ಭಾರತ ಪಾಚ್ಚಿಮಾತ್ಯ ಶಿಕ್ಷಣ ಪದ್ಧತಿಯಿಂದ ಹೊರಬಂದು ಭಾರತೀಯ ಪರಂಪರೆಯ ಶಿಕ್ಷಣ ಪದ್ಧತಿಯ ಕಡೆಗೆ ಬಂದಾಗ ಮಾತ್ರ ಭಾರತದ ಶಿಕ್ಷಣ ಭವ್ಯ ಶಿಕ್ಷಣವಾಗುತ್ತದೆ. ಇಲ್ಲವಾದಲ್ಲಿ ನಮ್ಮ ಶಿಕ್ಷಣಕ್ಕೆ ಮೋಕ್ಷವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಭಾರತ ಪಾಚ್ಚಿಮಾತ್ಯ ಶಿಕ್ಷಣ ಪದ್ಧತಿಯಿಂದ ಹೊರಬಂದು ಭಾರತೀಯ ಪರಂಪರೆಯ ಶಿಕ್ಷಣ ಪದ್ಧತಿಯ ಕಡೆಗೆ ಬಂದಾಗ ಮಾತ್ರ ಭಾರತದ ಶಿಕ್ಷಣ ಭವ್ಯ ಶಿಕ್ಷಣವಾಗುತ್ತದೆ. ಇಲ್ಲವಾದಲ್ಲಿ ನಮ್ಮ ಶಿಕ್ಷಣಕ್ಕೆ ಮೋಕ್ಷವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ ಹೇಳಿದರು.

