ಕಾರ್ಯಾಚರಣೆಯಲ್ಲಿ ಅಂದಾಜು ₹13.88 ಲಕ್ಷ ಮೌಲ್ಯದ 34.72 ಟನ್ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್ ತಿಳಿಸಿದರು.
ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಪಾಲಿಶ್ ಮಾಡಿ ಅಕ್ರಮವಾಗಿ ಗುಜರಾತ್‌ಗೆ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಬೆಟಗೇರಿ ಬಡಾವಣೆ ಪೊಲೀಸರು ಭೇದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಂದಾಜು ₹13.88 ಲಕ್ಷ ಮೌಲ್ಯದ 34.72 ಟನ್ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್ ತಿಳಿಸಿದರು.ನಗರದ ಎಪಿಎಂಸಿ ಆವರಣದಲ್ಲಿರುವ ಆಹಾರ ನಿಗಮದ ಗೋದಾಮಿನಲ್ಲಿ ಗುರುವಾರ ಜಪ್ತಿ ಮಾಡಿದ ಅಕ್ಕಿಯನ್ನು ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬುಧವಾರ ಸಂಜೆ ಗದಗಿನ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಎದುರು ಅಕ್ಕಿ ತುಂಬಿದ ಲಾರಿಯೊಂದು ಸಂಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಬೆಟಗೇರಿ ಬಡಾವಣೆ ಪೊಲೀಸರು ದಾಳಿ ನಡೆಸಿ ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ, ಹರಪನಹಳ್ಳಿಯಿಂದ ಗುಜರಾತ್‌ಗೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.ಸಾಮಾನ್ಯ ಪಡಿತರ ಅಕ್ಕಿಯನ್ನು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗದಂತೆ ಫ್ಯಾಕ್ಟರಿಯಲ್ಲಿ ಪಾಲಿಶ್ ಮಾಡಲಾಗಿತ್ತು. ಅಲ್ಲದೇ ಇದು ಪಡಿತರ ಅಕ್ಕಿಯಲ್ಲ ಎಂದು ಬಿಂಬಿಸಲು ಆರೋಪಿಗಳು ನಕಲಿ ವೇಬಿಲ್ ಹಾಗೂ ಇತರೆ ದಾಖಲೆಗಳನ್ನು ಸೃಷ್ಟಿಸಿದ್ದರು. ಆದರೆ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಇದು ಪಡಿತರ ಅಕ್ಕಿ ಎನ್ನುವುದನ್ನು ಖಚಿತಪಡಿಸಿದ ನಂತರ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಆರಂಭಿಸಿದ್ದೇವೆ ಎಂದರು.ಈ ಪ್ರಕರಣದಲ್ಲಿ ಒಟ್ಟು 34,720 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು ₹13.88 ಲಕ್ಷ. ಅಕ್ಕಿ ಸಾಗಿಸಲು ಬಳಸಿದ ಲಾರಿ ಸೇರಿದಂತೆ ಒಟ್ಟು ₹42.88 ಲಕ್ಷ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದರು.ತನಿಖೆ ಚುರುಕು: ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಈತ ಮಧ್ಯಪ್ರದೇಶ ಮೂಲದವನಾಗಿದ್ದಾನೆ. ಲಾರಿ ಬಾಡಿಗೆಗೆ ಬೇಕೆಂದು ಹೇಳಿ ಈತನನ್ನು ಕರೆಸಿಕೊಳ್ಳಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಕ್ಕಿಯನ್ನು ಪಾಲಿಶ್ ಮಾಡಿದ ಫ್ಯಾಕ್ಟರಿ ಮಾಲೀಕರು ಮತ್ತು ನಕಲಿ ಬಿಲ್ ಸೃಷ್ಟಿಸಿದ ಕಿಂಗ್‌ಪಿನ್‌ಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದರು.ಈ ವೇಳೆ ಡಿವೈಎಸ್ಪಿ ಮುರ್ತುಜಾ ಖಾದ್ರಿ ಹಾಗೂ ಆಹಾರ ನಿರೀಕ್ಷಕ ಜಗದೀಶ ಅಮಾತಿ ಉಪಸ್ಥಿತರಿದ್ದರು.