ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯ ಸರ್ವ ಸಿದ್ಧಾಂತ ಯುವಕರ ಬಳಗ ಮತ್ತು ಸನಾತನ ಧರ್ಮದ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಎರಡು ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಹಿಂದೂ ಪರ ಸಂಘಟನೆಗಳ ಬೆಂಬಲದೊಂದಿಗೆ ಸೋಮವಾರ ವಿಸರ್ಜನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ಚನ್ನೇಗೌಡ ಬಡಾವಣೆಯ ಸರ್ವ ಸಿದ್ಧಾಂತ ಯುವಕರ ಬಳಗ ಮತ್ತು ಸನಾತನ ಧರ್ಮದ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಎರಡು ಗಣೇಶ ಮೂರ್ತಿಗಳನ್ನು ಮೆರವಣಿಗೆ ಮೂಲಕ ಹಿಂದೂ ಪರ ಸಂಘಟನೆಗಳ ಬೆಂಬಲದೊಂದಿಗೆ ಸೋಮವಾರ ವಿಸರ್ಜನೆ ಮಾಡಲಾಯಿತು.

ಬಡಾವಣೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಡಿಜೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಆರಂಭವಾದ ಮೆರವಣಿಗೆಗೆ ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಗೋವರ್ಧನ ಸಿಂಗ್ ಚಾಲನೆ ನೀಡಿದರು. ನಂತರ ಸರ್ ಎಂ.ವಿಶ್ವೇಶ್ವರಯ್ಯ ನಗರ, ಲೀಲಾವತಿ ಬಡಾವಣೆ, ಸಂಜಯ್ ಚಿತ್ರಮಂದಿರದ ವೃತ್ತ ಮೂಲಕ ಹಳೇ ಎಂ.ಸಿ. ರಸ್ತೆ ತಲುಪಿತು. ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಯುವಕರು ಮತ್ತು ಮಹಿಳೆಯರು ಬೇದ ಭಾವ ಮರೆತು ಮೆರವಣಿಗೆಯಲ್ಲಿ ಪಾಲ್ಗೊಂಡು ನೃತ್ಯ ಪ್ರದರ್ಶನ ಮಾಡಿ ಕುಣಿದು ಕುಪ್ಪಳಿಸಿದರು.

ಗಣೇಶ ಮೂರ್ತಿ ಮೆರವಣಿಗೆ ಸಾಗಿದ ಸರ್ಕಾರಿ ಪ್ರೌಢಶಾಲೆ ಮುಂಭಾಗದ ಮುಸ್ಲಿಂ ದರ್ಗಾ ಹಾಗೂ ನಗರಕೆರೆ ವೃತ್ತದ ಜಾಮಿಯಾ ಮಸೀದ್ ಮತ್ತು ಸುತ್ತಮುತ್ತಲ ಅಂಗಡಿ ಮುಂಗಟ್ಟುಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ. ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ ಕುಮಾರ್, ಸಿಪಿಐಗಳಾದ ನವೀನ್, ನಾರಾಯಣಿ ಸೇರಿದಂತೆ ಮದ್ದೂರು ವೃತ್ತದ ಪೊಲೀಸ್ ಅಧಿಕಾರಿಗಳು ಹಾಗೂ ನೆರೆ ಜಿಲ್ಲೆ ಗಳ ಅಸಂಖ್ಯಾತ ಪೊಲೀಸರ ಬಂದೋಬಸ್ತ್ ಮಾಡಲಾಗಿತ್ತು.

ಸಂಜೆ 7.30 ರ ಸುಮಾರಿಗೆ ಹೊಳೆ ಆಂಜನೇಯ ಸ್ವಾಮಿ ದೇಗುಲ ಸಮೀಪದ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಯಲ್ಲಿ ಹಿಂದೂ ಜಾಗರಣವೇದಿಕೆ ಮಲ್ಲಿಕಾರ್ಜುನ್, ಬಜರಂಗದಳದ ಎಂ.ಜೆ.ಅನಿಲ್ ಕುಮಾರ್, ವೀರಭದ್ರ ಸ್ವಾಮಿ, ಯೋಗೇಶ್ ಗೌಡ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.

ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ರವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಎಲ್ಲಾ ಮಾದರಿಯ ಮದ್ಯದ ಅಂಗಡಿ , ಬಾರ್ ಮತ್ತು ರೆಸ್ಟೋರೆಂಟ್ ಗಳು ಬಂದ್ ಮಾಡಲು ಡಿಸಿ ಡಾ.ಕುಮಾರ ಆದೇಶ ಮಾಡಿದ್ದರು. ಕೆಲ ನಿರ್ಬಂಧ ಕೈ ಬಿಡದಿದ್ದರೆ ಚಳವಳಿ: ಗೋವರ್ಧನ ಸಿಂಗ್

ಮದ್ದೂರು: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿಂದೂ ಜನಾಂಗಕ್ಕೆ ರಾಜ್ಯ ಸರ್ಕಾರ ಮತ್ತು ಅಧಿಕಾರಶಾಹಿ ವರ್ಗ ಕೆಲ ನಿರ್ಬಂಧಗಳನ್ನು ಹೇರುವ ಕ್ರಮವನ್ನು ಕೈಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಪರ ಸಂಘಟನೆಗಳು ಚಳವಳಿ ಮಾರ್ಗ ಅನುಸರಿಸ ಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ತು ದಕ್ಷಿಣ ಪ್ರಾಂತ್ಯ ಸಹ ಸಂಚಾಲಕ ಗೋವರ್ಧನ ಸಿಂಗ್ ಎಚ್ಚರಿಸಿದರು.

ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಹಿಂದೂ ಕಾರ್ಯಕರ್ತರ ಮೇಲೆ ಬೇರೆ ಕೋಮಿನ ವರ್ಗ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿದೆ. ಆದರೂ ಸಹ ರಾಜ್ಯ ಸರ್ಕಾರ ಇಂಥ ಜನರಿಗೆ ರಕ್ಷಣೆ ನೀಡಲು ಮುಂದಾಗಿರುವುದನ್ನು ಖಂಡಿಸಿದರು.

ರಾಜ್ಯ ಸರ್ಕಾರ ಮತ್ತು ಅಧಿಕಾರಿಶಾಹಿ ವರ್ಗ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಹಿಂದುಗಳ ಮೇಲೆ ಕೆಲವೊಂದು ಕಾರಣಗಳನ್ನು ಒಡ್ಡಿ ನಿರ್ಬಂಧಗಳನ್ನು ಹೇರುವ ಕೆಲಸ ಮಾಡುತ್ತಿದೆ. ಯಾವ ಹಿಂದುಗಳು ಗಣೇಶನ ಹೆಸರಿನಲ್ಲಿ ಯಾವುದೇ ರೀತಿಯ ಕೋಮುವಾದ ಬಿತ್ತುವ ಕೆಲಸ ಮಾಡುತ್ತಿಲ್ಲ. ಹಿಂದೂ ಧರ್ಮದ ಉಳಿವಿಗೆ ಮತ್ತು ಜನಾಂಗದ ರಕ್ಷಣೆಗಾಗಿ ಹೋರಾಟ ಮಾಡುತ್ತಿದೆ ಎಂದು ಗೋವರ್ಧನ ಸಿಂಗ್ ತಿಳಿಸಿದರು. ಹಿಂದೂಪರ ಸಂಘಟನೆಯ ಮಲ್ಲಿಕಾರ್ಜುನ್, ಕದಲೂರು ನವೀನ್, ಎಂ.ಜೆ.ಅನಿಲ್, ವೀರಭದ್ರಸ್ವಾಮಿ, ಗುರು ಮಲ್ಲೇಶ್, ಮತ್ತಿತರರು ಇದ್ದರು.