ಸಾರಾಂಶ
ಎಸ್ಎಂವಿಐಟಿಯ ಪ್ರಥಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶ್ರೀಗಳ ಮಾರ್ಗದರ್ಶನಕನ್ನಡಪ್ರಭ ವಾರ್ತೆ ಕಾಪು
ವಿದ್ಯಾರ್ಥಿ ದಿಸೆಯಿಂದಲೇ ಜೀವನದಲ್ಲಿ ಒಂದು ಗುರಿಯನ್ನು ಬೆಳೆಸಿಕೊಳ್ಳಬೇಕು. ಈ ಹಂತ ವಿದ್ಯಾರ್ಥಿಗಳ ಬದುಕಿನ ಮಹತ್ವದ ಘಟ್ಟ. ಸ್ಪರ್ಧಾತ್ಮಕ ಯುಗದಲ್ಲಿ ಇದ್ದೀರಿ. ನಾವೇನು ಮಾಡಬೇಕು ಎನ್ನುವ ಚಿತ್ರಣ ನಮ್ಮಲ್ಲಿರಬೇಕು. ಸಾಮಾಜಿತ ಜಾಲತಾಣಗಳ ಅನುಕರಣೆ ಬಹಳ ಅಪಾಯಕಾರಿ, ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿ ಅನುಕರಣೆ ಅಲ್ಲ, ಅನುಸರಣೆ ಮುಖ್ಯ ಎಂದು ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.ಅವರು ಭಾನುವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಎಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ‘ಮಾರ್ಗದರ್ಶನ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಲೀಪ್ ಫ್ರಾಗ್ ಎಂಜಿನಿಯರಿಂಗ್ ಸರ್ವಿಸಸ್‌ನ ಮುಖ್ಯಸ್ಥ ಪ್ರಭವ್ ಎನ್. ರಾವ್ ಮಾತನಾಡಿ, ತಮ್ಮ ಯಶಸ್ವಿ ಉದ್ಯಮಶೀಲತೆಯ ಪ್ರಯಾಣದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಯಾಗಲು ಶ್ರಮಿಸುವಂತೆ ಕರೆ ನೀಡಿದರು.ಸೋದೆ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಪಿ. ಶ್ರೀನಿವಾಸ ತಂತ್ರಿ, ಸಂಸ್ಥೆಯ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ಮತ್ತು ಆಡಳಿತ ಮಂಡಳಿ ಸದಸ್ಯ ಹರೀಶ್ ಬೆಳ್ಮಣ್ ವೇದಿಕೆಯಲ್ಲಿದ್ದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ರಾಧಾಕೃಷ್ಣ ಎಸ್. ಐತಾಳ್ ಸಂಸ್ಥೆಯ ಬೆಳವಣಿಗೆಯ ಹಿನ್ನೆಲೆ ವಿವರಿಸಿದರು. ಡೀನ್ ಡಾ. ನಾಗರಾಜ್ ಭಟ್ ಕಾಲೇಜಿನಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ಶೈಕ್ಷಣಿಕ ಪಠ್ಯಕ್ರಮದ ಮಾರ್ಗಸೂಚಿಯ ಬಗ್ಗೆ ತಿಳಿಸಿದರು.ಈ ಸಂದರ್ಭ ಸಿಇಟಿಯಲ್ಲಿ ಉತ್ತಮ ರ್‍ಯಾಂಕ್ ಪಡೆದ ವಿದ್ಯಾಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಬ್ಬುಲಕ್ಷ್ಮೀ ಎನ್. ಕಾರಂತ್ ಸ್ವಾಗತಿಸಿದರು. ಪ್ರಥಮ ವರ್ಷದ ಬಿಇ ಕೋರ್ಸ್‌ನ ಸಂಯೋಜಕಿ ಡಾ. ಲೊಲಿಟ ಪ್ರಿಯ ಕ್ಯಾಸ್ತಲಿನೊ ವಂದಿಸಿದರು. ಪ್ರಾಧ್ಯಾಪಕರಾದ ಕಾರ್ತಿಕ್ ಮತ್ತು ಆಶ್ರಿತಾ ನಿರೂಪಿಸಿದರು.