ಸಾರಾಂಶ
ರಾಜ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಗುಜರಾತಿಗೆ ಸಾಗಾಟ ಮಾಡುತ್ತಿರುವ ವೇಳೆ ಹುಬ್ಬಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ಮತ್ತು ಬೆಂಡಿಗೇರಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎರಡು ಲಾರಿ ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ: ರಾಜ್ಯದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಗುಜರಾತಿಗೆ ಸಾಗಾಟ ಮಾಡುತ್ತಿರುವ ವೇಳೆ ಹುಬ್ಬಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಅಧಿಕಾರಿಗಳು ಮತ್ತು ಬೆಂಡಿಗೇರಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎರಡು ಲಾರಿ ವಶಪಡಿಸಿಕೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಹಾವೇರಿ ಜಿಲ್ಲೆಯಿಂದ ವಿಜಯಪುರ ಮೂಲಕ ಗುಜರಾತಿಗೆ 49 ಟನ್ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಆಹಾರ ನಿರೀಕ್ಷಕ ಶಿವಪ್ಪ ಮಹಾದೇವಪ್ಪ ವನಳ್ಳಿ ಅವರಿಗೆ ಮಂಗಳವಾರ ಸೆಟ್ಲ್ ಮೆಂಟ್ ಮುಖ್ಯರಸ್ತೆಯ ಹಾಕಿ ಗ್ರೌಂಡ್ ಬಳಿ ಪಡಿತರ ಅಕ್ಕಿ ತುಂಬಿರುವ ಎರಡು ಲಾರಿಗಳು ನಿಂತಿರುವ ಮಾಹಿತಿ ಸಿಕ್ಕಿತ್ತು. ಇದನ್ನು ಆಧರಿಸಿ ದಾಳಿ ಮಾಡಿದಾಗ ಗುಜರಾತ್ ನೋಂದಣಿ ಹೊಂದಿರುವ ಜಿಜೆ11-ವಿವಿ 8084 ಹಾಗೂ ಜಿಜೆ04-ಎಡಬ್ಲ್ಯು 6386 ಸಂಖ್ಯೆಯ ಎರಡು ಲಾರಿಗಳಲ್ಲಿ ಅಕ್ಕಿ ಇರುವುದು ದೃಢಪಟ್ಟಿದೆ.ಈ ಕುರಿತು ಆಹಾರ ನಿರೀಕ್ಷಕ ಶಿವಪ್ಪ ವನಳ್ಳಿ ಅವರು ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಾಟದ ವಾಹನಗಳ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸ್ ಆಯುಕ್ತರು ಅವರು ಗುಜರಾತ್ ಮೂಲದ ಎರಡು ಲಾರಿಗಳನ್ನು ವಶಕ್ಕೆ ಪಡೆದುಕೊಂಡು 49 ಟನ್ ಅಕ್ಕಿ ಹಾಗೂ ನಾಲ್ವರನ್ನು ಬಂಧಿಸಿದ್ದು ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.