ಅಕ್ರಮ ಮೇಲ್ನೋಟಕ್ಕೆ ಸಾಬೀತು: ಇಬ್ಬರು ಆಹಾರ ನಿರೀಕ್ಷಕರು ಸಸ್ಪೆಂಡ್

| Published : Jan 24 2024, 02:00 AM IST

ಅಕ್ರಮ ಮೇಲ್ನೋಟಕ್ಕೆ ಸಾಬೀತು: ಇಬ್ಬರು ಆಹಾರ ನಿರೀಕ್ಷಕರು ಸಸ್ಪೆಂಡ್
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಹುಕ್ಕೇರಿ ಆಹಾರ ಇಲಾಖೆಯ ಇಬ್ಬರು ಆಹಾರ ನಿರೀಕ್ಷಕರನ್ನು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಅಮಾನತು ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಹುಕ್ಕೇರಿ ಆಹಾರ ಇಲಾಖೆಯ ಇಬ್ಬರು ಆಹಾರ ನಿರೀಕ್ಷಕರನ್ನು ಅಮಾನತು ಮಾಡಲಾಗಿದೆ. ಹುಕ್ಕೇರಿ ಆಹಾರ ನಿರೀಕ್ಷಕ ವೀರಭದ್ರ ಶೇಬನ್ನವರ, ಯಮಕನಮರಡಿ ಆಹಾರ ನಿರೀಕ್ಷಕ ಇರ್ಫಾನ್‌ ಉಸ್ತಾದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಇವರಿಬ್ಬರು ಅಧಿಕಾರ ದುರುಪಯೋಗ ಮಾಡಿಕೊಂಡು ಅನರ್ಹರಿಗೆ ಪಡಿತರ ಚೀಟಿ ಹಂಚಿಕೆ ಮಾಡಿರುವ ಅಕ್ರಮ ಪ್ರಕರಣ ಕುರಿತು ಕನ್ನಡಪ್ರಭ ಡಿ.18 ರಂದು ಹುಕ್ಕೇರಿ ಆಹಾರ ಇಲಾಖೆಯಲ್ಲಿ ಅಕ್ರಮ ವಾಸನೆ, ಜ.11ರಂದು ಅವ್ಯವಸ್ಥೆಯ ಆಗರ ಹುಕ್ಕೇರಿ ಆಹಾರ ಇಲಾಖೆ ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು.

ಅಷ್ಟೇ ಅಲ್ಲದೇ, ನಿಯಮ ಉಲ್ಲಂಘಿಸಿ ರೇಶನ್ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ಸಚಿವ ಕೆ.ಎಚ್.ಮುನಿಯಪ್ಪ ಅವರು ಬೆಳಗಾವಿ ಚಳಿಗಾಲ ಅಧಿವೇಶನ ವೇಳೆ ತಾಲೂಕಿಗೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದರು.

ತಾಲೂಕಿನಲ್ಲಿ ಹೊಸದಾಗಿ ಹಂಚಿಕೆಯಾದ ಬಿಪಿಎಲ್ (ಆದ್ಯತಾ) ಪಡಿತರ ಚೀಟಿಗಳ ಹಂಚಿಕೆಯಲ್ಲಿ ಅಕ್ರಮ ನಡೆಸಿದ್ದಲ್ಲದೇ ಗ್ರಾಮ ಒನ್ ಹಾಗೂ ಖಾಸಗಿ ಸೇವಾ ಕೇಂದ್ರಗಳ ಡೇಟಾ ಎಂಟ್ರಿ ಆಪರೇಟರ್‌ಗಳ ಮೂಲಕ ಹಣ ಪಡೆದು ಅನರ್ಹರಿಗೆ ರೇಶನ್ ಕಾರ್ಡ್‌ಗಳನ್ನು ಮಂಜೂರು ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಅಕ್ರಮ ತನಿಖೆಗೆ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡದ ವರದಿ ಆಧರಿಸಿ ಇಬ್ಬರು ಅಧಿಕಾರಿಗಳನ್ನು ಇಲಾಖೆ ವಿಚಾರಣೆ ಬಾಕಿ ಇಟ್ಟು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಅಧಿಕಾರ ವ್ಯಾಪ್ತಿ ಮೀರಿದ ಆರೋಪಕ್ಕೆ ಗುರಿಯಾಗಿರುವ ಇರ್ಫಾನ್‌ ಉಸ್ತಾದ ಅವರು ಯಮಕನಮರಡಿ ಮತ ಕ್ಷೇತ್ರದ 148 ಪಡಿತರ ಚೀಟಿ ಹಾಗೂ ಹುಕ್ಕೇರಿ ಕ್ಷೇತ್ರದ 24 ಪಡಿತರ ಚೀಟಿಗಳನ್ನು ಅನುಮೋದನೆ ನೀಡಿದ್ದಾರೆ. ವೀರಭದ್ರ ಶೇಬನ್ನವರ ಅವರು ಹುಕ್ಕೇರಿ ಕ್ಷೇತ್ರದ 519 ಪಡಿತರ ಚೀಟಿ ಹಾಗೂ ಯಮಕನಮರಡಿ ಕ್ಷೇತ್ರದ 299 ಪಡಿತರ ಚೀಟಿಗಳನ್ನು ಯಾವುದೇ ದಾಖಲೆಗಳನ್ನು ಅರ್ಜಿದಾರರಿಂದ ಪಡೆಯದೇ, ಸ್ಥಳ ತನಿಖೆ ಮಾಡದೇ, ಅಕ್ರಮವಾಗಿ ಹಣ ಪಡೆದು ಅನುಮೋದನೆ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಹುಕ್ಕೇರಿ ತಹಸೀಲ್ದಾರರು ಸಲ್ಲಿಸಿದ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಇಬ್ಬರು ಆಹಾರ ನಿರೀಕ್ಷಕರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.