ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಗುರುವಾರ ರಾತ್ರಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪುಂಜಾಲಕಟ್ಟೆ ಘಟಕ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಿಳಾ ಘಟಕದ 8 ನೇ ವಾರ್ಷಿಕೋತ್ಸವ ಸಮಾರಂಭ
ಬಂಟ್ವಾಳ: ಯಕ್ಷ ಶಿಕ್ಷಣ ವಿದ್ಯಾರ್ಥಿಗಳ ಓದಿಗೆ ಪೂರಕವಾಗಿದ್ದು, ಯಕ್ಷಗಾನ ಸಹಿತ ವಿವಿಧ ದೇಶಿ ಕಲೆಗಳಲ್ಲಿ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಮೂಡುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಕೂಡ ಅರ್ಥ ಮಾಡಿಕೊಳ್ಳಬೇಕು, ಪ್ರಸ್ತುತ ಕಾಲಘಟದಲ್ಲಿ ಇದರ ತೀರಾ ಅಗತ್ಯವಿದೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.
ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಗುರುವಾರ ರಾತ್ರಿ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪುಂಜಾಲಕಟ್ಟೆ ಘಟಕ ಹಾಗೂ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಿಳಾ ಘಟಕದ 8 ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭಜನೆ ಸಹಿತ ವಿವಿಧ ದೇಶಿ ಕಲೆಗಳಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಚಣಿಕ ಬದುಕಿಗೆ ತೊಂದರೆಯಾಗುತ್ತದೆ ಎಂಬ ಆತಂಕ ಬೇಡ ಎಳವೆಯಿಂದಲೇ ಯಕ್ಷಗಾನದಲ್ಲಿ ಸಕ್ರಿಯವಾಗಿದ್ದುಕೊಂಡು ವೈದ್ಯೆಯಾಗಿರುವ ಡಾ.ವಿನಯಾ ಅವರ ಸಾಧನೆ ಇದಕ್ಕೆ ನಿದರ್ಶನವಾಗಿದೆ ಎಂದರುಕಳೆದ ವರ್ಷ ಶಾಸಕ ರಾಜೇಶ್ ನಾಯ್ಕ್ ಅವರ ಒಡ್ಡೂರು ಫಾರ್ಮ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷ ಶಿಕ್ಷಣದ 1200. ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದರೆ. ಜ.4 ರಂದು ಸಹ್ಯಾದ್ರಿ ಇಂಜಿನಿಯರಿಂಗ ಕಾಲೇಜ್ ಆವರಣದಲ್ಲಿ ವಿ.ಪ.ಸದಸ್ಯ ಮಂಜುನಾಥ ಭಂಡಾರಿಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 1400 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಲಿದ್ದಾರೆ ಎಂದ ಅವರು ಯಕ್ಷ ಶಿಕ್ಷಣಕ್ಕೆ ಸಹಿತ ವಿವಿಧ ಯೋಜನೆಗಳಿಗೆ ಯಕ್ಷದ್ರುವ ಪಟ್ಲ ಫೌಂಡೇಶನ್ ನಿಂದ ವಾರ್ಷಿಕವಾಗಿ ಒಟ್ಟು 16 ಕೋ.ರು. ವ್ಯಯ ಮಾಡಲಾಗುತ್ತಿದೆ ಎಂದರು.ಅತಿಥಿಯಾಗಿ ಭಾಗವಹಿಸಿದ್ದ ಪಿಲಾತಬೆಟ್ಟು ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ತುಂಗಪ್ಪ ಬಂಗೇರ ಮಾತನಾಡಿ, ಪ್ರಸ್ತುತ ಯಕ್ಷಗಾನ ಕಲೆಗೆ ಪಟ್ಲ ಸತೀಶ್ ಶೆಟ್ಟಿ ಅವರು ಮೌಲ್ಯವನ್ನು ತಂದುಕೊಟ್ಟಿದ್ದಾರೆ. ಕಲಾವಿದರಿಗೆ ನೀಡಲಾಗುವ ವಿಮಾ ಯೋಜನೆಯನ್ನು ಕಬಡ್ಡಿಪಟುಗಳಿಗೂ ವಿಸ್ತರಿಸುವ ಚಿಂತನೆ ಮಾಡಬೇಕು, ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕಾದರೆ ಯಕ್ಷಗಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.ಹಾಪ್ ಕಾಮ್ಸ್ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಫೌಂಡೇಶನ್ ನ ಬಂಟ್ವಾಳ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ, ಉದ್ಯಮಿಗಳಾದ ಟಿ.ಹರೀಂದ್ರ ಪೈ, ನೆಲ್ವಿಸ್ಟರ್ ಪಿಂಟೋ, ಜಯಪ್ರಕಾಶ್ ಸಂಪಿಗೆತ್ತಾಯ ಬಳ್ಳಮಂಜ, ಸಿವಿಲ್ ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ಪುಂಜಾಲಕಟ್ಟೆ ಶ್ರೀಗೋಪಾಲಕೃಷ್ಣ ದೇವಳದ ಟ್ರಸ್ಟಿ ಎಂ.ನಾಗೇಶ್ ಪ್ರಭು, ಯಕ್ಷದ್ರುವ ಪಟ್ಲ ಫೌಂಡೇಶನ್ ನ ಪುಂಜಾಲಕಟ್ಟೆ ಘಟಕದ ಸಂಚಾಲಕ ರಮೇಶ್ ಮಜಲೋಡಿ, ಗೌರವ ಮಾರ್ಗದರ್ಶಕರಾದ ಜಯಂತ್ ಶೆಟ್ಟಿ ಭಂಡಾರಿಗುಡ್ಡೆ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ಡಿ.ಗೌಡ, ಗೌರವಾಧ್ಯಕ್ಷೆ ಲಕ್ಷ್ಮೀ ಸಂಜೀವ ಶೆಟ್ಟಿ ಮೊದಲಾದವರಿದ್ದರು.ಸನ್ಮಾನ: ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಶೆಟ್ಟಿ ನೆತ್ತರ, ಬಹುಮುಖ ಯುವ ಪ್ರತಿಭೆ ಡಾ. ವಿನಯಾ ಪಾದೆಮನೆ ಅವರನ್ನು ಸನ್ಮಾನಿಸಲಾಯಿತು. ಹಾಗೂ ಯಕ್ಷಗುರುಗಳಾದ ಸಾಯಿಸುಮಾ ನಾವಡ ಕಾರಿಂಜ ಹಾಗೂ ದೇವಿಪ್ರಸಾದ್ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಘಟಕದ ಅಧ್ಯಕ್ಷರಾದ ಯಶೋಧರ ಶೆಟ್ಟಿ ದಂಡೆ ಸ್ವಾಗತಿಸಿದರು. ಸಹಸಂಚಾಲಕ ಪ್ರಭಾಕರ ಪಿ.ಎಂ.ವಂದಿಸಿದರು. ಕಲಾವಿದ ರತ್ನದೇವ್ ಪುಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಬೆಳಿಗ್ಗೆ ಕಲ್ಲಬೆಟ್ಟು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಗೋವಿಂದ ಭಟ್ ಅವರು ವಾರ್ಷಿಕೋತ್ಸವವನ್ನು ಉದ್ಘಾಟಿ ಶುಭಹಾರೈಸಿದ್ದರು. ಮೂಡುಬಿದಿರೆ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ರಾಧಕೃಷ್ಣ ಹಂಬೆಟ್ಟು, ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದ, ಅರ್ಯಾಪು ಗ್ರಾ.ಪಂ.ಪಿಡಿಒ ನಾಗೇಶ್ ಎಂ. ಪ್ರಗತಿಪರ ಕೃಷಿಕ ಶೇಖರಪೂಜಾರಿ, ಮಡಂತ್ಯಾರು ಜೆಸಿಐ ಅಧ್ಯಕ್ಷ ಅಮಿತಾ ಅಶೋಕ್, ಪುಂಜಾಲ ಕಟ್ಟಡ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ ಅತಿಥಿಯಾಗಿದ್ದರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ಯಕ್ಷಧ್ರುವ ಕಲಾತಂಡ ಪುಂಜಾಲಕಟ್ಟೆ ಇದರ ವಿದ್ಯಾರ್ಥಿಗಳಿಂದ ಪುಣ್ಯಕೋಟಿ - ಕುಮಾರ ವಿಜಯ ಹಾಗೂ ಸಂಜೆ ಪಾವಂಜೆ ಮೇಳದವರಿಂದ ಶ್ರೀ ತುಳಸಿ ಯಕ್ಷಗಾನ ಪ್ರದರ್ಶನ ಜರುಗಿತು.ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಶ್ರೀದೇವರ ಪ್ರಸಾದ ಸ್ವೀಕರಿಸಿದರು.