ಸಾರಾಂಶ
- ವಶಕ್ಕೆ ಪಡೆದ ಗೋವುಗಳು ಗೋಶಾಲೆಗೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ವಶಪಡಿಸಿಕೊಂಡ ಮೂರು ಗೋವುಗಳನ್ನು ಕಳಸ ಪೊಲೀಸರು ಸಮೀಪದ ದೇವಗೋಡು ಗ್ರಾಮದ ಕೆಮ್ಮಣ್ಣು ಕಾಮಧೇನು ಗೋ ಶಾಲೆಗೆ ಹಸ್ತಾಂತರಿಸಿದ್ದಾರೆ.ಪೊಲೀಸರಿಂದ ಗೋವುಗಳನ್ನು ಸ್ವೀಕರಿಸಿದ ಗೋಶಾಲೆ ಮುಖ್ಯಸ್ಥ ನಾಗೇಶ್ ಆಂಗೀರಸ ಮಾತನಾಡಿ, ಭೌಗೋಳಿಕವಾಗಿ ಹೆಚ್ಚು ವ್ಯಾಪ್ತಿ ಹೊಂದಿರುವ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಿತಿ ಮೀರಿದ ಗೋವುಗಳ ಕಳ್ಳತನ ನಡೆಯುತ್ತಿದ್ದು, ಕೆಲ ಹೀನ ಮನಸ್ಸಿನ ಹಿಂದೂಗಳು ಇದಕ್ಕೆ ಬೆಂಬಲ ನೀಡುತ್ತಿರುವುದು ವಿಷಾದನೀಯ ಎಂದರು.ಮಲೆನಾಡಿನ ಅತೀದೊಡ್ಡ ಹುಲ್ಲುಗಾವಲು ಪ್ರದೇಶವಾಗಿರುವ ಕ್ಯಾತನಮಕ್ಕಿಯಲ್ಲಿ ಮೇಯಲು ಬರುತ್ತಿದ್ದು ನೂರಾರು ಗೋವುಗಳು ಇತ್ತೀಚಿನ ದಿನಗಳಲ್ಲಿ ಗೋಕಳ್ಳರ ಪಾಲಾಗಿ ಕಣ್ಮರೆಯಾಗಿರುವುದು ಆತಂಕಕಾರಿಯಾಗಿದೆ. ಕಳ್ಳತನ ಮಾಡಿದ ಗೋವುಗಳು ಬಾಂಗ್ಲಾ, ಬೆಂಗಳೂರು, ಮಂಗಳೂರು, ಶಿಕಾರಿಪುರ ಮುಂತಾದ ಕಡೆಗಳಿಗೆ ಜೀವಂತವಾಗಿ ರವಾನೆ ಯಾಗುತ್ತಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿ ನಡೆಯುತ್ತಿದೆ. ಇದನ್ನು ತಡೆಯುವುದು ಪೊಲೀಸರಿಗೆ ಸವಾಲಿನ ಕೆಲಸ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಅಕ್ರಮ ಗೋ ಸಾಗಾಟ ತಡೆಯಲು ಸಾಕಷ್ಟು ಶ್ರಮವಹಿಸಿ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಹಿಂದೂಗಳು ಈ ಕಾರ್ಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ. ಹಿಂದೂ ಸಂಘಟನೆಗಳು ಸಹ ಇದಕ್ಕೆ ಕೈ ಜೋಡಿಸಬೇಕಿದೆ. ಹಿಂದುತ್ವದ ಜಪ ಮಾಡಿ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ಸಹ ಅಕ್ರಮ ಗೋ ಸಾಗಣೆ ವಿರೋಧಿಸಿ ಮಾತನಾಡಬೇಕಿದೆ. ಕೇವಲ ಚುನಾವಣೆ ವೇಳೆಯಲ್ಲಿ ಗೋವಿನ ಹೆಸರು ಹೇಳಿ ಮತ ಕೇಳಿ ಬಂದರೆ ಅದಕ್ಕೆ ಬೆಲೆ ದೊರೆಯುವುದಿಲ್ಲ ಎಂದು ಹೇಳಿದರು.ಪೊಲೀಸ್ ಸಿಬ್ಬಂದಿ ರಾಮಚಂದ್ರ, ರಾಘವೇಂದ್ರ, ಗೋ ಶಾಲೆಯ ಸಿಬ್ಬಂದಿ ಸತೀಶ್, ಚಂದನ್ ಗೌಡ, ಸಂಜಯ್, ಶಿವಣ್ಣ ಮತ್ತಿತರರು ಹಾಜರಿದ್ದರು.೧೬ಬಿಹೆಚ್‌ಆರ್ ೨:
ಕಳಸ ಪೊಲೀಸರು ವಶಪಡಿಸಿಕೊಂಡ ಗೋವುಗಳನ್ನು ಬಾಳೆಹೊನ್ನೂರು ಸಮೀಪದ ಕೆಮ್ಮಣ್ಣು ಕಾಮಧೇನು ಗೋ ಶಾಲೆಗೆ ಹಸ್ತಾಂತರಿಸಲಾಯಿತು. ನಾಗೇಶ್ ಆಂಗೀರಸ, ರಾಮಚಂದ್ರ, ರಾಘವೇಂದ್ರ ಹಾಜರಿದ್ದರು.