ಸಾರಾಂಶ
ಕನ್ನಡಪ್ರಭ ವಾರ್ತೆ ಚೇಳೂರು
ನಲ್ಲಗುಟ್ಟ ಗುಡ್ಡದ ಮೇಲೆ ಭೂಮಿ ಕಬಳಿಕೆ ಲೂಟಿಕೋರರ ಕಣ್ಣು ಬಿದ್ದಿದ್ದು ಯಂತ್ರಗಳನ್ನು ಬಳಸಿ ಗುಡ್ಡವನ್ನು ನೆಲಸಮ ಮಾಡಲಾಗುತ್ತಿದೆ. ಸ್ಥಳಿಯ ನಾಡಕಚೇರಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ಭೂಕನಳಿಕೆದಾರರ ಜೋತೆ ಶಾಮಿಲಾಗಿ ಒಳೊಪ್ಪಂದ ಮಾಡಿಕೋಂಡು ಮಾಮೂಲಿ ಪಡೆದು ಕಣ್ ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.ತಾಲೂಕಿನ ಚಿಲಕಲನೇರ್ಪು ಹೋಬಳಿ ಕೇಂದ್ರವಾಗಿದ್ದು ಇಲ್ಲಿ ನಾಡಕಚೇರಿ ಅಧಿಕಾರಿಗಳು ಹಾಗೂ ಗ್ರಾಂ ಪಂಚಾಯತಿ ಅಧಿಕಾರಿಗಳು ಇದ್ದಾರೆ. ಆದರೂ ಗ್ರಾಮದಿಂದ ಪಾಳ್ಯಕೆರೆ ಹೋಗುವ ಮುಖ್ಯ ರಸ್ತೆಯ ಸನಿಹದಲ್ಲೇ ಇರುವ ನಲ್ಲಗುಟ್ಟ ಗುಡ್ಡ ಕೆಲವು ಭೂಮಿ ಲೂಟಿಕೋರರು ಹಾಗೂ ಮಣ್ಣು ದಂದೆಕೋರರ ಪಾಲಾಗುತ್ತಿದೆ.
ಭೂ ಮಾಫಿಯಾ ಚಟುವಟಿಕೆಕಳೆದ ಒಂದು ತಿಂಗಳಿನಿಂದ ಗುಡ್ಡವನ್ನು ಕೊರೆದು ದಾರಿ ನಿರ್ಮಿಸಿ, ಸುಮಾರು ಎರಡು ಎಕರೆ ನೆಲಸಮ ಮಾಡಿ ಭೂಮಿ ಕಬಳಿಕೆ ಮಾಡಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಈ ಹಿಂದೆ ಕೂಡ ಚಿಲಕಲನೇರ್ಪು ಗ್ರಾಮದಲ್ಲಿ ನಲ್ಲಗುಟ್ಟ ಗುಡ್ಡವನ್ನು ಹಿಟಾಚಿ ಹಾಗೂ ಟಿಪ್ಪರ್ ಮೂಲಕ ಅಕ್ರಮವಾಗಿ ಮಣ್ಣು ಲೂಟಿ ಮಾಡಿ ಮುಖ್ಯ ರಸ್ತೆಗೆ ಹಾಕಲಾಗುತ್ತಿತ್ತು. ಈಗ ಮತ್ತೆ ಏಕಾಏಕಿ ಭೂ ಮಾಫಿಯಾ ಮಾಲೀಕರ ಕಣ್ಣು ಗುಡ್ಡದ ಮೇಲೆ ಬಿದ್ದಿದೆ.
ಹೀಗಿದ್ದರೂ ಸ್ಥಳೀಯ ಗ್ರಾಂ ಪಂಚಾಯತಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಅದನ್ನು ತಡೆಯುವ ಕೆಲಸ ಮಾಡುತ್ತಿಲ್ಲ ಎಂದು ಜನ ದೂರಿದ್ದಾರೆ. ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಚಿಲಕಲನೇರ್ಪು ನಲ್ಲಗುಟ್ಟ ಗುಡ್ಡದಲ್ಲಿ ನಡೆದಿರುವ ಅಕ್ರಮ ಭೂಮಿ ಕಬಳಿಕೆ ಹಾಗೂ ಮಣ್ಣು ಲೂಟಿ ಮಾಡಿರುವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ. ಕೋಟ್....ಚಿಲಕಲನೇರ್ಪು ಗ್ರಾಮದಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಅಕ್ರಮವಾಗಿ ನಲ್ಲಗುಟ್ಟಾ ಗುಡ್ಡ ಕೊರೆದು ಕಬಲಿಕೆಗೆ ಮುಂದಾಗಿದ್ದು ಈ ಕುರಿತು ಚಿಲಕಲನರ‍್ಪು ನಾಡಕಛೇರಿ ಆರ್ ಐ ರವರಿಂದ ಸಂಪೂರ್ಣ ಮಾಹಿತಿ ಪಡೆದು ಒತ್ತುವರಿದಾರರ ವಿರುದ್ಧ ಭೂ ಕಬಳಿಕೆ ಕೇಸ್ ದಾಖಲಿಸಲಾಗುವುದು.
- ಶ್ರೀನಿವಾಸಲು ನಾಯ್ಡು, ತಹಸೀಲ್ದಾರ್. ಚೇಳೂರು.