ಸಾರಾಂಶ
ಕನ್ನಡಪ್ರಭ ವಾರ್ತೆ ಸಾಗರತಾಲ್ಲೂಕಿನ ಕಲ್ಲುಮನೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸಂತ್ರಸ್ತ ಗ್ರಾಹಕರು ಡಿಸಿಸಿ ಬ್ಯಾಂಕ್ ಉಪ ನಿಬಂಧಕರು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.ಸಭೆಯಲ್ಲಿ, ನಾಲ್ಕು ತಿಂಗಳಿನಿಂದ ನಾಪತ್ತೆಯಾಗಿರುವ ಸಂಘದ ಸಿಇಓ ಮೇಘರಾಜ್ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಶಿಕ್ಷೆ ಆಗಬೇಕು. ಪಿಗ್ಮಿ ಕಟ್ಟಿದವರು, ಠೇವಣಿ ಇಟ್ಟವರು, ಲೆಡ್ಜರ್‌ನಲ್ಲಿ ಹೆಚ್ಚುವರಿ ಸಾಲ ಪಡೆದಿರುವುದಾಗಿ ನಮೂದಾಗಿರುವವರಿಗೆ ಅವರ ಹಣ ವಾಪಾಸ್ ಕೊಡಿಸುವ ಕೆಲಸವಾಗಬೇಕು ಎಂದು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಒತ್ತಾಯಿಸಿದರು.ಅವ್ಯವಹಾರ ನಡೆದಿರುವ ಬಗ್ಗೆ ಸಂಘದ ನಿರ್ದೇಶಕರ ಕಡೆಯಿಂದ ದೂರು ನೀಡಲಾಗುತ್ತಿದೆ. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿ ಎಷ್ಟು ಹಣ ಹೋಗಿದೆಯೋ, ಅಷ್ಟನ್ನೂ ಕಾಲ ಮಿತಿಯಲ್ಲಿ ಕೊಡಿಸುವ ಕೆಲಸವಾಗಬೇಕು. ಕಷ್ಟಕಾಲಕ್ಕೆ ಬೇಕೆಂದು ಕೂಲಿ ಮಾಡಿ ಕಟ್ಟಿದ್ದ ಪಿಗ್ಮಿ ಹಣ ಲೂಟಿ ಹೊಡೆದವರಿಂದ ವಸೂಲಿ ಮಾಡಿ ಬಡವರಿಗೆ ಕೊಡಿಸಬೇಕು. ಜನರು ಕಷ್ಟಪಡುತ್ತಿದ್ದು ಮೂರ್ನಾಲ್ಕು ತಿಂಗಳು ಕಳೆದಿದ್ದರೂ ಈ ಭಾಗದ ಡಿಸಿಸಿ ಬ್ಯಾಂಕ್ ನಿರ್ದೇಶಕರು, ಅಧ್ಯಕ್ಷರು ಸೌಜನ್ಯಕ್ಕೂ ಏನಾಗಿದೆ ಎಂದು ಕೇಳಲು ಬಂದಿಲ್ಲ. ಕೂಡಲೇ ಡಿಸಿಸಿ ಬ್ಯಾಂಕ್ ಮೂಲಕ ಜನರ ಹಣ ಭರಿಸಿ ಅಧ್ಯಕ್ಷರು, ನಿರ್ದೇಶಕರು ಜನರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಉಪ ವಿಭಾಗಾಧಿಕಾರಿ ಯತೀಶ್ ಮಾತನಾಡಿ, ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ. ಆದರೆ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎನ್ನುವ ಕಾರಣಕ್ಕೆ ಸೊಸೈಟಿ ಎದುರು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸುತ್ತಿದ್ದಾಗ ಸ್ಥಳಕ್ಕೆ ಹೋಗಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಕಚೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿಗಳು ಹಾಗೂ ಸೊಸೈಟಿ ಗ್ರಾಹಕರ ಸಭೆ ಕರೆದು ಸಮಾಲೋಚನೆ ನಡೆಸಲಾಗಿದೆ. ಸಹಕಾರ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸೊಸೈಟಿ ಕಾರ್ಯದರ್ಶಿ ನಾಪತ್ತೆಯಾಗಿದ್ದು, ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಪೊಲೀಸ್ ತನಿಖೆ ಜೊತೆಗೆ ಇಲಾಖೆ ತನಿಖೆ ನಡೆಯಲಿದೆ. ಜನರು ಕಟ್ಟಿರುವ ಹಣ ವಾಪಾಸ್ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ಸಭೆಯಲ್ಲಿ ಡಿಆರ್ ನಾಗಭೂಷಣ್, ಸೊಸೈಟಿ ನಿರ್ದೇಶಕರಾದ ಮಜ್ಜಿಗೆರೆ ನಾಗರಾಜ್, ನಾಗೇಶ್, ಕಲ್ಮನೆ ಪಂಚಾಯತ್ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರಮುಖರಾದ ಸುರೇಶ್ ಗೌಡ, ಅಕ್ಷರ ಚಿಪ್ಳಿ, ಬೇದೂರು ಗಿರಿ, ಸಮರ್ಥ ಚಿಪ್ಳಿ, ಮಾವಿನಕುಳಿ ಜಯಪ್ರಕಾಶ್, ಉದಯ ಕುಮಾರ್ ಬೇದೂರು ಸೇರಿದಂತೆ ನೂರಾರು ಸಂತ್ರಸ್ತರು ಹಾಜರಿದ್ದರು..