ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಒಣಗುತ್ತಿರುವ ಕಬ್ಬು ಬೆಳೆಯನ್ನು ರಕ್ಷಣೆ ಮಾಡಲು ತತ್‌ಕ್ಷಣವೇ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ ನೀರು ಹರಿಸುವಂತೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ, ನೆಲಮನೆ, ಕೊತ್ತತ್ತಿ, ಕೊತ್ತತ್ತಿ-2 ಪ್ರದೇಶದಲ್ಲಿ ಬೆಳೆದಿರುವ ಕಬ್ಬು ನೀರಿಲ್ಲದೆ ಒಣಗುತ್ತಿದೆ. ಆ ಭಾಗದ ರೈತರು ಬೆಳೆ ಒಣಗುತ್ತಿರುವುದನ್ನು ಕಂಡು ಕಣ್ಣೀರಿಡುತ್ತಿದ್ದಾರೆ. ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಕನಿಷ್ಠ ಮಾನವೀಯತೆಯೂ ಇಲ್ಲ. ಗುತ್ತಿಗೆದಾರರೊಬ್ಬರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ನೀರು ಕೊಡದೆ ವಿಳಂಬ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮೇ ತಿಂಗಳಲ್ಲಿ ನೀರು ನಿಲ್ಲಿಸಿದ ಬಳಿಕ ಇದುವರೆಗೂ ನೀರು ಕೊಡಲಿಲ್ಲ. ಅಣೆಕಟ್ಟೆಗೆ ನೀರು ಬಂದರೂ ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋದರೂ ಕೃಷಿ ಸಚಿವರು ರೈತರ ಬೆಳೆಗಳಿಗೆ ನೀರು ಕೊಡುವ ಉದಾರತೆ ಪ್ರದರ್ಶಿಸಲಿಲ್ಲ. ನೀರನ್ನೇ ಹರಿಸದಿದ್ದ ಮೇಲೆ ಜೂನ್ ತಿಂಗಳಲ್ಲಿ ಅಣೆಕಟ್ಟು ಭರ್ತಿಯಾಗುವುದರಲ್ಲಿ ವಿಶೇಷವೇನೂ ಇಲ್ಲ. ಅಣೆಕಟ್ಟು ತುಂಬಿದ್ದನ್ನೇ ದಾಖಲೆ ಮಾಡಿಕೊಳ್ಳುವ ಸಲುವಾಗಿ ರೈತರ ಬದುಕಿಗೆ ಬೆಂಕಿ ಇಟ್ಟಿರಾ ಎಂದು ಖಾರವಾಗಿ ಪ್ರಶ್ನಿಸಿದರು.ಅಣೆಕಟ್ಟೆಗೆ ಸಾಕಷ್ಟು ನೀರು ಹರಿದು ಬರುತ್ತಿದ್ದ ಸಮಯದಲ್ಲೇ ನಾಲೆಗಳಿಗೆ ನೀರನ್ನು ಹರಿಸಿದ್ದರೆ ಭತ್ತ ಬೆಳೆದವರು ಉಳಿದು ಕೊಳ್ಳುತ್ತಿದ್ದರು. ನೀರಿನ ಕೊರತೆಯಿಂದ ಶೇ.30ರಷ್ಟು ಭತ್ತದ ಬೆಳೆಯ ಇಳುವರಿ ಕುಸಿತಗೊಂಡಿದೆ. ಕಬ್ಬು ಬೆಳೆ ಒಣಗುತ್ತಾ ಅದರ ಇಳುವರಿಯೂ ಕುಂಠಿತವಾಗಿದೆ. ರೈತರ ಬದುಕನ್ನು ಸಮಾಧಿ ಮಾಡಿ ಅದರ ಮೇಲೆ ಜೂನ್ ತಿಂಗಳಲ್ಲಿ ಕೆಆರ್‌ಎಸ್ ತುಂಬಿದ ಸಂಭ್ರಮದ ಸ್ಮಾರಕ ನಿರ್ಮಾಣ ಮಾಡಲು ಹೊರಟಿರುವ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಟೀಕಿಸಿದರು.
ನಾಲೆ ಆಧುನೀಕರಣದ ನೆಪವೊಡ್ಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದಕ್ಕೆ ನೀರು ಹರಿಸುವುದಕ್ಕೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕಾವೇರಿಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗಳು ಬಂದ ಸಮಯದಲ್ಲಿ ಎಲ್ಲಾ ನಾಲೆಗಳಿಗೂ ಕೂಡಲೇ ನೀರು ಹರಿಸುವಂತೆ ಆದೇಶಿಸಿದ್ದರೂ ಅಧಿಕಾರಿಗಳು ಅದರಂತೆ ನಡೆಯುತ್ತಿಲ್ಲ. ಕಾಮಗಾರಿ ನೆಪದಲ್ಲಿ ಇನ್ನೂ ನಾಲ್ಕೈದು ದಿನಗಳವರೆಗೆ ನೀರು ಹರಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿಗಳ ಆದೇಶಕ್ಕೆ ಬೆಲೆಯೇ ಇಲ್ಲವೇ ಎಂದು ಗುಡುಗಿದರು.ಈ ವಾರದಲ್ಲಿ ನೀರು ಹರಿಸಲಿಲ್ಲವೆಂದರೆ ಎಷ್ಟು ಮನೆಗಳು ಹಾಳಾಗುತ್ತವೆ ಎಂಬುದು ಸರ್ಕಾರಕ್ಕೆ ಗೊತ್ತಿದೆಯೇ. ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಮೊನ್ನೆಯಷ್ಟೇ ಸಿಡಿಎಸ್ ನಾಲೆಗೆ ನೀರು ಹರಿಸಿ ಯಾವುದೇ ಕಾರಣವನ್ನೂ ನೀಡದೆ ನಿನ್ನೆಯೇ ನೀರನ್ನು ನಿಲ್ಲಿಸಿದ್ದಾರೆ. ನೀರು ಬಿಟ್ಟಿದ್ದರಿಂದ ಸಂತಸಗೊಂಡ ರೈತರು ಬೆಳೆ ಬೆಳೆಯುವುದಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈಗ ನೀರು ನಿಲ್ಲಿಸಿದರೆ ಅವರ ಪರಿಸ್ಥಿತಿ ಏನಾಗಬೇಡ. ರೈತ ವಿರೋಧಿ ನಡೆಯನ್ನು ಸರ್ಕಾರ ಅನುಸರಿಸುತ್ತಿದೆ ಎಂದು ದೂಷಿಸಿದರು.
ಕೆಆರ್‌ಎಸ್ ಬಳಿ ಡಿಸ್ನಿಲ್ಯಾಂಡ್‌ನ್ನು ವಿರೋಧಿಸಿದ್ದವನು ನಾನು. ಅದೇ ರೀತಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೂ ನನ್ನ ವಿರೋಧವಿದೆ. ಅಣೆಕಟ್ಟೆಯ ಭದ್ರತೆಗೆ ಅಪಾಯವನ್ನು ಉಂಟು ಮಾಡುವ ಯಾವುದೇ ಯೋಜನೆಗಳಿಗೆ ವಿರೋಧವಿದೆ. ಕಾವೇರಿ ಆರತಿಯನ್ನು ಕೆಆರ್‌ಎಸ್ ಬದಲು ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದ ಸ್ನಾನಘಟ್ಟದ ಬಳಿ ಮಾಡುವುದು ಉತ್ತಮ. ಸ್ನಾನಘಟ್ಟದ ಅಭಿವೃದ್ಧಿಗೆ ನಾನು ಶಾಸಕನಾಗಿದ್ದಾಗ 8 ಕೋಟಿ ರು. ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದೆ. ಇದರಿಂದ ಪ್ರವಾಸೋದ್ಯಮವೂ ಬೆಳವಣಿಗೆ ಕಾಣಲಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಲೋಕೇಶ್ ಇದ್ದರು.