ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗಿನಲ್ಲೂ ಕೂಡ ಬಿಸಿಲು ಹೆಚ್ಚಾಗುತ್ತಿದ್ದು, ಕಾವೇರಿ ನದಿ ನೀರು ಅಪಾರ ಪ್ರಮಾಣದಲ್ಲಿ ಕುಸಿತಗೊಂಡಿದೆ. ಆದರೂ ಕೂಡ ಕಾವೇರಿ ನದಿ ಒಡಲಲ್ಲಿ ಅಕ್ರಮವಾಗಿ ಪಂಪ್ ಸೆಟ್ ಮೂಲಕ ವಿವಿಧ ಚಟುವಟಿಕೆಗಳಿಗೆ ನೀರು ಬಳಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ನೀರು ಇಳಿಮುಖವಾಗಿದ್ದರೂ ಪಂಪ್ ಸೆಟ್‌ಗಳ ಸದ್ದು ಜೋರಾಗಿದೆ. ಭಾಗಮಂಡಲದಿಂದ ಹಿಡಿದು ಕಾವೇರಿ ನದಿ ಹರಿದು ಹೋಗುವ ಸ್ಥಳಗಳಲ್ಲಿ ಹಲವಾರು ಮೋಟಾರ್ ಪ್‍ಂಪ್ ಸೆಟ್ ಗಳನ್ನು ಹಾಕಲಾಗಿದೆ. ಕೆಲವರು ಕೃಷಿ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದರೆ ಮತ್ತೂ ಕೆಲವರು ವಾಣಿಜ್ಯ ಉದ್ದೇಶಕ್ಕೆ ಹಾಗೂ ಇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಂಡಿರುವುದು ಕಾಣ ಬರುತ್ತಿದೆ.ಹಾರಂಗಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲೂ ಮೋಟಾರ್ ಗಳ ಮೂಲಕ ಇತರೆ ಚಟುವಟಿಕೆಗೆ ನೀರು ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹೀಗೆ ಹೋದರೆ ಏಪ್ರಿಲ್, ಮೇ ತಿಂಗಳ ಅವಧಿಗೆ ಅಪಾರ ನೀರಿನ ಕೊರತೆ ಕಂಡುಬರುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಕುಡಿಯುವುದಕ್ಕೆ ಹೊರತುಪಡಿಸಿ ಇತರೆ ಚಟುವಟಿಕೆಗೆ ಮೋಟಾರ್ ಪಂಪ್ ಸೆಟ್ ಗಳ ಮೂಲಕ ನೀರು ಎತ್ತದಂತೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಘೋಷಿಸಿದ್ದಾರೆ.
ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ ಅವರು, ಕಾವೇರಿ ನಿಸರ್ಗಧಾಮದ ಬಳಿ ಕಾವೇರಿ ನದಿ ತಟದಲ್ಲಿ ಪರಿಶೀಲನೆ ಮಾಡುವ ಸಂದರ್ಭ ಹಲವು ಮೋಟಾರ್ ಪಂಪ್ ಸೆಟ್ ಗಳು ಕಾವೇರಿ ನದಿಯಲ್ಲಿ ಇರುವುದು ‘ಕನ್ನಡಪ್ರಭ’ ಪ್ರತಿನಿಧಿಗೆ ಕಂಡುಬಂದಿದೆ. ಅರಣ್ಯ ಇಲಾಖೆಯಿಂದಲೂ ಕಾವೇರಿ ನದಿಗೆ ಪಂಪ್ ಸೆಟ್ ಹಾಕಲಾಗಿದೆ.ಇಲ್ಲಿನ ವಾಣಿಜ್ಯ ಉದ್ದೇಶಕ್ಕೆ ಹಾಗೂ ಕಾವೇರಿ ನಿಸರ್ಗಧಾಮದ ಬಳಿ ದೊಡ್ಡ ನರ್ಸರಿ ಇದ್ದು, ಅವರು ಕೂಡ ಮೋಟಾರು ಬಳಸಿ ಕಾವೇರಿ ನದಿಯಿಂದ ನೀರನ್ನು ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.ಈ ಸಂದರ್ಭ ಕುಶಾಲನಗರ ತಹಸೀಲ್ದಾರ್ ಅವರು ಕಾವೇರಿ ನದಿ ನೀರಿನ ವ್ಯಾಪ್ತಿಯಲ್ಲಿರುವ ಮೋಟಾರ್ ಪಂಪ್ ಸೆಟ್ ಗಳನ್ನು ಸರ್ವೇ ಮಾಡಲು ಸಿಬ್ಬಂದಿಗೆ ಸ್ಥಳದಲ್ಲೇ ಸೂಚನೆ ನೀಡಿದ್ದಾರೆ. ಅಕ್ರಮವಾಗಿ ನದಿಯಿಂದ ಮೋಟಾರ್ ಗಳ ಮೂಲಕ ನೀರು ತೆಗೆಯುವವರಿಗೆ ನೋಟೀಸ್ ನೀಡಲು ಮುಂದಾಗಿದ್ದಾರೆ. ಅಲ್ಲದೆ ಕಾವೇರಿ ನದಿಯ ಹರಿಯುವ ಪ್ರದೇಶದಲ್ಲಿ ನೀರಿನ ಅಡ್ಡಲಾಗಿ ಹಾಕಲಾಗಿರುವ ಸ್ಯಾಂಡ್ ಬಂಡ್ ಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಆದೇಶ:
