ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ರಕ್ತಹೀನತೆಯಿಂದ ಬಳಲುತ್ತಿರುವ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಆಯುರ್ವೇದ ಔಷಧಗಳನ್ನು ಒಳಗೊಂಡ ‘ನ್ಯೂಟ್ರಿಷನ್ ಕಿಟ್’ ನೀಡುವಲ್ಲಿ ₹75 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.ಪ್ರಶ್ನೋತ್ತರ ವೇಳೆ ಕಿಟ್‌ನಲ್ಲಿ ಒಳಗೊಂಡ ಔಷಧಗಳನ್ನು ಸದನದಲ್ಲಿ ಪ್ರದರ್ಶಿಸಿ, ಕಿಟ್‌ಒಳಗೊಂಡಿರುವ ವಿವಿಧ ಔಷಧ, ಮಾತ್ರೆಗಳು ಮಾರುಕಟ್ಟೆಯಲ್ಲಿ ಸುಮಾರು ₹953 ಆಗುತ್ತದೆ, ಆದರೆ ಸರ್ಕಾರ ಕಿಟ್‌ಗೆ ₹2600 ನಂತೆ ಬಿಲ್‌ನಲ್ಲಿ ತೋರಿಸಲಾಗಿದೆ. ಇದರಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ಹಾಗಾಗಿ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಿಟ್‌ನಲ್ಲಿ ನೀಡಿರುವ ಔಷಧಗಳು ಹೋಲ್ ಸೇಲ್ ದರದಲ್ಲಿ ₹600-900ಕ್ಕೆ ಸಿಗುತ್ತದೆ. ಆದರೆ ಟೆಂಡರ್ ಪಡೆದಿರುವವರು ₹2600 ನಿಗದಿಗೊಳಿಸಿ ಬಿಲ್ ಮಾಡಿದ್ದಾರೆ. ಅಷ್ಟೇ ಅಲ್ಲ, ಟೆಂಡರ್ ಅನ್ನು ಒಬ್ಬರೇ ನೀಡಿರುವಾಗ ಪ್ರತಿ ಜಿಲ್ಲೆಗೆ ಟೆಂಡರ್ ಅನ್ನು ಯಾಕೆ ವಿಭಜಿಸಿದ್ದೀರಿ? ಒಂದೇ ಕಂಪನಿಗೆ ಟೆಂಡರ್ ಕೊಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಬ್ಲಾಸಮ್ ಎಂಬ ಕಂಪನಿಗೆ ಟೆಂಡರ್ ಕೊಡಬೇಕು ಎಂಬ ಕಾರಣಕ್ಕೆ ಈ ರೀತಿ ಟೆಂಡರ್ ವಿಭಜನೆ ಮಾಡಲಾಗಿದೆ ಎಂದು ಆಪಾದಿಸಿದರು.ಸರ್ಕಾರ ಕಿಟ್‌ನಲ್ಲಿ ನೀಡಿರುವ ಮಹಾನಾರಾಯಣ ತೈಲವು ಮಾರುಕಟ್ಟೆಯಲ್ಲಿ ₹210, ಚವನಪ್ರಾಶ್ ₹500, ಧಾತ್ರಿ ಲೋಹ ₹130 ಆರೋಗ್ಯವರ್ಧಿನಿ ₹120ಕ್ಕೆ ಸಿಗುತ್ತದೆ ಎಂದು ಸದನದಲ್ಲಿ ಔಷಧಗಳನ್ನು ಪ್ರದರ್ಶಿಸಿದ ರವಿಕುಮಾರ್, ಕಾರ್ಮಿಕರಿಗೆ ರಕ್ತ ಹೀನತೆ ಇರುವ ಬಗ್ಗೆ ಯಾವ ವಿಧಾನ, ಯಾವ ವೈದ್ಯರು ಪರೀಕ್ಷೆ ನಡೆಸಿದ್ದಾರೆ ಎಂಬುದು ಸಾಕಷ್ಟು ಅನುಮಾನ ಮೂಡಿಸಿದೆ ಎಂದರು.
ರವಿಕುಮಾರ್ ಅವರ ಮಾತಿಗೆ ಪೂರಕವಾಗಿ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಈ ಬಗ್ಗೆ ತನಿಖೆ ಮಾಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.ಭ್ರಷ್ಟಾಚಾರ ನಡೆದಿಲ್ಲ-ಸಂತೋಷ್ ಲಾಡ್: ಎನ್. ರವಿಕುಮಾರ್ ಅವರ ಆರೋಪವನ್ನು ತಳ್ಳಿ ಹಾಕಿದ ಕಾರ್ಮಿಕಸಚಿವ ಸಂತೋಷ್ ಲಾಡ್, ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ನ್ಯೂಟ್ರಿಷನ್ ಕಿಟ್ ನೀಡಲು ತೀರ್ಮಾನಿಸಲಾಗಿದೆ. ಕೆಟಿಟಿಪಿ ಕಾಯ್ದೆ ಪ್ರಕಾರ ಟೆಂಡರ್ ಕರೆದು ನೀಡಲಾಗಿದೆ. 2023-24ನೇ ಸಾಲಿನಲ್ಲಿ 12.39 ಲಕ್ಷ ಕಾರ್ಮಿಕರ ತಪಾಸಣೆ ನಡೆಸಿದ ವೇಳೆ ಶೇ. 16.6ರಷ್ಟು ಕಾರ್ಮಿಕರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡು ಬಂತು ಎಂದರು.
ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಹೇಳಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು.