ನಿಸರ್ಗ ತಾಣದಲ್ಲಿ ಅನೈತಿಕ ಚಟುವಟಿಕೆ

| Published : Jun 30 2025, 12:34 AM IST

ಸಾರಾಂಶ

ಬೂದಿನಗಡ ಮಾರ್ಗದ ರಸ್ತೆ ಅಕ್ಕಪಕ್ಕ ಸಾಕಷ್ಟು ಅರಣ್ಯ ಪ್ರದೇಶದಲ್ಲಿ ಗಿಡಮರಗಳು ಬೆಳೆದಿದ್ದು, ನಿತ್ಯ ಅವುಗಳ ಮಧ್ಯೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಅವುಗಳಿಂದಾಗುವ ಅಪಾಯ ತಪ್ಪಿಸಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.

ಡಾ.ಸಿ.ಎಂ. ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಬೂದಿನಗಡ ಮಾರ್ಗದ ರಸ್ತೆ ಅಕ್ಕಪಕ್ಕ ಸಾಕಷ್ಟು ಅರಣ್ಯ ಪ್ರದೇಶದಲ್ಲಿ ಗಿಡಮರಗಳು ಬೆಳೆದಿದ್ದು, ನಿತ್ಯ ಅವುಗಳ ಮಧ್ಯೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಅವುಗಳಿಂದಾಗುವ ಅಪಾಯ ತಪ್ಪಿಸಲು ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ನಾಗರಿಕರು ಆಗ್ರಹಿಸಿದ್ದಾರೆ.

ತಾಲೂಕಿನ ಬೂದಿನಗಡ ಗ್ರಾಮದಿಂದ ಮುಂದಕ್ಕೆ ಒಂದು ಕಿಮೀ ಅಂತರದ ಶಿರೂರ ಮಾರ್ಗದ ಮತ್ತು ಬೆನಕಟ್ಟಿ ಮಾರ್ಗದಲ್ಲಿ ಅರಣ್ಯ ಪ್ರದೇಶವಿದೆ. ಇದು ಸಾಕಷ್ಟು ವಿಸ್ತಾರವಾಗಿ ಹರಡಿಕೊಂಡಿದೆ. ಒಂದು ವರ್ಷದಿಂದ ಈ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಗಿಡಮರಗಳು ಬೆಳೆದಿವೆ. ಇಲ್ಲಿ ದಿನನಿತ್ಯ ಅನೇಕ ಬಗೆಯ ಅನೈತಿಕ ಚಟುವಟಿಕೆ ನಡೆದಿರುತ್ತವೆ ಎಂದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಆರೋಪಿಸಿದ್ದಾರೆ.

ಮದ್ಯಪಾನ ಮಾಡುವವರು ಈ ಅರಣ್ಯ ಪ್ರದೇಶದಲ್ಲಿ ನಿತ್ಯ ಕುಳಿತು ಮದ್ಯ ಸೇವಿಸಿ ಪರಸ್ಪರ ಕಚ್ಚಾಟ ಮಾಡುವ, ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೆ ಬಲಿಯಾಗಿರುವ ಉದಾಹರಣೆಗಳಿವೆ. ಇಂತಹ ಘಟನೆಗಳು ನಿತ್ಯ ನಡೆದಿರುತ್ತವೆ. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿ ಇಂತಹ ಘಟನೆಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂಬುದು ನಾಗರಿಕರ ಆರೋಪ.

ಬೈಕ್ ಮತ್ತು ಕಾರ್ ಮುಂತಾದ ವಾಹನಗಳ ಮೂಲಕ ಬರುವ ಯುವಕ, ಯುವತಿಯರು ವಾಹನಗಳನ್ನು ರಸ್ತೆ ಪಕ್ಕ ನಿಲ್ಲಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಲು ಅರಣ್ಯದಲ್ಲಿ ಹೋಗುವುದನ್ನು ಕಂಡಿರುವ ಅನೇಕರು ಇಂತಹ ಚಟುವಟಿಕೆಗಳಿಗೆ ಸುರಕ್ಷಿತ ತಾಣವಾಗಿರುವ ಅರಣ್ಯ ಪ್ರದೇಶಗಳ ಪ್ರವೇಶ ನಿಯಂತ್ರಿಸಲು ಅರಣ್ಯ ಇಲಾಖೆ ಕಡಿವಾಣ ಹಾಕಲು ಆಗ್ರಹಿಸಿದ್ದಾರೆ.

ಇನ್ನು ಕೆಲವರು ಗಾಂಜಾ, ಜೂಜು ಆಡಲು ಈ ಸ್ಥಳಗಳನ್ನೂ ಅಡ್ಡೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತದೆ. ಈ ಅರಣ್ಯ ಪ್ರದೇಶದಲ್ಲಿ ನವಿಲು, ಮೊಲ, ಜಿಂಕೆ, ತೋಳ, ನರಿ ಮುಂತಾದ ವನ್ಯ ಜೀವಿಗಳು ವಾಸವಾಗಿವೆ. ಕೆಲ ಪುಂಡರ ಅನೈತಿಕ ಚಟುವಟಿಕೆಗಳ ತಾಣವಾಗಿರುವುದರಿಂದ ಈ ಪ್ರದೇಶದಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಆಗುತ್ತಿಲ್ಲ ಎಂಬುವುದು ಪರಿಸರವಾದಿಗಳ ಅಳಲು.

ಆದಷ್ಟು ಬೇಗ ಅರಣ್ಯ ಇಲಾಖೆ ಈ ಪ್ರದೇಶದ ಸುತ್ತ ನಿಯಂತ್ರಣ ಬೇಲಿ ಅಳವಡಿಸಿ, ಇಲಾಖೆಯ ನಿಯಮಗಳ ನಾಮಫಲಕ ಹಾಕಿ, ಮೇಲಿಂದ ಮೇಲೆ ಗಸ್ತು ತಿರುಗಿ ಅಪರಾಧ ಕೃತ್ಯಗಳು ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಪರಿಸರವಾದಿಗಳ ಮತ್ತು ನಾಗರಿಕರ ಆಗ್ರಹವಾಗಿದೆ. ಈ ಭಾಗದಲ್ಲಿ ಪಾರಕ್‌ ಪ್ರೋಜೆಕ್ಟ್ ತೆಗೆದುಕೊಳ್ಳುತ್ತಿದ್ದೇವೆ. ಅದು ಮಂಜೂರಾದರೆ ಸಂಪೂರ್ಣ ನಿಯಂತ್ರಣವಾಗುತ್ತದೆ. ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ಅಲ್ಲಿಯವರೆಗೆ ಶೀಘ್ರದಲ್ಲಿ ನಾಮಫಲಕಗಳನ್ನು ಹಾಕಿ, ಇಲಾಖೆಯ ನಿಯಮಗಳನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುತ್ತೇವೆ.

- ರಂಗನಾಥ ಹೊಸಮನಿ ಸಹಾಯಕ ವಲಯ ಅರಣ್ಯಾಧಿಕಾರಿ ಗುಳೇದಗುಡ್ಡ