ಸಾರಾಂಶ
ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ಗೋರಂಟ್ಲ ಕಡೆಯಿಂದ ಅಕ್ರಮವಾಗಿ ಜಾನುವಾರು ಸಾಗಿಸಿಕೊಂಡು ಬರುತ್ತಿದ್ದ ವಾಹನವನ್ನು ಜಾನುವಾರು ಸಹಿತ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ತಾಲೂಕಿನ ಚಿತ್ರಾವತಿ ಸಮೀಪ ನಡೆದಿದೆ.
ಬುಲೆರೋ ವಾಹನದಲ್ಲಿ ಗೋರಂಟ್ಲ ಕಡೆಯಿಂದ ಅಕ್ರಮವಾಗಿ ಐದು ಜಾನುವಾರುಗಳನ್ನು ಬೆಂಗಳೂರಿನತ್ತ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ನಗರದ ಹೊರ ವಲಯದ ಹಾರೋಬಂಡೆ- ಚಿತ್ರಾವತಿ ಮಾರ್ಗ ಮಧ್ಯೆ ವಾಹನವನ್ನು ಶ್ರೀಕೃಷ್ಣ ಗೋಶಾಲಾ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಮತ್ತು ತಂಡದವರು ತಡೆದು ನಿಲ್ಲಿಸಿದಾಗ ಚಾಲಕ ವಿಚಲಿತಗೊಂಡು ತಬ್ಬಿಬ್ಬು ಮಾಹಿತಿ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ವಿಶ್ವ ಹಿಂದೂ ಪರಿಷತ್, ಶ್ರೀಕೃಷ್ಣ ಗೋಶಾಲಾ ಚಾರಿಟೇಬಲ್ ಟ್ರಸ್ಟ್ ಹಾಗೂ ಬಜರಂಗದಳ ಸದಸ್ಯರು ಜಾನುವಾರು ಸಹಿತ ವಾಹನವನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದರು.ಬುಲೆರೋ ವಾಹನ ಚಾಲಕ ಸ್ಥಳೀಯ ವ್ಯಕ್ತಿಯಾಗಿದ್ದು, ದಲಿತ ಸಮುದಾಯದ ಮುಖಂಡರನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆಯಿಸಿಕೊಂಡು ಪೊಲೀಸರ ಮುಂದೆ ನನ್ನ ವಾಹನದಲ್ಲಿ ಜಾನುವಾರುಗಳನ್ನು ಸಾಗಣಿಕೆ ಮಾಡಲು ಪರವಾನಗಿಯಿದೆ, ಜಾನುವಾರುಗಳನ್ನು ಕೊಂಡು ತಂದಿದ್ದರ ಬಗ್ಗೆ ರಶೀದಿಯಿದೆ ಎಂಬಿತ್ಯಾದಿ ಸಮಜಾಯಿಸಿ ನೀಡಿದನಲ್ಲದೆ, ನಮ್ಮ ವಾಹನವನ್ನು ತಡೆದು ಕಿರಿಕಿರಿ ನೀಡುತ್ತಿದ್ದಾರೆ ಎಂದು ದೂರಿದರೆ, ಅಕ್ರಮವಾಗಿ ಜಾನುವಾರಗಳ ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಚಿತ್ರಾವತಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾದಿದ್ದ ಶ್ರೀಕೃಷ್ಣ ಗೋಶಾಲಾ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ವಾಹನ ತಡೆದು, ಪೊಲೀಸರು ಜಾನುವಾರುಗಳ ಸಾಗಾಣಿಕೆಗೆ ಬಗ್ಗೆ ಅಗತ್ಯ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬುಲೆರೋ ಚಿಕ್ಕ ವಾಹನದಲ್ಲಿ ಐದು ಹಸುಗಳನ್ನು ಸಾಗಾಣಿಕೆ ಮಾಡುತ್ತಿದ್ದು, ನಿಖರ ಮಾಹಿತಿ ನೀಡಲು ಬುಲೆರೋ ವಾಹನ ಚಾಲಕ ತಡಬಡಿಸಿದ ಎನ್ನಲಾಗಿದೆ.ವಿಶ್ವ ಹಿಂದೂ ಪರಿಷತ್, ಶ್ರೀಕೃಷ್ಣ ಗೋಶಾಲಾ ಚಾರಿಟೇಬಲ್ ಟ್ರಸ್ಟ್ ಹಾಗೂ ಬಜರಂಗದಳ ಸದಸ್ಯರು ಇದ್ದರು.