ಹೊಳೆನರಸೀಪುರ: ಕೈಗಾರಿಕಾ ಬಡಾವಣೆಯ ಅರ್ಫದ್ ಹುಸೇನ್ ಅವರ ಕಿಂಗ್ ಟಿಂಬರ್ಸ್ ಮತ್ತು ಟ್ರೇಡರ್ಸ್ ಗೋಡೌನ್ನಲ್ಲಿ ಅಕ್ರಮವಾಗಿ ಇಟ್ಟಿದ್ದ ೩೦ ಕ್ಯೂಬಿಕ್ ಮೀಟರ್(೩೦) ಟನ್ ಅಕೇಶಿಯಾ ಮರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು.
ಏಪ್ರಿಲ್ ೩ರ ಮಂಗಳವಾರ "ಅಕೇಶಿಯಾ ತುಂಬಿದ್ದ ಲಾರಿ ಬಿಟ್ಟು ಓಡಿದ ಲೋಡರ್ಸ್ " ಎಂಬ ಶೀರ್ಷಿಕೆಯಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಆಧಾರದಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೂಲಂಕಷ ತನಿಖೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ೩೦ ಟನ್ ಅಕೇಶಿಯಾ (ಸುಮಾರು ೨೭ ಲಕ್ಷ ರು. ಮೌಲ್ಯ) ಮರವನ್ನು ವಶಕ್ಕೆ ಪಡೆದಿದ್ದು, ಈ ಮರಕ್ಕೆ ಬೀದರ್‌ನಲ್ಲಿ ನೀಡಿದ್ದ ಪರ್ಮಿಟ್ ಅಧಿಕೃತವೇ ಅನಧಿಕೃತವೇ ಎಂದು ಪರಿಶೀಲಿಸಲಾಗುತ್ತಿದೆ. ಗೋಡೌನ್‌ನಲ್ಲಿದ್ದ ಮರಗಳನ್ನು ವಶಕ್ಕೆ ಪಡೆದಿದ್ದು, ಎಫ್‌ಐಆರ್ ದಾಖಲಿಸುತ್ತೇವೆ ಎಂದು ಆರ್‌ಎಫ್‌ಒ ದಿಲೀಪ್ ತಿಳಿಸಿದ್ದಾರೆ.ಶ್ರೀಗಂಧ, ರಕ್ತಚಂದನ ನಂತರದ ಸ್ಥಾನ ಈ ಅಕೇಶಿಯಾ ಕಟೇಚು ಮರಕ್ಕಿದ್ದು, ಈ ಮರದಿಂದ ತಯಾರಾದ ವಸ್ತುಗಳು ಲಕ್ಷಾಂತರ ಬೆಲೆ ಬಾಳುತ್ತದೆ ಎಂದು ಹೆಸರು ಹೇಳಲಿಚ್ಚಿಸದ ನಿವೃತ್ತ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಇಂತಹ ಬೆಲೆಬಾಳುವ ಮರಗಳಿಗೆ ಪ್ಲೈವುಡ್ ಎಂದು ಪರ್ಮಿಟ್ ನೀಡಿ ಅಕ್ರಮ ಸಾಗಾಟಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಅರೋಪಿಸಿದರು. ನಮ್ಮ ರಾಜ್ಯದ ಅರಣ್ಯ ಸಂಪತ್ತು ಲೂಟಿ ಆಗುತ್ತಿದೆ. ಇದನ್ನು ಕಟ್ಟುನಿಟ್ಟಾಗಿ ತಡೆದು ಅಕ್ರಮ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ನೂರಾರು ಕೋಟಿ ಅರಣ್ಯ ಸಂಪತ್ತು ಉಳಿಯುತ್ತದೆ ಎಂದು ತಿಳಿಸಿದ್ದಾರೆ.