ಕಾರಟಗಿ: ರಾಜ್ಯದಲ್ಲಿನ ವಿದ್ಯುತ್ ಪ್ರಸರಣವನ್ನು ಟಾಟಾ ಕಂಪನಿಗೆ ವಹಿಸುವ ಕೇಂದ್ರ ಸರ್ಕಾರದ ನಿರ್ಧಾರ ಕೈಬಿಡಬೇಕು ಮತ್ತು ರೈತರಿಗೆ ರಸಗೊಬ್ಬರ ವಿತರಣೆಗೆ ಜಾರಿಗೆ ತಂದ ಎಫ್‌ಐಡಿ ಪದ್ಧತಿ ಈ ಕೂಡಲೇ ರದ್ದುಗೊಳಿಸಿ ಮುಂಗಾರು ಹಂಗಾಮಿಗೆ ಎಲ್ಲ ವರ್ಗದ ರೈತರಿಗೆ ನೇರವಾಗಿ ರಸಗೊಬ್ಬರ ಸಕಾಲಕ್ಕೆ ವಿತರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ರೈತ ಸಂಘದ ಕಾರ್ಯಕರ್ತರು ಇಲ್ಲಿನ ನವಲಿ ವೃತ್ತದಲ್ಲಿ ಸೇರಿ ಆರ್.ಜಿ. ರಸ್ತೆಯ ಮೇಲೆ ಅರ್ಥ ಗಂಟೆಗೂ ಹೆಚ್ಚು ಕಾಲ ಧರಣಿ ಕುಳಿತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಇನ್ನುವರೆಗೂ ಕೃಷಿ ಇಲಾಖೆ ಸೂಕ್ತವಾಗಿ ರಸಗೊಬ್ಬರ ವಿತರಣೆ ಮಾಡಿಲ್ಲ. ಮುಖ್ಯವಾಗಿ ಗಂಗಾವತಿ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಸುಮಾರು ೩೯ಕ್ಕೂ ಹೆಚ್ಚು ರೈತ ಸೇವಾ ಸಹಕಾರಿ ಸಂಘಗಳಿದ್ದು, ಇಲ್ಲಿಗೆ ರಸಗೊಬ್ಬರ ಕೃಷಿ ಇಲಾಖೆ ಪೂರೈಕೆ ಮಾಡಿಲ್ಲ. ರೈತ ಸಂಘಗಳಿಗೆ ನೇರವಾಗಿ ರಸಗೊಬ್ಬರ ಪೂರೈಸಿದರೆ ಗ್ರಾಮೀಣ ಪ್ರದೇಶದ ಎಲ್ಲ ರೈತರು ನೇರವಾಗಿ ತಲುಪಲಿದೆ. ಆದರೆ, ರೈತ ಸೇವಾ ಸಹಕಾರಿ ಸಂಘಗಳಿಗೆ ಬಿಟ್ಟು ಖಾಸಗಿ ರಸಗೊಬ್ಬರ ಮಾರಾಟಗಾರರಿಗೆ ಕೃಷಿ ಇಲಾಖೆ ರಸಗೊಬ್ಬರ ಪೂರೈಕೆ ಮಾಡಿದೆ. ಇದರಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಮತ್ತು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಡುವ ವ್ಯವಸ್ಥಿತ ಹುನ್ನಾರವಾಗಿದೆ ಎಂದು ರೈತರು ಕೃಷಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಕೃಷಿ ಇಲಾಖೆ ಎಫ್‌ಐಡಿ ಪದ್ಧತಿ ಜಾರಿಗೆ ತಂದಿದೆ. ಇದರಿಂದ ಎಲ್ಲ ರೈತ ವರ್ಗದವರಿಗೆ ರಸಗೊಬ್ಬರ ಸಿಗುವುದು ತೊಂದರೆಯಾಗುತ್ತಿದೆ. ಕೃಷಿ ಚಟುವಟಿಕೆ ನಡೆಸಲು ರೈತರು ಆತಂಕ ಪಡುತ್ತಿದ್ದಾರೆ, ಈ ಹೊಸ ನೀತಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಭೂಮಿ ಇದ್ದವರು ಮಾತ್ರ ದಾಖಲೆ ತೋರಿಸಿ ರಸಗೊಬ್ಬರ ಪಡೆಯುವ ಪದ್ಧತಿ ಮೊದಲು ಕೈ ಬಿಡಬೇಕು. ನೀರಾವರಿ ಪ್ರದೇಶದಲ್ಲಿ ಭೂ ಮಾಲಿಕರ ಹೆಚ್ಚಾಗಿ ತಮ್ಮ ಜಮೀನನ್ನು ಉಳಿಮೆ ಮಾಡಲು ಗುತ್ತಿಗೆ ನೀಡುವ ವಾಡಿಕೆ ಹೆಚ್ಚು. ಹೀಗಾಗಿ ಇಲ್ಲಿ ಗುತ್ತಿಗೆ ಆಧಾರಿತ ರೈತ ವರ್ಗವೇ ಹೆಚ್ಚಿದೆ. ಪ್ರತಿ ಹಂತದಲ್ಲಿ ರಸಗೊಬ್ಬರ ಖರೀದಿಸಲು ಭೂ ಮಾಲಿಕರೇ ಬರುವುದು ಅಸಾಧ್ಯದ ಮಾತು. ಇದು ಗುತ್ತಿಗೆ ಕೃಷಿ ನಡೆಸುವ ರೈತರಿಗೂ ಕಿರಿಕಿರಿ ಹೀಗಾಗಿ ಮೊದಲು ಎಫ್‌ಐಡಿ ಪದ್ಧತಿ ರದ್ದು ಪಡಿಸಿ ಎಂದು ಆಗ್ರಹಿಸಿದರು.ವಿಜಯನಗರ ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಹುಲುಗಪ್ಪ ಮತ್ತು ಪಂಪಣ್ಣ ನಾಯಕ ಹುಲಿಹೈದರ್ ಮತ್ತು ಸುರೇಶ ಚಳ್ಳೂರು ಮಾತನಾಡಿ, ವಿದ್ಯುತ್ ಪ್ರಸರಣ ಕಂಪನಿ ಖಾಸಗಿಯವರಿಗೆ ವಹಿಸುವ ಹುನ್ನಾರಕ್ಕೆ ರೈತರ ವಿರೋಧವಿದೆ. ರಾಜ್ಯದಲ್ಲಿ ರೈತರ ಪಂಪ್‌ಸೆಟ್ ಹಾಗೂ ಜನಸಾಮಾನ್ಯರಿಗೆ ಭಾಗ್ಯಜ್ಯೋತಿ, ಕುಟಿರ ಜ್ಯೋತಿ ಸೇರಿ ವಿವಿಧ ಯೋಜನೆಗಳಡಿಯಲ್ಲಿ ಉಚಿತವಾಗಿ ವಿದ್ಯುತ್ ಪೂರೈಕೆಯಾಗುತ್ತಿದೆ. ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ ಮೂಲ ಸೌಲಭ್ಯ ಕಿತ್ತಿ ಹಾಕುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಡೆಯನ್ನು ರೈತರು ಖಂಡಿಸುವುದಾಗಿ ರೈತರು ಹೇಳಿದರು.
ಪ್ರಧಾನ ಮಂತ್ರಿಗಳಿಗೆ ಬರೆದ ತಮ್ಮ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನಾರಾಯಣ ಈಡಿಗೇರ್, ಫಾಲಾಕ್ಷಗೌಡ ಯರಡೋಣಿ, ಮೋಹನ್ ಕುರಿ, ಕೆ.ಅಂಬಣ್ಣ, ಬಿ. ನಾಗರಾಜ, ಸಿದ್ದರಾಮಪ್ಪ ರ‍್ಯಾವಳದ, ದೊಡ್ಡನಗೌಡ ಶಿವಪೂಜಿ, ಕನಕಪ್ಪ ನಾಯಕ, ಹುಲಗಪ್ಪ ಕಾಮಲಾಪೂರ, ಅಕ್ಕಮಹಾದೇವಿ, ನಾಗರಾಜ ಕಾಮಲಾಪೂರ, ರೆಡ್ಡಪ್ಪ ಯರಡೋಣಿ ಸೇರಿದಂತೆ ಇನ್ನಿತರರು ಇದ್ದರು.