ಶಕ್ತಿ, ಸಾಮರ್ಥ್ಯದಿಂದ ಮಾತ್ರ ವಿಶ್ವಗುರುವಿನ ಸ್ಥಾನ ಸಾಧ್ಯ: ಲೆ.ಜ. ಡಾ. ಬಿ.ಎನ್.ಪ್ರಸಾದ್

| Published : Aug 11 2024, 01:32 AM IST

ಶಕ್ತಿ, ಸಾಮರ್ಥ್ಯದಿಂದ ಮಾತ್ರ ವಿಶ್ವಗುರುವಿನ ಸ್ಥಾನ ಸಾಧ್ಯ: ಲೆ.ಜ. ಡಾ. ಬಿ.ಎನ್.ಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ ಭಾರತ ಸಂಕಲ್ಪ ದಿನ ಸಮಾರಂಭ ನಡೆಯಿತು. ಶಕ್ತಿ, ಸಾಮರ್ಥ್ಯ ಮೈಗೂಡಿಸಿಕೊಂಡಾಗ ಮಾತ್ರ ಭಾರತ ವಿಶ್ವಗುರುವಿನ ಸ್ಥಾನ ತಲುಪಲು ಸಾಧ್ಯ ಎಂದು ಲೆ.ಜ. ಡಾ. ಬಿ. ಎನ್‌. ಬಿ.ಎಂ. ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂಘಟಿತ ಸಮಾಜವು ತನ್ನಲ್ಲಿ ಶಕ್ತಿ ಮತ್ತು ಸಾಮರ್ಥ್ಯವನ್ನು ಮೈಗೂಡಿಸಿಕೊಂಡಾಗ ಮಾತ್ರ ಭಾರತವು ವಿಶ್ವಗುರುವಿನ ಸ್ಥಾನ ತಲುಪಲು ಸಾಧ್ಯ ಎಂದು ಲೆ. ಜ. ಡಾ.ಬಿ.ಎನ್. ಬಿ.ಎಂ. ಪ್ರಸಾದ್ ಅಭಿಪ್ರಾಯಪಟ್ಟರು.

ಹಿಂದು ಜಾಗರಣಾ ವೇದಿಕೆ ವತಿಯಿಂದ ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಅಖಂಡ ಭಾರತ ಸಂಕಲ್ಪ ದಿನದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತವು ಜ್ಞಾನ, ಆಧ್ಯಾತ್ಮಿಕತೆ, ಯೋಗ ಮತ್ತು ಕೌಟುಂಬಿಕ ಜೀವನ ಮೌಲ್ಯಗಳ ಪರಂಪರೆಯನ್ನು ಹೊಂದಿರುವ ಸಂಸ್ಕೃತಿಯಾಗಿದ್ದು, ಪ್ರತಿಯೊಬ್ಬ ಭಾರತೀಯನು ತನ್ನಲ್ಲಿ ಜ್ಞಾನ, ಆಧ್ಯಾತ್ಮಿಕ ಶಕ್ತಿ, ಯೋಗ ಶಕ್ತಿಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕಾಗಿದೆ. ಕೌಟುಂಬಿಕ ಸಹಬಾಳ್ವೆಯ ಪರಂಪರೆಯನ್ನು ವಿಶ್ವಕ್ಕೆ ಭಾರತ ಕೊಡುಗೆಯಾಗಿ ನೀಡಿದೆ. ಹಿಂದೆ ಭಾರತೀಯರಲ್ಲಿ ಈ ರೀತಿಯ ಶಕ್ತಿ ಸಾಮರ್ಥ್ಯ ಎಲ್ಲವೂ ಇತ್ತು. ನಮ್ಮ ಋಷಿ ಮುನಿಗಳು ಮತ್ತು ಹಿರಿಯರು ಅದನ್ನು ಸಾಬೀತುಪಡಿಸಿದ್ದರು. ಇದನ್ನು ಪ್ರತಿಯೊಬ್ಬ ಭಾರತೀಯರು ಮೈಗೂಡಿಸಿಕೊಂಡಾಗ ಖಂಡಿತವಾಗಿಯೂ ಭಾರತ ವಿಶ್ವಗುರುವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ರೂಟ್ಸ್ ಅಂಡ್ ಬ್ರಾಂಚಸ್ ರಿಸರ್ಚ್ ಫೌಂಡೇಶನ್ ಮುಖ್ಯಸ್ಥರಾದ ಜಿ.ಆರ್.ಜಗದೀಶ್ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಐ ಎನ್ ಎ ಮೂಲಕ ಹೊರಟವನ್ನು ರೂಪಿಸಿದ್ದರು. ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಸುಭಾಷ್ ಚಂದ್ರ ಬೋಸ್ ನೇಮಕವಾಗ ಬೇಕಾಗಿತ್ತು. ಆದರೆ ಭಾರತೀಯರ ದುರಂತ ಅವರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ತಲೆದೋರಿತು. ಇದೇ ಸಂದರ್ಭ ಸ್ವಾತಂತ್ರ್ಯವನ್ನು ಉಳಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಯಿತು. 2025 ಕ್ಕೆ ಸಂಘಕ್ಕೆ ನೂರು ವರ್ಷ ತುಂಬಲಿದೆ. ಸಂಘ ಸ್ಥಾಪನೆ ಆಗದೆ ಇದ್ದಿದ್ದರೆ ಇವತ್ತಿನ ಭಾರತದ ಚಿತ್ರಣವೇ ಬದಲಾಗಿರುತ್ತಿತ್ತು ಎಂದು ವಿಷಾದಿಸಿದ ಅವರು ಭಾರತವು ಕಳೆದ ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಣೆ ಮಾಡಿದೆ. ಈ ಸಂದರ್ಭ ಪ್ರತಿಯೊಬ್ಬ ಭಾರತೀಯನು ಸ್ವಾತಂತ್ರ್ಯವನ್ನು ಏಕೆ ಕಳೆದುಕೊಂಡಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