ನದಿ ಸೇರಿದಂತೆ ಜಲ ಮೂಲಗಳಾದ ತೋಡು, ಹೊಂಡ, ಕೆರೆ, ಕಾಲುವೆಗಳ ನೀರನ್ನು ಕುಡಿಯುವ ನೀರಿನ ಹೊರತಾಗಿ ಇತರೆ ಕಾರ್ಯಗಳಿಗೆ ಬಳಸುತ್ತಿರುವುದು ಕಂಡುಬಂದಿದೆ. ಆದ್ದರಿಂದ ಕೊಡಗು ಜಿಲ್ಲೆಯಾದ್ಯಂತ ಇರುವ ನದಿ ಹಾಗೂ ನದಿ ಮೂಲಗಳಿಂದ ಅಕ್ರಮ, ಅನಧಿಕೃತವಾಗಿ ಖಾಸಗಿ ಚಟುವಟಿಕೆಗಳಿಗೆ ಪಂಪ್ ಸೆಟ್ ಮೂಲಕ ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ನೀಡಿದ್ದಾರೆ.ಕಾನೂನು ಕ್ರಮ ಎಚ್ಚರಿಕೆ: ನದಿ ಹಾಗೂ ನದಿ ಮೂಲಗಳಿಂದ ಅಕ್ರಮವಾಗಿ ನೀರು ತೆಗೆಯುತ್ತಿದ್ದರೆ ಅಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಇದೀಗ ಸರ್ವೇ ಕಾರ್ಯ ಮಾಡಲಾಗುವುದು, ಸಂಬಂಧಿಸಿದವರಿಗೆ ನೋಟೀಸ್ ನೀಡಲಾಗುವುದು. ಆದರೂ ಇದೇ ಮುಂದುವರಿದರೆ ಕ್ರಮ ಜರುಗಿಸುವುದಾಗಿ ಕುಶಾಲನಗರ ತಹಸೀಲ್ದಾರ್ ಕಿರಣ್ ಎಚ್ಚರಿಕೆ ನೀಡಿದ್ದಾರೆ. -------------ನಿಸರ್ಗಧಾಮದಲ್ಲಿ ಬೋಟಿಂಗ್ ಸ್ಥಗಿತಕೊಡಗಿನ ಪ್ರಮುಖ ಪ್ರವಾಸಿ ತಾಣ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ ನದಿ ನೀರು ತಳ ಕಡಿಮೆಯಾಗಿದ್ದು ತಳ ಕಾಣುತ್ತಿದೆ. ಇಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡುತ್ತಿದ್ದ ಪೆಡ್ಲರ್ ಬೋಟ್ ಗಳನ್ನು ನೀರು ಕಡಿಮೆಯಾಗಿರುವ ಕಾರಣ ಸ್ಥಗಿತ ಮಾಡಲಾಗಿದೆ. ನದಿಯ ಅಡ್ಡಲಾಗಿ ಅರಣ್ಯ ಇಲಾಖೆಯಿಂದ ಸ್ಯಾಂಡ್ ಬಂಡ್ ನಿರ್ಮಾಣ ಮಾಡಲಾಗಿದ್ದರೂ ಕೂಡ ಕೇವಲ ಒಂದೆರಡು ಅಡಿಯಷ್ಟು ಮಾತ್ರ ಇದೆ. ಮುಂದಿನ ದಿನಗಳಲ್ಲಿ ನೀರು ಮತ್ತಷ್ಟು ಇಳಿಮುಖವಾಗುವ ಆತಂಕ ಉಂಟಾಗಿದೆ.
-----------ಜಲಚರಗಳಿಗೆ ಕಾದಿದೆ ಆಪತ್ತು!ಕಾವೇರಿ ನಿಸರ್ಗಧಾಮದ ಬಳಿಯಲ್ಲಿ ನದಿ ನೀರು ತೀವ್ರ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಇಲ್ಲಿನ ಜಲಚರಗಳಿಗೆ ಆಪತ್ತು ಕಂಡುಬಂದಿದೆ. 2018ರಲ್ಲಿ ಬೇಸಗೆ ಸಂದರ್ಭದಲ್ಲಿ ನೀರು ಇಳಿಮುಖವಾಗಿದ್ದ ಪರಿಣಾಮ ಕಾವೇರಿ ನಿಸರ್ಗಧಾಮದಲ್ಲಿ ಮಹಶೀರ್ ಮೀನುಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ಬರುವ ಸಾಧ್ಯತೆ ಬಹುತೇಕ ಸನ್ನಿಹಿತವಾಗಿದೆ. ಇನ್ನೂ ಎರಡೂವರೆ ತಿಂಗಳು ಬೇಸಗೆ ಇರುವುದರಿಂದ ನೀರು ಎಷ್ಟು ಪ್ರಮಾಣದಲ್ಲಿ ಇರುತ್ತದೆಯೋ ಎಂದು ಕಾದು ನೋಡಬೇಕಿದೆ.------------ಕಾವೇರಿ ನದಿ ಹಾಗೂ ನದಿ ಮೂಲಗಳಿಂದ ಅಕ್ರಮವಾಗಿ ಮೋಟಾರ್ ಪಂಪ್ ಸೆಟ್ ಗಳ ಮೂಲಕ ನೀರು ತೆಗೆಯದಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕಾವೇರಿ ನದಿಯಲ್ಲಿ ಹಾಕಲಾಗಿರುವ ಮೋಟಾರ್ ಪಂಪ್ ಸೆಟ್ ಗಳ ಸರ್ವೇ ಮಾಡಲಾಗುವುದು. ಕುಡಿಯುವ ನೀರು ಹೊರತುಪಡಿಸಿ ಇತರೆ ಚಟುವಟಿಕೆಗೆ ನೀರು ಬಳಿಸಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದಿಕೊಳ್ಳಲಾಗುವುದು.-ಕಿರಣ್ ಗೌರಯ್ಯ, ತಹಸೀಲ್ದಾರ್ ಕುಶಾಲನಗರ ತಾಲೂಕು.