ರಂಗುರಂಗಿನ ದೀಪಗಳ ಚಿತ್ತಾರದಲ್ಲಿ ಗಣೇಶನ ನಿಮಜ್ಜನ

| Published : Sep 07 2025, 01:00 AM IST

ರಂಗುರಂಗಿನ ದೀಪಗಳ ಚಿತ್ತಾರದಲ್ಲಿ ಗಣೇಶನ ನಿಮಜ್ಜನ
Share this Article
  • FB
  • TW
  • Linkdin
  • Email

ಸಾರಾಂಶ

180ಕ್ಕೂ ಹೆಚ್ಚು ಸಾರ್ವಜನಿಕ ಹಾಗೂ ಸಾವಿರಕ್ಕೂ ಹೆಚ್ಚು ಮನೆಯ ಗಣೇಶ ಮೂರ್ತಿಗಳನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸುವ ಮೂಲಕ ಬೃಹತ್ ಮೆರವಣಿಗೆಯಲ್ಲಿ ತಂದು ವಿಸರ್ಜನೆ ಮಾಡಲಾಯಿತು.

ಹುಬ್ಬಳ್ಳಿ: ಎಲ್ಲೆಲ್ಲೂ ಬಣ್ಣ- ಬಣ್ಣದ ವಿದ್ಯುತ್‌ ದೀಪಗಳ ಚಿತ್ತಾರ. ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿಯುತ್ತಿರುವ ಯುವಕ-ಯುವತಿಯರು, ಬೀದಿಬದಿ, ಕಟ್ಟಡದ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ದ ಜನಸ್ತೋಮ.

ಇದು ಕಂಡುಬಂದಿದ್ದು ಹುಬ್ಬಳ್ಳಿಯಲ್ಲಿ 11ನೇ ದಿನ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ. ಕಿಲೋ ಮೀಟರ್ ದೂರಕ್ಕೂ ಡಿಜೆ ಸದ್ದು ಕೇಳಿಬರುತ್ತಿತ್ತು. ಡಿಜೆ ಸದ್ದಿಗೆ ಯುವಕರ ಕೇಕೆ ಸಿಳ್ಳೆ, ಪಟಾಕಿಗಳ ಸದ್ದು ಮೆರವಣಿಗೆ ಮತ್ತಷ್ಟು ರಂಗು ನೀಡಿತ್ತು. ಕೇಸರಿ ಬಣ್ಣ ಬಳಿದುಕೊಂಡ ಸಾವಿರಾರು ಯುವಕ- ಯುವತಿಯರು ಗಣೇಶನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಹುಬ್ಬಳ್ಳಿಗರಷ್ಟೇ ಅಲ್ಲದೇ ಸುತ್ತಮುತ್ತಲಿನ ಜನ ಇಲ್ಲಿನ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಸಾಕ್ಷಿಯಾದರು.

ನಗರದ ದುರ್ಗದಬೈಲ್‌ನ ಶ್ರೀ ದುರ್ಗದಬೈಲ್ ಗಣಪ, ದಾಜೀಬಾನ್‌ ಪೇಟೆಯ ಹುಬ್ಬಳ್ಳಿ ಕಾ ರಾಜಾ, ಮರಾಠಾಗಲ್ಲಿಯ ಹುಬ್ಬಳ್ಳಿ ಚಾ ಮಹಾರಾಜ್, ಮೂರುಸಾವಿರ ಮಠದ ಗಣೇಶ, ಕಮಡೊಳ್ಳಿ- ಕುಬಸದ ಗಲ್ಲಿಯ ಹುಬ್ಬಳ್ಳಿ ಕಾ ಸಾಮ್ರಾಟ್, ಸ್ಟೇಶನ್ ರಸ್ತೆ ಮೈಲಾರಲಿಂಗೇಶ್ವರ ಗಣೇಶ, ಆಜಾದ್ ರೋಡ್ ಗಣೇಶ, ಉದಯನಗರ, ಕೇಶ್ವಾಪುರ, ಕುಸೂಗಲ್, ಉಣಕಲ್, ಭೈರಿದೇವರಕೊಪ್ಪ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಲಾದ 180ಕ್ಕೂ ಹೆಚ್ಚು ಸಾರ್ವಜನಿಕ ಹಾಗೂ ಸಾವಿರಕ್ಕೂ ಹೆಚ್ಚು ಮನೆಯ ಗಣೇಶ ಮೂರ್ತಿಗಳನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸುವ ಮೂಲಕ ಬೃಹತ್ ಮೆರವಣಿಗೆಯಲ್ಲಿ ತಂದು ವಿಸರ್ಜನೆ ಮಾಡಲಾಯಿತು.