ಹಿಂದೆ ವಿದೇಶಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬರುತ್ತಿದ್ದರು. ಆ ಸಂದರ್ಭ ನಮ್ಮ ದೇಶದ ಜನರಲ್ಲಿ ಜ್ಞಾನಶಕ್ತಿ, ಆಧ್ಯಾತ್ಮಿಕ ಶಕ್ತಿ ಹೊಂದಿದ್ದರು. ವಿದೇಶಿಯರ ಆಕ್ರಮಣದಿಂದಾಗಿ ನಮ್ಮತನವನ್ನು ಕಳೆದುಕೊಂಡ ಪರಿಣಾಮ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಯಿತು. ವಿಶ್ವಕ್ಕೆ ನಾಗರಿಕತೆಯನ್ನು ಕಲಿಸಿದವರು ಭಾರತೀಯರು. ಭಾರತೀಯ ಸಾಂಸ್ಕೃತಿಕ ಪರಂಪರೆ, ಜ್ಞಾನ ಆಧ್ಯಾತ್ಮಿಕತೆಯನ್ನು ಇಡೀ ವಿಶ್ವಕ್ಕೆ ಹಂಚುವ ಕೆಲಸ ಆಗಬೇಕಾಗಿದೆ. ಆ ಮೂಲಕ ವಿಶ್ವವೇ ಒಂದು ಕುಟುಂಬ ಎನ್ನುವ ಮೌಲ್ಯವನ್ನು ಸಾರಿದಾಗ ಭಾರತ ಶಕ್ತಿಶಾಲಿ ಆಗಲಿದ್ದು, ಅಖಂಡ ಭಾರತದ ಸಂಕಲ್ಪ ಸಾಕಾರಗೊಳ್ಳಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಭಜನಾ ಶಿಕ್ಷಕ ರವಿಭೂತನಕಾಡು ಅವರ ತಂಡದಿಂದ ದೇಶಭಕ್ತಿ ಗೀತೆಗಳ ಗಾಯನ ನಡೆದರೆ, ಕೊನೆಯಲ್ಲಿ ವಂದೇ ಮಾತರಂ ಹಾಡಿದರು.

ವೇದಿಕೆಯಲ್ಲಿ ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಅಜಿತ್, ಮಡಿಕೇರಿ ತಾಲೂಕು ಸಂಯೋಜಕ ದುರ್ಗೇಶ್ ಉಪಸ್ಥಿತರಿದ್ದರು.

ಹಿಂದು ಜಾಗರಣಾ ವೇದಿಕೆ ಮಡಿಕೇರಿ ತಾಲೂಕು ಸಹ ಸಂಯೋಜಕ ಶ್ಯಾಮ್ ಸ್ವಾಗತಿಸಿದರು. ಜಿಲ್ಲಾ ಸಹ ಸಂಯೋಜಕ ಸುನೀಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇದಕ್ಕೂ ಮೊದಲು ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ. ಕೆ. ಮಹೇಶ್ ಕುಮಾರ್, ಕೆ. ಕೆ. ದಿನೇಶ್ ಕುಮಾರ್, ಶಿವರಾಜ್, ನಂದಕುಮಾರ್, ಚೇತನ್, ಕುಮಾರ್, ತಿಮ್ಮಯ್ಯ, ಬಿ.ಕೆ.ಜಗದೀಶ್, ನಗರ ಸಭಾ ಸದಸ್ಯರಾದ ಎಸ್.ಸಿ.ಸತೀಶ್, ಅಪ್ಪಣ್ಣ ಹಾಗೂ ಇತರರು ಇದ್ದರು.