ಸಾರಾಂಶ
-ಭೀಮರಾಯನ ಗುಡಿ ಕಾಲುವೆ ಬಳಿ ಲಾರಿ ತಡೆದು ವಶಕ್ಕೆ । 5 ಲಕ್ಷ ಮೌಲ್ಯದ 140 ಕ್ವಿಂಟಾಲ್ ಅಕ್ಕಿ ಪೊಲೀಸರ ವಶಕ್ಕೆ । ಲಾರಿ ಚಾಲಕ ಬಂಧನ
-----ಕನ್ನಡಪ್ರಭ ವಾರ್ತೆ ಶಹಾಪುರ
ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಡಿ, ಲಾರಿ ಸಮೇತ ಅಂದಾಜು 4.70 ಲಕ್ಷ ರು.ಗಳ ಮೌಲ್ಯದ 140 ಕ್ವಿಂಟಾಲ್ ಅಕ್ಕಿ ದಾಸ್ತಾನನ್ನು ತಾಲೂಕಿನ ಭೀಮರಾಯನ ಗುಡಿ ಪೊಲೀಸರು ಮುಖ್ಯ ಕಾಲುವೆ ಸಮೀಪ ವಶಪಡಿಸಿಕೊಂಡಿದ್ದಾರೆ.ಭಾರತೀಯ ಆಹಾರ ನಿಗಮದಿಂದ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲಾಗುವ ಚೀಟಿ (ಟ್ಯಾಗ್) ಹೊಂದಿರುವ, 282 ಪ್ಯಾಕೇಟುಗಳಲ್ಲಿನ 140 ಕ್ವಿಂಟಾಲ್ ಅಕ್ಕಿ ಇದಾಗಿದೆ. ಈ ಕುರಿತು ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ರಾತ್ರಿ 9 ಗಂಟೆಗೆ, ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ಕಡೆಯಿಂದ ಶಹಾಪುರ ಮಾರ್ಗವಾಗಿ ರಾಜ್ಯ ಹೆದ್ದಾರಿಯಲ್ಲಿ ಹೊರಟಿದ್ದ ಲಾರಿಯಲ್ಲಿ ಅಕ್ರಮ ಅಕ್ಕಿ ದಾಸ್ತಾನು ಹೊರಟಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಲಾರಿ ಮಾಲೀಕ ಕಂ ಚಾಲಕ ರಾಜು ಸೋಮ್ಲು ನಾಯಕ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.ವಶಪಡಿಸಿಕೊಂಡ ಅಕ್ಕಿ ದಾಸ್ತಾನನ್ನು ನಗರದ ಹೊರವಲಯದಲ್ಲಿರುವ ಕೆಎಫ್ಸಿಸಿ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ.
ಅಕ್ಕಿ ಅಕ್ರಮ ಅವ್ಯಾಹತ: ಪಡಿತರ ಅಕ್ಕಿ ಸಾಗಾಟ ಅವ್ಯಾಹತವಾಗಿ ನಡೆದಿದ್ದು, ರಾಜಕೀಯ ಪ್ರಭಾವ ಹಾಗೂ ಅಧಿಕಾರಿಗಳ ಹೊಂದಾಣಿಕೆಯಿಂದ ಎಗ್ಗಿಲ್ಲದೆ ನಡೆಯುತ್ತಿದೆ.ಪೊಲೀಸರು ಕೇವಲ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳುವ ಮೂಲಕ, ಆಳವಾದ ತನಿಖೆಗಿಳಿಯದೆ ಪ್ರಕರಣ ಮುಚ್ಚಿ ಹಾಕುತ್ತಾರೆ ಎಂಬ ಅಪವಾದಗಳು ಸಾರ್ವಜನಿಕ ವಲಯದಲ್ಲಿವೆ.
ಬಡವರ ಹೊಟ್ಟೆ ತುಂಬಲಿ ಎಂದು ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪಡಿತರ ಅಂಗಡಿಗಳ ಮೂಲಕ ಅಕ್ಕಿ ನೀಡುತ್ತದೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಈ ಪಡಿತರ ಆಹಾರ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ. ಈ ಹಿಂದೆಯೂ ನಡೆದ ಅನೇಕ ಅಕ್ರಮ ಅಕ್ಕಿ ಸಾಗಾಣಿಕೆ ಪ್ರಕರಣಗಳು ಹಳ್ಳ ಹಿಡಿದಂತಿವೆ. ಅಕ್ರಮಕ್ಕೆ ಕಡಿವಾಣ ಹಾಕಬೇಕಾಗಿರುವ ಅಧಿಕಾರಿಗಳೇ ಅಕ್ರಮ ದಂಧೆಗೆ ಕೈಜೋಡಿಸಿದ್ದಾರೆ ಎಂಬ ಸಾರ್ವಜನಿಕ ಆರೋಪಗಳು ಮೂಡಿವೆ.ಜಪ್ತಿಯಾದ ಪಡಿತರ ಅಕ್ಕಿ ಚೀಲಗಳು ಯಾರಿಗೆ ಸೇರಿದ್ದು ? ಎಲ್ಲಿಂದ ಎಲ್ಲಿಗೆ ಹೋಗುತ್ತಿದ್ದವು ಎಂಬುದು ಪತ್ತೆಯಾಗಬೇಕಿದೆ.
ಅಕ್ಕಿ ಹಗರಣ ಪ್ರಕರಣ ರಾಜ್ಯದಾದ್ಯಂತ ಮನೆ ಮಾತಾಗಿದ್ದು, ಇದರಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಸರಬರಾಜು ಮಾಡಲು ಅಕ್ಕಿ ದೊರೆಯುತ್ತಿಲ್ಲ. ಹೀಗಾಗಿ ವಸತಿ ನಿಲಯದಲ್ಲಿ ಮಕ್ಕಳು ಉಪವಾಸ ಬೀಳುವಂತ ಸ್ಥಿತಿ ನಿರ್ಮಾಣವಾಗಿದೆ. ದೀನ ದಲಿತರು, ಹಿಂದುಳಿದವರ ಪಾಲಿನ ಅಕ್ಕಿ ಕಳ್ಳತನ ಮಾಡಿದ ಆರೋಪಿ ಯಾರೇ ಆಗಿರಲಿ, ಎಷ್ಟೇ ಬಲಿಷ್ಠವಾಗಿರಲಿ ಕೂಡಲೇ ಬಂಧಿಸಬೇಕೆಂದು ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಒತ್ತಾಯಿಸಿದ್ದಾರೆ.ಫೋಟೊ: 12ವೈಡಿಆರ್1: ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಶಹಾಪುರ ನಗರದ ಹೊರವಲಯದಲ್ಲಿರುವ ಕೆ ಎಫ್ ಸಿ ಸಿ ಉಗ್ರಾಣದಲ್ಲಿ ಸಂಗ್ರಹಿಸಲಾಗಿದೆ.
-----ಫೋಟೊ: 12ವೈಡಿಆರ್2 : ಬೀದರ್ - ಬೆಂಗಳೂರು ರಾಜ್ಯ ಹೆದ್ದಾರಿಯ ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಮುಖ್ಯ ಕಾಲುವೆ ಹತ್ತಿರ ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಲಾರಿ ಪೊಲೀಸರು ವಶಪಡಿಸಿಕೊಂಡಿರುವುದು.
------