ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ಮೈಲಾರ-ಕಂಚರಗಟ್ಟಿ ಸೇತುವೆಯ ಬುಡದಲ್ಲೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ತಡೆಗಟ್ಟಲು ಸರ್ಕಾರ ರಚಿಸಿರುವ ಕಾವಲು ಸಮಿತಿ ಕಡತಕ್ಕೆ ಮಾತ್ರ ಸೀಮಿತವಾಗಿದೆ.ಹೌದು, ತುಂಗಭದ್ರಾ ನದಿ ತೀರದ ಮೈಲಾರ ಬಳಿ ವಿಜಯನಗರ, ಹಾವೇರಿ ಜಿಲ್ಲೆಗಳ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಿಸಲಾಗಿದೆ. ಸೇತುವೆಗೆ ಯಾವುದೇ ರೀತಿಯ ಹಾನಿಯಾಗಬಾರದು ಎಂಬ ಕಾರಣಕ್ಕಾಗಿ ಸೇತುವೆಯ ಇಕ್ಕೆಲಗಳಲ್ಲಿ 1 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಎಲ್ಲ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೇತುವೆಯ ಪ್ರದೇಶದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೂಡ ಈ ಪ್ರದೇಶ ವ್ಯಾಪ್ತಿಯಲ್ಲಿ ಮರಳಿನ ಬ್ಲಾಕ್ ರಚನೆ ಮಾಡಿಲ್ಲ. ಇದರಿಂದ ಮರಳಿನ ನಿಕ್ಷೇಪ ಬಹಳಷ್ಟು ಸಂಗ್ರಹವಾಗಿದೆ. ಇದನ್ನು ಲೂಟಿ ಮಾಡುತ್ತಿರುವ ದಂಧೆಕೋರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಸೇತುವೆ ಬುಡದಲ್ಲೇ ನಿತ್ಯ 25ಕ್ಕೂ ಹೆಚ್ಚು ಕಬ್ಬಿಣದ ತೆಪ್ಪದಲ್ಲಿ ನೀರಿನ ಆಳದಲ್ಲಿರುವ ಮರಳನ್ನು ಲೂಟಿ ಮಾಡುತ್ತಿದ್ದಾರೆ. ತೆಪ್ಪದಲ್ಲಿನ ಮರಳನ್ನು ನದಿ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಟ್ರಾಕ್ಟರ್, ಲಾರಿಗಳ ಮೂಲಕ ಕಳ್ಳ ಸಾಗಣೆ ಮಾಡುತ್ತಿದ್ದಾರೆ.ವಿಜಯನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ಮರಳನ್ನು ಹಾವೇರಿ ಜಿಲ್ಲೆಯ ಮರಳು ಅಕ್ರಮ ದಂಧೆಕೋರರು ಕಬ್ಬಿಣದ ತೆಪ್ಪಗಳಲ್ಲಿ ಲೂಟಿ ಮಾಡುತ್ತಿದ್ದಾರೆ.
ಹೂವಿನಹಡಗಲಿ ತಾಲೂಕಿನಲ್ಲಿ 6 ಬ್ಲಾಕ್, ಹರಪನಹಳ್ಳಿಯ ವ್ಯಾಪ್ತಿಯಲ್ಲಿ 2 ಮರಳಿನ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಇವುಗಳ ಟೆಂಡರ್ ಕೂಡ ಆಗಿತ್ತು. ಆದರೆ ಕೆಲ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮರಳಿನ ಬ್ಲಾಕ್‌ನಿಂದ ಮರಳು ಸಂಗ್ರಹಕ್ಕೆ ಅವಕಾಶ ಇಲ್ಲದಂತಾಗಿದೆ.
ತಾಲೂಕಿನ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ, ಮೈಲಾರ, ಮದಲಗಟ್ಟಿ, ನವಲಿ ಗ್ರಾಮಗಳಲ್ಲಿ ಹಾಡುಹಗಲೇ ಎತ್ತಿನಬಂಡಿ ಮತ್ತು ಆಟೋಗಳಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದೆ. ಇನ್ನು ಕೆಲವೆಡೆ ಲಾರಿಗಳಲ್ಲಿ ಸಾಗಣೆ ಮಾಡುತ್ತಿದ್ದಾರೆ.
ಮರಳು ಅಕ್ರಮ ದಂಧೆಯಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ರಾಜಸ್ವ ಧನ ನಷ್ಟ ಉಂಟಾಗುತ್ತಿದೆ. ಮರಳು ಅಕ್ರಮ ದಂಧೆ ತಡೆಗೆ ತಾಲೂಕು, ಜಿಲ್ಲಾ ಮಟ್ಟದಲ್ಲಿ ಕಾವಲು ಸಮಿತಿ ರಚಿಸಲಾಗಿದೆ. ಇದರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಆದರೆ ಹಾಡುಹಗಲೇ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಈ ಕಾವಲು ಸಮಿತಿ ಕೇವಲ ಕಡತದಲ್ಲೇ ಮಾತ್ರ ಉಳಿದುಕೊಂಡಿದೆ ಎಂದು ದೂರುಗಳು ಕೇಳಿ ಬರುತ್ತಿವೆ.ತುಂಗಭದ್ರಾ ನದಿ ತೀರದಲ್ಲಿ ಕಬ್ಬಿಣ ತೆಪ್ಪ ಬಳಸಿ ನಡೆಯುವ ಮರಳು ಅಕ್ರಮ ದಂಧೆ ತಡೆಗೆ ಕ್ರಮ ವಹಿಸಿತ್ತೇವೆ. ಯಾವುದೇ ಕಾರಣಕ್ಕೂ ಇಂತಹ ವ್ಯವಸ್ಥೆಗೆ ಅವಕಾಶ ನೀಡುವುದಿಲ್ಲ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ.
ಕಳೆದ ಮೂರು ವರ್ಷಗಳಿಂದ ಮನೆ ಕಟ್ಟಲು ಮರಳು ಸಿಗುತ್ತಿಲ್ಲ. ಸರ್ಕಾರದಿಂದ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತೆ ಮಾಡುತ್ತೇವೆಂಬ ಸುಳ್ಳು ಭರವಸೆ ಕೇಳಿ ರೋಸಿ ಹೋಗಿದ್ದೇವೆ. ಕಳ್ಳ ಹಾದಿಯಲ್ಲಿ ತಂದ ಮರಳನ್ನು ದುಬಾರಿ ದರದಲ್ಲಿ ಖರೀದಿಸುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಚಿಸದ ನದಿ ತೀರದ ಜನ.