ಸಾರಾಂಶ
ಹುಬ್ಬಳ್ಳಿ: 60 ದಾಟಿದ ವಿಧುರ ನಿವೃತ್ತ ಶಿಕ್ಷಕ, ಕೃಷ್ಣನ ಧ್ಯಾನದಲ್ಲೆ 54 ವಸಂತ ಕಳೆದ ಕಲಾವಿದೆ ಮಧ್ಯೆ ಕೊರಡು ಕೊನರಿದಂತೆ ಪ್ರೀತಿ ಅರಳಿ, ಕೈ ಕೈ ಹಿಡಿದು ಮದುವೆಯಾಗುತ್ತಾರೆ. ಇಳಿ ವಯಸ್ಸಿನಲ್ಲಿ ಪರಸ್ಪರ ಆಸರೆಯಾಗುತ್ತಾರೆ. ವಯಸ್ಸಾದರೂ ಬದುಕು ಮುಗಿಯುವುದಿಲ್ಲ, ಅದು ನಿರಂತರ, ನಿತ್ಯ, ಚಿರನೂತನ....
ಇಂಥದೊಂದು ಸಂದೇಶ ಸಾರುವ ‘ಅಮರ ಮಧುರ ಪ್ರೇಮ’ ನಾಟಕ ಭಾನುವಾರ ಇಲ್ಲಿನ ಸವಾಯಿ ಗಂಧರ್ವ ಹಾಲ್‌ನಲ್ಲಿ ಯಶಸ್ವಿ ಪ್ರಯೋಗ ಕಂಡಿತು.ಖ್ಯಾತ ನಗೆ ನಾಟಕಕಾರ, ನಿರ್ದೇಶಕ ಯಶವಂತ ಸರದೇಶಪಾಂಡೆ ಅವರ ಹೊಸ ನಾಟಕ ಇದು. ಗುರು ಸಂಸ್ಥೆ ರೂಪಿಸಿದ ಈ ನಾಟಕ ಗಂಗಾವತಿ ರೇಷ್ಮೆ ರಂಗೋತ್ಸವದ ಭಾಗವಾಗಿ ಮತ್ತು ಜೋಶಿಸ್ ಆಸ್ಟ್ರೋಸ್ಕೊಪ ಸಹಯೋಗದಲ್ಲಿ ಪ್ರದರ್ಶನವಾಯಿತು.
ವಯೋವೃದ್ಧರ ವಿವಾಹ ಪ್ರಸಂಗದ, ಸಮೃದ್ಧ ಸಂಭಾಷಣೆಯ, ಸುಂದರ ಹಾಸ್ಯ ನಾಟಕ ಇದು. ಕನ್ನಡ ಟೆಲಿವಿಷನ್ ಲೋಕದ ಜನಪ್ರಿಯ ಜೋಡಿ ವೀಣಾ ಮತ್ತು ಸುಂದರ ಅವರು ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದರು.ಮರಾಠಿಯ ಪ್ರಸಿದ್ಧ ನಾಟಕಕಾರ ಹೇಮಂತ ಎದಲಬಾದಕರ್ ಬರೆದ ನಾಟಕವನ್ನು ‘ಅಮರ ಮಧುರ ಪ್ರೇಮ’ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ, ನಟಿಸಿ, ನಿರ್ದೇಶಿಸಿದವರು ಯಶವಂತ ಸರದೇಶಪಾಂಡೆ. ಆಲ್ ದಿ ಬೆಸ್ಟ್, ಸಹಿರೇ ಸಹಿ, ರಾಶಿಚಕ್ರ ನಾಟಕಗಳಂತೆ ಇಲ್ಲಿಯೂ ಯಶವಂತ ಸರದೇಶಪಾಂಡೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.
ರಂಗ ಸಜ್ಜಿಕೆ, ಹಿನ್ನೆಲೆ ಸಂಗೀತ, ಶೀರ್ಷಕ ಗೀತೆ, ವಸ್ತ್ರವಿನ್ಯಾಸ, ಬೆಳಕು ಸಂಯೋಜನೆಗಳು ಸರಳ ಮತ್ತು ಆಕರ್ಷಕವಾಗಿವೆ. ಪ್ರವೀಣ್ ರಾವ್ ಅವರ ಸಂಗೀತ, ಜೀವನ್ ಫರ್ನಾಂಡಿಸ್, ಪ್ರದೀಪ ಮುಧೋಳ ಅವರುಗಳ ರಂಗಸಜ್ಜಿಕೆ ಮತ್ತು ವ್ಯವಸ್ಥೆ, ನಾಗರಾಜ ಪಾಟೀಲ್ ಅವರ ಬೆಳಕು ವಿನ್ಯಾಸ ಆಕರ್ಷಕವಾಗಿವೆ.ನಾಟಕ ನೋಡಲು ಬಂದಂತಹ ಅದೃಷ್ಟವಂತ ಪ್ರೇಕ್ಷಕರಿಗೆ ಬೆಲೆಯ ಸಿಲ್ಕ್ ಸೀರೆ ಉಡುಗೋರೆ ನೀಡಲಾಯಿತು. ಪ್ರೇಕ್ಷಕರನ್ನು ರಂಗಮಂದಿರಗಳ ಕಡೆಗೆ ಮತ್ತೆ ಕರೆತರುವುದಕ್ಕೆ ಇದು ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ ಎಂದು ಕಲಾವಿದ ಸರದೇಶಪಾಂಡೆ ಮತ್ತು ಗಂಗಾವತಿ ಸಿಲ್ಕ್ ಪ್ಯಾಲೇಸ್ ಒಡೆಯ ಆನಂದ ಕಮತಗಿ ಹೆಮ್ಮೆಯಿಂದ ಹೇಳಿದರು.
ಬಿಜೆಪಿ ಹಿರಿಯ ಮುಖಂಡರಾದ ಗೋವಿಂದ ಜೋಶಿ, ಲಿಂಗರಾಜ ಪಾಟೀಲ ಸೀರೆಗಳ ಲಕ್ಕಿ ಡ್ರಾ ನೆರವೇರಿಸಿದರು.