ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ: ಕೋಲ್ಕತ್ತಾದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಅಥಣಿಯಲ್ಲಿ ಐಎಂಎ ನಿಂದ ಮೊಂಬತ್ತಿಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.ಪಟ್ಟಣದ ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ವಿದ್ಯಾರ್ಥಿನಿಯನ್ನು ತ್ಯಾಚಾರ ಮಾಡಿ ಕೊಲೆಗೈದಿದ್ದು ಅವಮಾನವೀಯ ಘಟನೆ. ಈ ದುಷ್ಕರ್ತ್ಯವನ್ನು ಅಥಣಿಯ ಎಲ್ಲಾ ವೈದ್ಯರು ಮತ್ತು ಐಎಂಎ ಖಂಡಿಸುತ್ತೇವೆ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ದೇಶದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.ಅಥಣಿ ಐಎಂಎ ಅಧ್ಯಕ್ಷೆ ಡಾ.ಸ್ಮಿತಾ ಚೌಗಲಾ ಮಾತನಾಡಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಕೃತ್ಯ ಖಂಡಿಸಿ ದೇಶಾದ್ಯಂತ ಐಎಂಎ ಮುಷ್ಕರ ಹಮ್ಮಿಕೊಂಡಿದ್ದು, ಎಲ್ಲ ವೈದ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿ ಆಸ್ಪತ್ರೆಗಳನ್ನ ಬಂದ್ ಮಾಡಲಾಗಿದೆ. ತುರ್ತು ಸೇವೆಗಳು ಮಾತ್ರ ಲಭ್ಯವಿರುತ್ತದೆ ಎಂದು ಹೇಳಿದರು.ಪಟ್ಟಣದ ಬುಧವಾರ ಪೇಟೆಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ವೈದ್ಯರು ಮತ್ತು ನರ್ಸಿಂಗ್ ವಿದ್ಯಾರ್ಥಿನಿಯರು ಕೈಯಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.