಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಮೇಕೆದಾಟು ಯೋಜನೆಗೆ ಪೂಜೆಗೆ ಆದ್ಯತೆ:ಜಲಸಂಪನ್ಮೂಲ ಖಾತೆ ಪಡೆದಿರುವ ಉಸ್ತುವಾರಿ ಸಚಿವರು, ಮೇಕೆದಾಟು ಯೋಜನೆ ಬದಲಿ ರಾಜ್ಯಾದ್ಯಂತ ಜಮೀನು ಗುರುತಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವುದು, ನಂತರ ಮೇಕೆದಾಟು ಯೋಜನೆಗೆ ಪೂಜೆ ಮಾಡಿ ಹಣ ಹೊಡೆಯುವ ಚಿಂತನೆಯಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನವೀನ್ ಇತರರು ಇದ್ದರು.