ಪಟ್ಟಣದ ಎಚ್.ಜಿ.ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘ ಮತ್ತು ಎಚ್.ಜಿ.ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜುಗಳ ಸಹಯೋಗದಲ್ಲಿ ದಿ.ಎಂ.ಸಿ.ಮನಗೂಳಿ ವೇದಿಕೆಯಲ್ಲಿ ಹಮ್ಮಿಕೊಂಡ 15ನೇ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಮೂಲ ಉದ್ದೇಶ ಜ್ಞಾನ, ಸಂಸ್ಕಾರ ಹಾಗೂ ಕೌಶಲ್ಯಗಳನ್ನು ನೀಡುವುದು. ಆದರೆ, ಇಂದು ಜ್ಞಾನ ಸಿಗುತ್ತಿದೆ ಸಂಸ್ಕಾರ ಸಿಗುತ್ತಿಲ್ಲ. ಇದರಿಂದ ನಮ್ಮ ಮುಂದಿನ ಪೀಳಿಗೆಯ ಸ್ಥಿತಿ ಅದೋಗತಿಗೆ ಬರುವುದರಲ್ಲಿ ಯಾವ ಸಂದೇಹವು ಇಲ್ಲ. ಜ್ಞಾನ ಯಾರಿಂದಲೇ ಸಿಗಲಿ ಅದನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಮೂಡಬೇಕು ಎಂದರು.ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ.ನಾಗರಾಜ ಮರೆಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣಶಾಸ್ತ್ರ ವಿಷಯಕ್ಕೆ ಈ ಹಿಂದೆ ಹೆಚ್ಚು ಬೇಡಿಕೆಯ ವಿಷಯವಾಗಿತ್ತು. ಆದರೆ, ಬದಲಾದ ಶಿಕ್ಷಣ ಪದ್ಧತಿಯಲ್ಲಿ ಈ ವಿಷಯ ಸೊರಗುತ್ತಿದೆ. ಆದರೂ ಅದು ತನ್ನ ಮೌಲ್ಯವನ್ನು ಯಾವತ್ತು ಕಳೆದುಕೊಂಡಿಲ್ಲ. ಶಿಕ್ಷಣಶಾಸ್ತ್ರ ವಿಷಯದ ಸಮ್ಮೇಳನಗಳು ಉಪನ್ಯಾಸಕರಿಗೆ ಹೆಚ್ಚೆಚ್ಚು ಕೌಶಲ್ಯಗಳನ್ನು ತಿಳಿಸುವಲ್ಲಿ ಸಹಾಯಕವಾಗುತ್ತದೆ ಎಂದರು. ಕರ್ನಾಟಕ ರಾಜ್ಯ ಪದವಿ ಪೂರ್ವ ಶಿಕ್ಷಣಶಾಸ್ತ್ರ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಎ.ಆರ್.ಹೆಗ್ಗನದೊಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದಲಾಗುತ್ತಿರುವ ಶಿಕ್ಷಣ ಪದ್ಧತಿಗೆ ನಾವೆಲ್ಲ ಹೊಂದಿಕೊಳ್ಳಬೇಕು. ಮಕ್ಕಳಿಗೆ ಅಂಕಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದ್ದು, ಸಂಸ್ಕಾರ ಅದು ಶಿಕ್ಷಣದ ಮೂಲಕವೇ ಮಕ್ಕಳಿಗೆ ಸಿಗುವಂತಾಗಬೇಕು. ಇಂತಹ ಸಮ್ಮೇಳನಗಳು ಮಕ್ಕಳ ಸರ್ವೋತೊಮುಖ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಶಿಕ್ಷಣ ಶಿಸ್ತಿಗೆ ಹೆಚ್ಚು ಮಹತ್ವ ನೀಡಬೇಕು. ಶಾಲಾ ಕಾಲೇಜು ಶಿಕ್ಷಕರು ಶಿಕ್ಷಣದ ಜೊತೆಗೆ ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನೀಡಲೇ ಬೇಕು. ಅಂಕ ಮುಖ್ಯವಲ್ಲ. ಮಕ್ಕಳ ಬದುಕು, ಸಮಾಜದ ಬದುಕು ಮುಖ್ಯ ಅದನ್ನು ಅರಿತು ಬೋಧಿಸಬೇಕು ಎಂದರು.ಉಪನ್ಯಾಸಕ ಎನ್.ಬಿ.ಅವದಾನಿ ಮತ್ತು ಜಗದೀಶ ಗುಲಗಂಜಿ ಅವರು ಶಿಕ್ಷಣಶಾಸ್ತ್ರ ವಿಷಯಕ್ಕೆ ಸಂಬಂಧಿಸಿದ ಫಲಿತಾಂಶ ಸುಧಾರಣಾ ಮಾಲಿಕೆಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು.ವೇದಿಕೆ ಮೇಲೆ ಜಿಲ್ಲಾ ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಬಜಂತ್ರಿ, ನಿರುಪಮಾ ನಾಯಕ, ವಿ.ಜಿ.ಹುನಳ್ಳಿ, ಬಿ.ಸಿ.ಪಾಟೀಲ ಇದ್ದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹ.ಮ ಪೂಜಾರಿ, ಶಿವಕುಮಾರ ಶಿವಶಿಂಪಿಗೇರ, ಎಸ್.ಎಸ್.ಸಾತಿಹಾಳ, ಉಪನ್ಯಾಸಕರಾದ ವಿ.ಕೆ.ಪಾಟೀಲ, ಎಸ್.ಜಿ.ಲಕ್ಕುಂಡಿಮಠ, ಡಾ.ಪ್ರಮೋದ ಕಟ್ಟಿ, ಸಿದ್ದಲಿಂಗ ಕಿಣಗಿ, ಆರ್.ಎಂ.ನದಾಫ, ಪ್ರಶಾಂತ ಕುಲಕರ್ಣಿ, ಎಸ್.ಆರ್.ಬೂದಿಹಾಳ, ಡಾ.ಮಾಧವ ಗುಡಿ, ಲಕ್ಷ್ಮೀ ಸಂಗಾಪೂರ, ಬಸಮ್ಮ ನಾಟಿಕಾರ, ಎಸ್.ಬಿ.ಕಾಮಗೊಂಡ, ರಮೇಶ ಅಂಗಡಿ, ಡಾ.ಅತಿಯಾ ಕೌಸರ, ಸವಿತಾ ಬಿ.ಜಿ ಸೇರಿದಂತೆ ಇತರರು ಇದ್ದರು.ಇಂದಿನ ಮಕ್ಕಳಲ್ಲಿ ಪ್ರಶ್ನಿಸುವ ಕೌಶಲ್ಯ ಇಲ್ಲವಾಗುತ್ತಿದೆ. ಎಲ್ಲಿಯವರೆಗೆ ಪ್ರಶ್ನಿಸುವ ಕಲೆ ಇರುವುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣ ಹಾಗೂ ಶಿಕ್ಷಕ ಜ್ಞಾನದಲ್ಲಿ ಬಡವನಾಗುತ್ತಾನೆ. ಪ್ರತಿ ವಿಷಯದ ಶಿಕ್ಷಕರು ತಮ್ಮ ವಿಷಯದ ಮೇಲೆ ಹೆಚ್ಚು ಗೌರವ ಇಟ್ಟುಕೊಳ್ಳಬೇಕು, ವೃತ್ತಿಯನ್ನು ಕುಟುಂಬದಂತೆ ಪ್ರೀತಿಸಬೇಕು. ಶಿಕ್ಷಣಶಾಸ್ತ್ರ ವಿಷಯದಲ್ಲಿ ಎಲ್ಲ ಜ್ಞಾನವು ಸೇರಿ ಇಂತಹ ಸಮ್ಮೇಳನಗಳು, ವಿಚಾರ ಸಂಕಿರಣಗಳು ಸದಾ ನಡೆಯುತ್ತಲೇ ಇರಬೇಕು.

-ಡಾ.ಅರವಿಂದ ಮನಗೂಳಿ,

ನಿವೃತ್ತ ಪ್ರಾಧ್ಯಾಪಕರು.