15 ಅಡಿ ಒಳಗಿನ ಎತ್ತರದ ಮೂರ್ತಿಗಳನ್ನು ಹಳೇ ಬಸ್ ನಿಲ್ದಾಣದ ಮಾರ್ಗವಾಗಿ ಹಾಗೂ 20-25ಕ್ಕೂ ಹೆಚ್ಚು ಅಡಿ ಎತ್ತರದ ಮೂರ್ತಿಗಳನ್ನು ನಿಲಿಜನ್ ರಸ್ತೆ ಮಾರ್ಗದಲ್ಲಿ ಮೆರವಣಿಗೆ ಮೂಲಕ ತರಲಾಯಿತು. ಈ ವೇಳೆ ಸಾವಿರಾರು ಯುವಕರು, ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಭಾಗವಹಿಸಿದ್ದು, ವಿಶೇಷವಾಗಿತ್ತು.

ಮೆರವಣಿಗೆಗೆ ಶ್ರೀಗಳಿಂದ ಚಾಲನೆ: ಬೆಳಗ್ಗೆ ನಗರದ ದುರ್ಗದಬೈಲ್ ಸರ್ಕಲ್‌ನಲ್ಲಿ ನಡೆದ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆಯ ಉದ್ಘಾಟನಾ ಸಮಾರಂಭಕ್ಕೆ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಚಾಲನೆ ನೀಡಿದರು.

ನಂತರ ಆರಂಭವಾದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ದುರ್ಗದಬೈಲ್, ಬ್ರಾಡ್ವೇ, ಮೇದಾರ ಓಣಿ, ದಾಜೀಬಾನ್‌ಪೇಟ್, ರಾಯಣ್ಣ ಸರ್ಕಲ್, ಚೆನ್ನಮ್ಮ ಸರ್ಕಲ್ ಮಾರ್ಗವಾಗಿ ಹಾಗೂ ಮತ್ತೊಂದು ತಂಡ ಮಿರಜಾನ್ಕರ್ ಪಂಪ್, ಹಳೇಬಸ್ ನಿಲ್ದಾಣದ, ಬಸವವನ ಸರ್ಕಲ್ ಮಾರ್ಗವಾಗಿ, ನಿಲಿಜಿನ್ ರಸ್ತೆಯ ಮೂಲಕ ಇಂದಿರಾ ಗಾಜಿನ ಮನೆ ಆವರಣ ಹಾಗೂ ಹೊಸೂರು ಕ್ರಾಸ್ ಬಳಿಯ ಪಾಲಿಕೆಯ ಬಾವಿಯಲ್ಲಿ ವಿಸರ್ಜಿಸಲಾಯಿತು.

ಬಿಗಿ ಭದ್ರತೆಯಲ್ಲಿ ಮೆರವಣಿಗೆ: ಮೆರವಣಿಗೆಯ ಉದ್ದಕ್ಕೂ ಪೊಲೀಸರು ಸಾವಿರಾರು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈ ವೇಳೆ ಹು-ಧಾ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಸಿಪಿ, ಡಿಸಿಪಿ, ಡಿವೈಎಸ್ಪಿ, ಇನ್‌ಸ್ಪೆಕ್ಟರ್‌ ಹಾಗೂ ಪಿಐಗಳನ್ನು ವಿವಿಧ ತಂಡಗಳಲ್ಲಿ ಭದ್ರತೆಗೆ ನಿಯೋಜನೆಗೊಳಿಸಲಾಯಿತ್ತು. 10ಕ್ಕೂ ಹೆಚ್ಚು ಡಿಎಆರ್ ಹಾಗೂ ಸಿಎಆರ್, ಕೆಎಸ್ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.

