ಬೆಂಗಳೂರು: ನಗರದ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರ ಸಂಘದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇರ್ಶನಾಲಯ (ಇ.ಡಿ.) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(ಪಿಎಂಎಲ್‌ಎ) ಸಂಘದ ಸಿಇಓ ವಿ.ಆರ್‌.ರಾಜೇಶ್‌, ಅಧ್ಯಕ್ಷೆ ವಿ.ಎಸ್‌.ನಾಗವಲ್ಲಿ ಹಾಗೂ ಇತರೆ ಆರೋಪಿಗಳಿಗೆ ಸೇರಿದ 16.95 ಕೋಟಿ ರು. ಮೌಲ್ಯದ 11 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.

ಆರೋಪಿಗಳು ಅಪರಾಧ ಚಟುವಟಿಕೆಗಳ ಮೂಲಕ ಗಳಿಸಿದ್ದ ಆದಾಯವನ್ನು ರಾಮನಗರ, ಮೈಸೂರು ಮತ್ತು ಬೆಂಗಳೂರಿನಲ್ಲಿ ಜಮೀನು, ಪ್ಲಾಟ್‌ಗಳು ಮತ್ತು ಕಟ್ಟಡಗಳ ಮೇಲೆ ಹೂಡಿಕೆ ಮಾಡಿದ್ದರು. ಇದೀಗ ಇ.ಡಿ. ಆ 11 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.

ವಂಚನೆ ಪ್ರಕರಣ ಸಂಬಂಧ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರ ಸಂಘದ ಸಿಇಓ ವಿ.ಆರ್‌.ರಾಜೇಶ್‌, ಅಧ್ಯಕ್ಷೆ ವಿ.ಎಸ್‌.ನಾಗವಲ್ಲಿ ಹಾಗೂ ಇತರೆ ಆರೋಪಿಗಳ ವಿರುದ್ಧ ಸುಬ್ರಮಣ್ಯಪುರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧಾರದ ಮೇಲೆ ಇ.ಡಿ.ತನಿಖೆ ಆರಂಭಿಸಿದೆ.ಸಮರ್ಪಕ ಶ್ಯೂರಿಟಿ ಪಡೆಯದೆ ಸಾಲ:ಸಿರಿವೈಭವ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ನಾಗವಲ್ಲಿ, ಸಿಇಓ ರಾಜೇಶ್‌ ಅವರು ಸರಿಯಾದ ಶ್ಯೂರಿಟಿ ಪಡೆಯದೆ ಸಾಲ ಮಂಜೂರು ಮಾಡಿದ್ದಾರೆ. ಆ ಸಾಲದ ಹಣ ಮರುಪಾವತಿ ಆಗಿಲ್ಲ. ಸಂಘದಲ್ಲಿ ತಮ್ಮ ಹುದ್ದೆ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಸ್ವಂತ ಲಾಭಕ್ಕಾಗಿ ಠೇವಣಿದಾರರಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ರಾಜ್ಯ ಫೆಡರಲ್‌ ಕೋ ಆಪರೇಟಿವ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ದೂರಿನಲ್ಲಿ ಆರೋಪಿಸಿದ್ದಾರೆ.ಠೇವಣಿದಾರರ 65 ಕೋಟಿ ರು. ವಂಚನೆ:ಸಂಘದ ಅಧ್ಯಕ್ಷೆ ನಾಗವಲ್ಲಿ ಮತ್ತು ಸಿಇಓ ರಾಜೇಶ್‌ ದಂಪತಿಗಳಾಗಿದ್ದಾರೆ. ಸಾರ್ವಜನಿಕರಿಂದ ಠೇವಣೆ ಪಡೆದು ಅದನ್ನು ಅಕ್ರಮವಾಗಿ ಸ್ವಂತ ಲಾಭ ಹಾಗೂ ಮತ್ತಷ್ಟು ಹೂಡಿಕೆ ಮಾಡುವ ಉದ್ದೇಶದಿಂದ 2011ರಲ್ಲಿ ಈ ಸಿರಿವೈಭವ ಸೌಹಾರ್ದ ಪತ್ತಿನ ಸಹಕಾರ ಸಂಘ ಸ್ಥಾಪಿಸಿದ್ದರು. ಇತರೆ ಆರೋಪಿಗಳೊಂದಿಗೆ ಶಾಮೀಲಾಗಿ ಸಾರ್ವಜನಿಕರ ಸುಮಾರು 65 ಕೋಟಿ ರು. ಠೇವಣಿಗಳನ್ನು ಸ್ವಂತ ಲಾಭಕ್ಕೆ ಬಳಸಿಕೊಂಡಿದ್ದಾರೆ. ಈ ಹಣ ಅಕ್ರಮ ವರ್ಗಾವಣೆಗೆ ವೈಯಕ್ತಿಕ ಖಾತೆಗಳು ಹಾಗೂ ನಕಲಿ ಸಂಸ್ಥೆಗಳ ಖಾತೆಗಳನ್ನು ಬಳಸಿದ್ದಾರೆ. ಬಳಿಕ ಹಣದಿಂದ ಸ್ಥಿರಾಸ್ತಿಗಳ ಖರೀದಿಸಿ, ವ್ಯವಹಾರದಲ್ಲಿ ಹೂಡಿಕೆ ಹಾಗೂ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.