ಸಾರಾಂಶ
ಅಕ್ರಮವಾಗಿ ಜಾನುವಾರು ಸಾಗಾಟವಾಗದಂತೆ ತಾಲೂಕಿನ ವಿವಿಧೆಡೆ ಚೆಕ್‌ಪೋಸ್ಟ್ ಹಾಕಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡ ರಘು ಒತ್ತಾಯಿಸಿದರು. ಸಕಲೇಶಪುರದಲ್ಲಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.
ಪೊಲೀಸ್ ಮನವಿ ಸಲ್ಲಿಕೆ
ಸಕಲೇಶಪುರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನೂರಾರು ಗೋವುಗಳು ಅಕ್ರಮವಾಗಿ ವಧೆಯಾಗುವ ಸಾಧ್ಯತೆಯಿರುವುದರಿಂದ ಅಕ್ರಮವಾಗಿ ಜಾನುವಾರು ಸಾಗಾಟವಾಗದಂತೆ ತಾಲೂಕಿನ ವಿವಿಧೆಡೆ ಚೆಕ್‌ಪೋಸ್ಟ್ ಹಾಕಿ ಕ್ರಮ ಕೈಗೊಳ್ಳಬೇಕೆಂದು ಹಿಂದೂಪರ ಸಂಘಟನೆಗಳ ಮುಖಂಡ ರಘು ಒತ್ತಾಯಿಸಿದರು.ಪಟ್ಟಣದಲ್ಲಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್‌ಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ, ‘ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ -ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಾಟ ಹಾಗೂ ಕುರ್ಬಾನಿಗೆ ನಿಷೇಧವಿದೆ. ಆದರೂ ಸಹ ಅಕ್ರಮವಾಗಿ ನೂರಾರು ಗೋವುಗಳನ್ನು ಸಾಗಾಟ ಮಾಡಿ ಮಾಂಸಕ್ಕಾಗಿ ವಧೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಅನ್ವಯ ಕುರ್ಬಾನಿಗೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಬಕ್ರೀದ್ ಹಬ್ಬದ ಆಚರಣೆ ಮುಗಿಯುವವರೆಗೆ ಸಕಲೇಶಪುರ ನಗರ/ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರು ಸಾಗಾಟವಾಗದಂತೆ ಪೋಲಿಸ್ ಚೆಕ್‌ಪೋಸ್ಟ್ ಹಾಕಬೇಕು’ ಎಂದು ಹೇಳಿದರು.
ಮುಸ್ಲಿಂ ಸಮುದಾಯ ಬಹುಸಂಖ್ಯಾತ ಇರುವ ಕೆಲವು ವ್ಯವಸ್ಥಿತ ಪ್ರದೇಶಗಳಲ್ಲಿ ಅಕ್ರಮವಾಗಿ ಜಾನುವಾರು ಶೇಖರಿಸಿ ಇಡದಂತೆ ನಿಗಾ ಇಡಲು ಸಂಬಂಧಪಟ್ಟ ಠಾಣೆಗಳಿಗೆ ಸೂಚಿಸಬೇಕು. ಅಕ್ರಮವಾಗಿ ಗೋಮಾಂಸವನ್ನು ಶೇಖರಿಸಿ ಇಡುವುದು ಹಾಗೂ ಸಾಗಾಟ ಮಾಡಿದರೆ ಜಾನುವಾರು ಹತ್ಯೆ ನಿಷೇಧ ಪ್ರತಿಬಂಧಕ ವಿಧೇಯಕ ೨೦೨೦ ಪ್ರಕರಣ ದಾಖಲಿಸಬೇಕು. ಅಕ್ರಮವಾಗಿ ಸಾಗಾಟ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.ಈ ಸಂರ್ಧಭದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರಾದ ಕೌಶಿಕ್, ಮಂಜುನಾಥ್, ನಡಹಳ್ಳಿ ಶಶಿ, ಸುರೇಂದ್ರ, ಶ್ರೀಜಿತ್ ಗೌಡ. ಇತರರು ಇದ್ದರು.