ಸಾರಾಂಶ
ಖಾಸಗಿ ಟ್ರಸ್ಟ್‌ನಿಂದ ಆರಂಭ । ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ । ವ್ಯಾಪಾರಕ್ಕೆ ಕೇಂದ್ರವಾದ ರಾಮೇಶ್ವರನ ಆಲಯ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ (ಕೆಆರ್‌ಸಿ) ರಸ್ತೆಯಲ್ಲಿರುವ ಶ್ರೀರಾಮೇಶ್ವರ ದೇವಸ್ಥಾನ ಸಾವಿರ ವರ್ಷಗಳ ಇತಿಹಾಸವಿದೆ. ಆದರೆ ಪಟ್ಟಣದ ಖಾಸಗಿ ಟ್ರಸ್ಟ್‌ವೊಂದು ದೇವಸ್ಥಾನ ಆಕ್ರಮಿಸಿಕೊಂಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಣ ಸಂಪಾದನೆ ಮಾಡುತ್ತಿದೆ. ಆದರೆ ಮುಜರಾಯಿ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.
ಪಟ್ಟಣದ ಶ್ರೀ ರಾಮೇಶ್ವರ ಸೇವಾ ಟ್ರಸ್ಟ್ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಇದು ಕಾನೂನುಬಾಹಿರ. ಆದರೂ ತಾಲೂಕು ಆಡಳಿತ ಜಾಣ ಮೌನ ವಹಿಸಿದೆ. ಇದು ಸಾರ್ವಜನಿಕರು ಹಾಗೂ ರಾಮನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.ಖಾಸಗಿ ಟ್ರಸ್ಟ್ ಮುಜರಾಯಿ ಇಲಾಖೆಗೆ ಸೇರಿದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಅಕ್ರಮವಾಗಿ ಅತಿಕ್ರಮಿಸಿ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಹಣ ಮಾಡಲು ಮುಂದಾಗಿದೆ.
ದೇವಸ್ಥಾನದ ಜಾಗದಲ್ಲಿ ಶ್ರೀರಾಮ ಸೇವಾ ಟ್ರಸ್ಟ್ ಬೋರ್‌ವೆಲ್ ಕೊರೆಸಿ, ದೇವಸ್ಥಾನದೊಳಗೆ ಶುದ್ಧ ಕುಡಿವ ನೀರನ್ನು ಮಾರಾಟ ಮಾಡಲು ಮುಂದಾಗಿ, ಖಾಸಗಿ ಟ್ರಸ್ಟ್ ದೇವಸ್ಥಾನದ ಅಭಿವೃದ್ಧಿ ಹೆಸರಲ್ಲಿ ಹಣ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನೀರಿನ ವ್ಯಾಪಾರ ಮಾಡಲು ಹೊರಟ ಖಾಸಗಿ ಟ್ರಸ್ಟ್ ಬಗ್ಗೆ ಸ್ಥಳೀಯ ತಹಸೀಲ್ದಾರ್ ಅವರ ಗಮನಕ್ಕೆ ಮೌಖಿಕವಾಗಿ ತಂದರೂ ತಹಸೀಲ್ದಾರ್ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಸದಸ್ಯರೂ ಆದ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ (ಶೈಲೇಶ್) ಕನ್ನಡಪ್ರಭದೊಂದಿಗೆ ಮಾತನಾಡಿ, ದೇವಸ್ಥಾನ ನಿರ್ವಹಣ ಸಮಿತಿ ರಚಿಸುವುದು ಜಿಲ್ಲಾಧಿಕಾರಿಗಳಿದೆ. ಆದರೆ ಖಾಸಗಿ ಟ್ರಸ್ಟ್‌ಗೆ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲು ಅವಕಾಶ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.ಒಂದು ವೇಳೆ ಮುಜರಾಯಿ ಇಲಾಖೆ ಖಾಸಗಿ ಟ್ರಸ್ಟ್‌ಗೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಅನುಮತಿ ನೀಡಿದ್ದರೆ ಕೂಡಲೇ ರದ್ದುಪಡಿಸಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ಸರ್ಕಾರದ ಆದೇಶ ಹೀಗಿದೆ!ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ನಿವೇಶನಗಳು ಹಾಗೂ ಅವಶೇಷಗಳು ಅಧಿನಿಯಮ ೧೯೬೧ರ ಕಲಂ ೩ ರಡಿ ದೇವಸ್ಥಾನವನ್ನು ಒಂದು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ. ಅದೇ ಅಧಿನಿಯಮದ ಕಲಂ ೨೬ರ ಪ್ರಕಾರ ಈ ಸಂರಕ್ಷಿತ ಸ್ಮಾರಕವನ್ನು ಯಾರಾದರೂ ನಾಶಗೊಳಿಸುವುದು, ತೆಗೆದು ಹಾಕುವುದು, ವಿರೂಪಗೊಳಿಸುವುದು, ಸ್ಥಳಾಂತರಗೊಳಿಸುವುದು, ಅತಿಕ್ರಮಿಸುವುದು, ಅಪಾಯ ತರುವುದು, ದುರುಪಯೋಗಪಡಿಸುವುದು ಅಪರಾಧ. ಈ ಕೃತ್ಯಗಳಲ್ಲಿ ತೊಡಗಿದರೆ ಮೂರು ತಿಂಗಳ ಜೈಲುಶಿಕ್ಷೆ ಅಥವಾ ೨ ಸಾವಿರ ರು. ದಂಡ ಅಥವಾ ಎರಡೂ ಶಿಕ್ಷೆಗೆ ಒಳಪಡಿಸಬಹುದು ಎಂದು ಮೈಸೂರು ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಆದೇಶಿಸಿದೆ.
ಮುಜರಾಯಿ ಇಲಾಖೆಗೆ ಸೇರಿದ ಶೀ ರಾಮೇಶ್ವರ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅನುಮತಿ ನೀಡಿಲ್ಲ. ನಾಳೆ ಖಾಸಗಿ ಟ್ರಸ್ಟ್‌ಗೆ ನೋಟಿಸ್ ನೀಡಲು ಕ್ರಮ ವಹಿಸಲಾಗುವುದು.-ಟಿ.ರಮೇಶ್ ಬಾಬು,ತಹಸೀಲ್ದಾರ್