ಸಾರಾಂಶ
ಬೆಂಗಳೂರಿನಲ್ಲಿ ಕಾವೇರಿ ನೀರು ಅಕ್ರಮ ಸಂಪರ್ಕ ಕಡಿತ ಮಾಡಲು ಅಧಿಕಾರಿಗಳಿಗೆ ಮಾರ್ಚ್ 31ರ ಗಡುವು ನೀಡಿ ಜಲ ಮಂಡಳಿ ಆದೇಶ ಹೊರಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಕಾವೇರಿ ನೀರು ಅಕ್ರಮ ಸಂಪರ್ಕ ಹಾಗೂ ಮಳೆ ನೀರನ್ನು ಜಲಮಂಡಳಿಯ ಸ್ಯಾನಿಟರಿ ಕೊಳವೆಗೆ ಹರಿಸುತ್ತಿರುವುದನ್ನು ಗುರುತಿಸಿ ಮಾ.31ರೊಳಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ವಾಣಿಜ್ಯ ಕಟ್ಟಡ, ಬಹುಮಹಡಿ ವಸತಿ ಕಟ್ಟಡ ಮತ್ತು ಕೈಗಾರಿಕಾ ಕಟ್ಟಡಗಳಲ್ಲಿ ಅಕ್ರಮವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದವರ ಸರ್ವೇ ಮಾಡಿ ಅನಧಿಕೃತ ಮತ್ತು ಬೈಪಾಸ್ ನೀರಿನ ಸಂಪರ್ಕಗಳು ಕಂಡು ಬಂದಲ್ಲಿ ಕ್ರಮಕೈಗೊಳ್ಳಬೇಕು. ಜತೆಗೆ, ಮಳೆಗಾಲದಲ್ಲಿ ಕಟ್ಟಡಗಳಿಂದ ಒಳಚರಂಡಿ ವ್ಯವಸ್ಥೆಗೆ ಮಳೆ ನೀರು ಹರಿಸುತ್ತಿರುವುದರಿಂದ ಮೆಷಿನ್ ಹೋಲ್ (ಮ್ಯಾನ್ ಹೋಲ್) ಮುಖಾಂತರ ಉಕ್ಕುವುದು ಮತ್ತು ಒಳಚರಂಡಿ ಕೊಳವೆ ಮಾರ್ಗದಲ್ಲಿ ಒತ್ತಡ ಹಾಗೂ ಒಳಚರಂಡಿ ವ್ಯವಸ್ಥೆ ಹಾನಿಯಾಗುತ್ತಿದೆ. ಇದನ್ನು ತಡೆಗಟ್ಟಲು ಮನೆಗಳಿಂದ ಒಳಚರಂಡಿ ವ್ಯವಸ್ಥೆ ಮಳೆ ನೀರು ಸಂಪರ್ಕ ನೀಡಿರುವುದನ್ನು ಮಾ.31ರ ಒಳಗಾಗಿ ಕಡಿತಗೊಳಿಸಬೇಕು.
ಈ ಕುರಿತು ವಲಯ ಮುಖ್ಯ ಎಂಜಿನಿಯರ್ ವರದಿ ನೀಡಬೇಕು. ಏ.1ರಿಂದ ಆಂತರಿಕ ಆಡಿಟ್ ತಂಡ ಹಾಗೂ ಸಂಬಂಧಪಟ್ಟ ವಿಜಿಲನ್ಸ್ ತಂಡದಿಂದ ಮರು ಪರಿಶೀಲನೆ ಆರಂಭಿಸಲಾಗುವುದು. ನ್ಯೂನ್ಯತೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಉಂಟಾಗಿರುವ ಆರ್ಥಿಕ ನಷ್ಟವನ್ನು ಅಧಿಕಾರಿಗಳಿಂದ ವಸೂಲಿ ಮಾಡಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ। ರಾಮ ಪ್ರಸಾತ್ ಮನೋಹರ್ ಜಲಮಂಡಳಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಆದೇಶಿಸಿದ್ದಾರೆ.