ಮುಷ್ಕರ ಪರಿಣಾಮ, ಗ್ರಾಪಂನಲ್ಲಿ ಸರ್ಕಾರಿ ಸೇವೆ ವ್ಯತ್ಯಯ

| Published : Oct 10 2024, 02:22 AM IST

ಮುಷ್ಕರ ಪರಿಣಾಮ, ಗ್ರಾಪಂನಲ್ಲಿ ಸರ್ಕಾರಿ ಸೇವೆ ವ್ಯತ್ಯಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ನರನಾಡಿಗಳೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತಿಗಳಲ್ಲಿ ಈಗ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿದೆ. ಹೀಗಾಗಿ ಹಲವಾರು ರೀತಿಯ ಸರ್ಕಾರಿ ಮಟ್ಟದ ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿರುವ ಜನರನ್ನು ಕಾಡುತ್ತಿವೆ. ಕಳೆದ ಸೆ.26ರಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ. ಇದು ಇನ್ನೂ ಮುಂದುವರಿದಿರುವುದರಿಂದ ಗ್ರಾಮಮಟ್ಟದಲ್ಲಿರುವ ಲಕ್ಷಾಂತರ ಜನರಿಗೆ ನಿತ್ಯ ಒಂದಿಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.

ಕೇಶವ ಕುಲಕರ್ಣಿ

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶದ ನರನಾಡಿಗಳೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತಿಗಳಲ್ಲಿ ಈಗ ಆಡಳಿತ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಿದೆ. ಹೀಗಾಗಿ ಹಲವಾರು ರೀತಿಯ ಸರ್ಕಾರಿ ಮಟ್ಟದ ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿರುವ ಜನರನ್ನು ಕಾಡುತ್ತಿವೆ. ಕಳೆದ ಸೆ.26ರಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ. ಇದು ಇನ್ನೂ ಮುಂದುವರಿದಿರುವುದರಿಂದ ಗ್ರಾಮಮಟ್ಟದಲ್ಲಿರುವ ಲಕ್ಷಾಂತರ ಜನರಿಗೆ ನಿತ್ಯ ಒಂದಿಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿವೆ.

ಕಂಪ್ಯೂಟರ್‌ ಪಹಣಿ ಪತ್ರಿಕೆ ದಾಖಲೆಗಳನ್ನು ಪಡೆಯಲು ರೈತರು ಪರದಾಡುತ್ತಿದ್ದಾರೆ. ಜತೆಗೆ ಇ ಸ್ವತ್ತು ಪಡೆಯಲು, ಇ ಉತಾರ ಪಡೆಯಲು, ಇ ಉತಾರ ನೋಂದಣಿ ಮಾಡಲು, ಗ್ರಾಪಂ ಸಭೆ ನಡೆಸಲು ಇಂತಹ ಹತ್ತು ಹಲವಾರು ತೊಂದರೆಗಳು ಗ್ರಾಮೀಣ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ ಪಿಡಿಒಗಳ ಪ್ರತಿಭಟನೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ 11 ವೃಂದಗಳ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾತ್ರವಲ್ಲ, ಈ ಇಲಾಖೆಯ ಮತ್ತಿತರ ವೃಂದದವರು ಕೂಡ ಕೈಜೋಡಿಸಿದ್ದಾರೆ. ಇದರಿಂದಾಗಿ ಸಹಜವಾಗಿ ಶ್ರೀಸಾಮಾನ್ಯನಿಗೆ ಸೌಲಭ್ಯಗಳು ಸಿಗುವಲ್ಲಿ ವ್ಯತ್ಯಯವಾಗುತ್ತಿರುವುದು ತೀವ್ರ ಕಳವಳ ಉಂಟು ಮಾಡಿದೆ. ಕಂಪ್ಯೂಟರ್‌ ಪಹಣಿ ನೀಡಲು ಹಿಂದೇಟು:

ಪಿಡಿಒಗಳು ನಡೆಸುತ್ತಿರುವ ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕಂಪ್ಯೂಟರ್‌ ಪಹಣಿ ಪತ್ರಿಕೆಗಳು ಸೇರಿದಂತೆ ಇನ್ನಿತರೆ ಅಗತ್ಯ ದಾಖಲೆಗಳು ಪಡೆಯಲು ರೈತರು ಪರದಾಡುತ್ತಿದ್ದಾರೆ. ಜಮಖಂಡಿ ತಾಲೂಕಿನ ಹುನ್ನೂರಿನ ಗ್ರಾಪಂನಲ್ಲಿ ಕಂಪ್ಯೂಟರ್‌ ಪಹಣಿ ನೀಡುತ್ತಿಲ್ಲ. ಅದನ್ನು ಪ್ರಶ್ನಿಸಿದರೆ, ಇ-ಸ್ವತ್ತು ದಾಖಲೆ ಪಡೆಯುವಲ್ಲಿ ವಿಳಂಬವಾಗುತ್ತಿರುವುದಕ್ಕೆ ತಂತ್ರಜ್ಞಾನ ಅಳವಡಿಸಿರುವ ಕೇಂದ್ರ ಸರ್ಕಾರದ ಎನ್‌ಐಸಿ ಸೇವೆಯನ್ನು ರದ್ದು ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸುದ್ದಿಯನ್ನು ತೋರಿಸಿ ರೈತರಿಗೆ ಈ ಸೇವೆಯನ್ನು ನೀಡುತ್ತಿಲ್ಲ.

ಪಂಚಾಯತಿ ವ್ಯಾಪ್ತಿಯ ದಾಖಲೆ ಪತ್ರಗಳು, ಬ್ಯಾಂಕ್‌ನ ವ್ಯವಹಾರ, ಸ್ವತ್ತುಗಳ ಖರೀದಿ, ನೋಂದಣಿ, ಮಾರಾಟ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವುದು ಸೇರಿದಂತೆ ಇನ್ನೂ ಅನೇಕ ರೀತಿಯ ಅಗತ್ಯವಾಗಿ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರ ನಡುವೆಯ ಪ್ರತಿಭಟನೆಯಿಂದಾಗಿ ಹಿರಿಯ ಅಧಿಕಾರಿಗಳಿಗೂ ದಾರಿ ತೋಚದಂತಾಗಿದೆ. ಪರ್ಯಾಯ ಮಾರ್ಗ ಕೂಡ ಇಲ್ಲದಂತಾಗಿದೆ. ಆದರೆ, ಇದು ಸಾರ್ವಜನಿಕರಿಗೆ ಸಂಕಟ ತಂದೊಡ್ಡಿದೆ.ಇವೆಲ್ಲದರ ನಡುವೆ ಅ.10ರಂದು ಸಚಿವ ಪ್ರಿಯಾಂಕ ಖರ್ಗೆ ಅವರು ಪ್ರತಿಭಟನಾ ನಿರತರೊಂದಿಗೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ. ಇದು ಯಶಸ್ವಿ ಆಗುತ್ತಾ ಇಲ್ಲವೋ ಎನ್ನುವುದರ ಮೇಲೆಯೇ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಸೇವೆಯ ಲಭ್ಯತೆಯೂ ನಿರ್ಧಾರವಾಗಲಿದೆ.ಎಲ್ಲ ಪಿಡಿಒಗಳು ಮುಷ್ಕರಕ್ಕೆ ಹೋಗಿದ್ದಾರೆ. ಅ.10ರವರೆಗೆ ಗ್ರಾಪಂನ ಸೇವೆಗಳು ದೊರೆಯುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು. ಮುಷ್ಕರ ಮುಗಿದ ನಂತರ ಗ್ರಾಪಂಗಳಲ್ಲಿ ಮೊದಲಿನಂತೆ ಎಲ್ಲ ಸೇವೆಗಳು ದೊರೆಯಲಿವೆ.

- ಸಂಜೀವ ಜುನ್ನೂರ,

ತಾಪಂ ಇಒ.

ಭೂಷಣ ಇ-ಪಹಣಿ ಪತ್ರಿಕೆಗಾಗಿ ಗ್ರಾಪಂ ಕಚೇರಿಗೆ ಅಲೆದಾಡಿ ಸಾಕಾಗಿದೆ. ತಂತ್ರಜ್ಞಾನದಲ್ಲಿ ದೋಷವಿದೆ ಎಂದು ಹೇಳಲಾಗುತ್ತಿದೆ. ಪರ್ಯಾಯ ಮಾರ್ಗ ಕಂಡುಕೊಂಡು ಅಗತ್ಯ ದಾಖಲೆಗಳನ್ನು ನೀಡುವ ಕೆಲಸವಾಗಬೇಕು. ಹಲವಾರು ವ್ಯವಹಾರಗಳು ಗ್ರಾಪಂನ ವಿಳಂಬ ನೀತಿಯಿಂದಾಗಿ ನಿಂತು ಹೋಗಿವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಿರಿಯ ಅಧಿಕಾರಿಗಳು ಕ್ರಮಜರುಗಿಸಬೇಕು.

- ಹಣುಮಂತ,

ಹುನ್ನೂರು ಗ್ರಾಮಸ್ಥ.