ಪಡಿತರ ಅಕ್ಕಿ ರಾಗಿ ಅಕ್ರಮ ಮಾರಾಟ ಕ್ರಮಕ್ಕೆ ಒತ್ತಾಯ

| Published : Aug 11 2024, 01:32 AM IST

ಸಾರಾಂಶ

ಅಕ್ಕಿ ರಾಗಿಯನ್ನು ಮರು ದಿನವೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಾರೆ.

ಹೂವಿನಹಡಗಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ, ರಾಗಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಸಂಘಟನೆ ತಹಸೀಲ್ದಾರ್‌ಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.

ರಾಜ್ಯ ಸಂಚಾಲಕ ಹಲಗಿ ಸುರೇಶ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಿಂದ ಬಡವರಿಗೆ ವಿತರಣೆ ಮಾಡಿದ ಅಕ್ಕಿ ರಾಗಿಯನ್ನು ಮರು ದಿನವೇ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಾರೆ. ಹಾಗಾಗಿ ಕೂಡಲೇ ಪಡಿತರ ಅಕ್ಕಿ-ರಾಗಿ ಮಾರಾಟಗಾರರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗ್ರಾಮೀಣ ಭಾಗದ ಹಿರೇಹಡಗಲಿ, ಕೊಳಚಿ, ಮಾಗಳ, ಹೊಸಳ್ಳಿ ಸೋಗಿ, ಹುಗಲೂರು ಇತರೆ ಪ್ರದೇಶಗಳಲ್ಲಿ ಟಿವಿಎಸ್ ಏಕ್ಸಲ್ ದ್ವಿಚಕ್ರ ವಾಹನದಲ್ಲಿ ಸ್ಕೆಲ್ ತಕ್ಕಡಿ ಇಟ್ಟುಕೊಂಡು ರಾಜಾರೋಷವಾಗಿ ಅಕ್ಕಿ -ರಾಗಿಯನ್ನು ಕಡಿಮೆ ಬೆಲೆಯಲ್ಲಿ ಪಡಿತರ ಫಲಾನುಭವಿಗಳಿಂದ ಖರೀದಿಸುತ್ತಿದ್ದಾರೆ. ರಾತ್ರಿ ವೇಳೆ ವೇಬಿಡ್ಜ್ ನಲ್ಲಿ ತೂಕ ಮಾಡಿಸಿ, ಪೊಲೀಸ್ ಇಲಾಖೆ ಕಣ್ಣು ತಪ್ಪಿಸಿ ದೂರದ ಪಟ್ಟಣಕ್ಕೆ ಟಾಟಾ ಎಸಿ ಇತರೆ ವಾಹನಗಳ ಮೂಲಕ ಸ್ಥಳಾಂತರಿಸುತ್ತಿದ್ದಾರೆ ಎಂದು ದೂರಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಕಾಳ ಸಂತೆ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಂಚಾಲಕ ಬಿ.ಮುಕುಂದಗೌಡ, ಎಂ.ಶಬ್ಬೀರ್‌, ಗಿರಿರಾಜ, ಮೆಹಬೂಬ್‌ ಬಾಷ ಇತರರು ತಹಸೀಲ್ದಾರ್‌ ಸಂತೋಷಕುಮಾರ ಅವರಿಗೆ ಮನವಿ ಸಲ್ಲಿಸಿದರು.