ಮತ್ತಷ್ಟು ವಿಜೃಂಭಣೆಯಿಂದ ಗಣೇಶೋತ್ಸವ ನಡೆಯಲಿ: ಮೂಜಗು

ಹುಬ್ಬಳ್ಳಿ: ದೇಶದ ಪರಂಪರೆ ಉಳಿಯಲು ಹಬ್ಬಗಳು ಸಹಕಾರಿಯಾಗಿವೆ. ಮಹಾರಾಷ್ಟ್ರದ ನಂತರ ಹುಬ್ಬಳ್ಳಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಗಣೇಶ ಚತುರ್ಥಿಯನ್ನು ಆಚರಣೆ ಮಾಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಜೃಂಭಣೆಯಿಂದ ನಡೆಯುವಂತಾಗಬೇಕು ಎಂದು ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಶನಿವಾರ ಆಯೋಜಿಸಿದ ಶ್ರೀ ಗಣಪತಿ ವಿಗ್ರಹಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆಯ ಉದ್ಘಾಟನಾ ಸಮಾರಂಭಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹುಬ್ಬಳ್ಳಿಯ ಗಣೇಶೋತ್ಸವ ಭವ್ಯ ಪರಂಪರೆಯ ಜತೆಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಸೊಗಡನ್ನು ಬಿಂಬಿಸುತ್ತದೆ. ಇಂತಹ ಸಾಂಸ್ಕೃತಿಕ ಹಾಗೂ ಧಾರ್ಮಿಕ ಉತ್ತೇಜನ ನೀಡುವ ಹಬ್ಬಗಳಿಗೆ ರಾಜ್ಯ ಸರ್ಕಾರ ಅನುದಾನ ನೀಡುವಂತಾಗಬೇಕು. ಈ ಕುರಿತು ಅವಳಿ ನಗರದ ಎಲ್ಲ ಜನಪ್ರತಿನಿಗಳ ಸಹಯೋಗದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಮಜೇಥಿಯಾ ಫೌಂಡೇಶನ್ ಚೇರಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಎಲ್ಲರೂ ಭಾವೈಕ್ಯತೆಯಿಂದ ಹಬ್ಬ ಆಚರಿಸುವುದರಿಂದ ಏಕತೆ ಮನೋಭಾವನೆ ಉಂಟಾಗುತ್ತದೆ. ಹಬ್ಬಗಳು ಏಕತೆಯ ಸಂಕೇತವಾಗಿವೆ. ಎಸ್.ಎಸ್. ಕಮಡೊಳ್ಳಿಶೆಟ್ಟರ ಸ್ಥಾಪಿಸಿದ ಮಹಾಮಂಡಳ ಸುದೀರ್ಘ 49 ವರ್ಷದಿಂದ ಸೇವೆ ಸಲ್ಲಿಸುತ್ತಿದೆ. ನಗರದ ಎಲ್ಲ ಸಮಿತಿಯೊಂದಿಗೆ ನಿಕಟ ಸಂಪರ್ಕ ಹೊಂದುವ ಮೂಲಕ ವ್ಯವಸ್ಥಿತವಾಗಿ ಗಣೇಶೋತ್ಸವ ನಡೆಯುವಂತೆ ಶ್ರಮಿಸುತ್ತಿವೆ ಎಂದು ತಿಳಿಸಿದರು.

ಹಾಗೂ ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಮಾತನಾಡಿದರು. ಮಹಾ ಮಂಡಳದ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ, ಎಸ್.ಎಸ್. ಕಮಡೊಳ್ಳಿಶೆಟ್ಟರ, ರಾಜಶೇಖರ ಕರಕಣ್ಣವರ, ಈರಣ್ಣ ಪಾಳೇದ, ಎಂ.ಎಂ. ಡಂಬಳ, ಅಶೋಕ ಬೆಳ್ಳಿಗಟ್ಟಿ, ರವೀಂದ್ರ ರೇವಣಕರ, ಸಿದ್ದಣ್ಣ ಅಂಗಡಿ, ಮಹೇಶ ಶೇಟ್, ಸಂತೋಷ ಕಾಟವೆ, ಸಿ.ಬಿ. ನವಲಗುಂದ, ಗುರುನಾಥ ಪತ್ತಾರ, ಅನಿಲ ಬೇವಿನಕಟ್ಟಿ, ವಾಮನ ಕವಳೇಕರ, ಬಾಬಣ್ಣ ಪವಾರ, ರವೀಂದ್ರನಾಥ ಕಾನೋಜಿ, ಮೋಹನ ಗಬ್ಬೂರ, ಆದಿತ್ಯಾ ಬ್ಯಾಹಟ್ಟಿ, ಅನಿಲ ಕವಿಶೆಟ್ಟಿ, ಅಮರೇಶ ಹಿಪ್ಪರಗಿ ಇದ್ದರು.

ಸರಿಯಾಗಿ 10ಕ್ಕೆ ಡಿಜೆ ಬಂದ್: ಗಣೇಶ ವಿಸರ್ಜನೆ ವೇಳೆ ರಾತ್ರಿ ಸರಿಯಾಗಿ 10 ಗಂಟೆಗೆ ಡಿಜೆ ಬಂದ್ ಮಾಡಲಾಯಿತು. ಡಿಜೆ ಬಂದಾದ ನಂತರ ಮೆರವಣಿಗೆ ನೋಡಲು ಬಂದಿದ್ದ ಜನರು ಮನೆಯತ್ತ ಮುಖ ಮಾಡಿದರು. ಇದರಿಂದಾಗಿ ಚೆನ್ನಮ್ಮ ವೃತ್ತದ ಬಳಿಯ ಎಲ್ಲ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಪೊಲೀಸರು ಅಲ್ಲಲ್ಲಿ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಡಿಜೆ ಬಂದಾದ ಬಳಿಕ ಸಾಂಪ್ರದಾಯಿಕ ವಾದ್ಯಗಳ ಮೂಲಕ ಮೆರವಣಿಗೆ ಮುಂದೆ ಸಾಗಿತು.

ರಾಡ್ ಬಡಿದು ಯುವಕನಿಗೆ ಗಾಯ: ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಡಿಜೆಗೆ ಅಳವಡಿಸಿದ್ದ ರಾಡ್ ಬಡಿದು ಯುವಕಯೊಬ್ಬ ಶನಿವಾರ ರಾತ್ರಿ ಗಾಯಗೊಂಡಿದ್ದು, ಕೆಎಂಸಿಆರ್‌ಐನ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಪೇಟೆಯ ಪ್ರಶಾಂತ ಕಠಾರೆ ಗಾಯಗೊಂಡ ಯುವಕ. ಮೆರವಣಿಗೆ ವೇಳೆ ನೂಕುನುಗ್ಗಲು ಉಂಟಾಗಿದೆ. ಆಗ ಡಿಜೆಗೆ ಅಳವಡಿಸಿದ್ದ ರಾಡ್ ಹೊಟ್ಟೆ ಭಾಗಕ್ಕೆ ಹೊಕ್ಕಿದೆ. ಚೀರಿದ ತಕ್ಷಣ ಸ್ಥಳದಲ್ಲಿದ್ದವರು ಬಂದು ಪ್ರಶಾಂತನನ್ನು ಎಳೆದುಕೊಂಡು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.